ಕೇಂದ್ರ ಸಂಪುಟದಿಂದ ಸದಾನಂದ ಗೌಡ ಔಟ್? ಬಿಜೆಪಿಯ ಉ.ಪ್ರ. ಕಾರ್ಯತಂತ್ರಕ್ಕೆ ಕನ್ನಡಿಗನ ಬಲಿ?

0
888

ನವದೆಹಲಿ(ಜೂನ್ 29): ಮುಂದಿನ ವಾರ, ಅಂದರೆ ಜುಲೈ 4ರಂದು ಕೇಂದ್ರ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಕೇಳಿಬರುತ್ತಿದೆ. ಮತ್ತೊಂದು ವಿಶೇಷವೆಂದರೆ ಕರ್ನಾಟಕದ ಮಾಜಿ ಸಿಎಂ ಹಾಗೂ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಬಹಳಷ್ಟಿದೆ ಎಂದು ಸಿಎನ್’ಎನ್-ಐಬಿಎನ್ ವಾಹಿನಿ ವರದಿ ಮಾಡಿದೆ. ಮುಂಬರಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸಂಪುಟ ಪುನಾರಚನೆ ಕೆಲಸ ಮಾಡಲಿದೆ. ಉತ್ತರಪ್ರದೇಶದ ನಾಲ್ವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಚಿಂತನೆ ನಡೆದಿದೆ.

ಸದಾನಂದ ಗೌಡಗೆ ಯಾಕೆ ಕೊಕ್?

ಕರ್ನಾಟಕದ ಮಾಜಿ ಸಿಎಂ ಆದ ಗೌಡರು ಕೇಂದ್ರಕ್ಕೆ ಯಾವಾಗಲೂ ಸಾಫ್ಟ್ ಟಾರ್ಗೆಟ್ ಆಗಿದ್ದಾರೆ. ಹಿಂದೆ ಅವರನ್ನು ಕೇಂದ್ರ ರೈಲ್ವೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಬಳಿಕ ಮತ್ತೆ ಅವರನ್ನು ಕಾನೂನು ಸಚಿವರನ್ನಾಗಿ ಮಾಡಲಾಯಿತು. ಅಲ್ಲದೇ, ಸದಾನಂದ ಗೌಡರ ಕಾರ್ಯಕ್ಷಮತೆ ಬಗ್ಗೆ ಅಸಮಾಧಾನ ನೆಲಸಿದೆ. ಅವರಿಗೆ ತಮ್ಮ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತರುವಂತಹ ದೊಡ್ಡ ಕಾರ್ಯತಂತ್ರ ಅವರಲ್ಲಿಲ್ಲ. ಯಾವುದಾದರೂ ಕೆಲಸವನ್ನು ಹಿಡಿದು ಮಾಡಿಸುವಷ್ಟು ಕ್ಷಮತೆ ಅವರಲ್ಲಿಲ್ಲ ಎಂಬ ಕೂಗು ಸಂಪುಟದಲ್ಲಿದೆ. ಹೀಗಾಗಿ, ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್’ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ರಾಜ್ಯ ಸಚಿವ ನಿಹಾಲ್ ಚಂದ್ ಅವರನ್ನೂ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ.

ಸಂಪುಟಕ್ಕೆ ವಿವಾದಿತ ನಾಯಕರು?

ಸದಾನಂದ ಗೌಡರ ನಿರ್ಗಮನದಂತೆ ಉತ್ತರಪ್ರದೇಶದ ಕೆಲ ವಿವಾದಾಸ್ಪದ ವ್ಯಕ್ತಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸುದ್ದಿ ಕೇಳಿಬರುತ್ತಿದೆ. ಕೇಂದ್ರ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಪಸಂಖ್ಯಾತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ಯೋಗಿ ಆದಿತ್ಯನಾಥ್ ಅವರು ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಅಲ್ಲದೇ, 2013ರ ಮುಜಾಫರ್’ನಗರ್ ದಂಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾಗುವ ಸಂಜೀವ್ ಬಾಲ್ಯಾನ್ ಅವರೂ ಕೇಂದ್ರ ಮಂತ್ರಿಯಾಗುವ ಭಾಗ್ಯ ಹೊಂದಿದ್ದಾರೆನ್ನಲಾಗಿದೆ. ಸಂಪುಟ ಸೇರಲಿರುವ ಉತ್ತರಪ್ರದೇಶದ ಇತರ ಇಬ್ಬರೆಂದರೆ ಮಹೇಶ್ ಶರ್ಮಾ ಹಾಗೂ ರಾಘವ್ ಲಖನ್’ಪಾಲ್.

ಇದೇ ವೇಳೆ, ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು, ರಾಜಸ್ಥಾನದ ಹಿರಿಯ ಮುಖಂಡ ಅರ್ಜುನ್ ಮೇಘವಾಲ್ ಸೇರಿದಂತೆ ಹಲವು ಹೊಸ ಮುಖಗಳಿಗೆ ಸಂಪುಟ ಭಾಗ್ಯ ಸಿಗಬಹುದೆನ್ನಲಾಗಿದೆ.

ನಾಲ್ಕು ತಿಂಗಳ ಬಳಿಕ ದೊಡ್ಡ ಮಟ್ಟದ ಕತ್ತರಿ?

ಟೈಮ್ಸ್ ನೌ ಸುದ್ದಿ ವಾಹಿನಿ ಪ್ರಕಾರ ಜುಲೈ ಮೊದಲ ವಾರದಂದು ನಡೆಯುವ ಸಂಪುಟ ಪುನಾರಚನೆಯಲ್ಲಿ ಅಲ್ಪಪ್ರಮಾಣದ ಕತ್ತರಿಯಾಗುವ ಸಾಧ್ಯತೆ ಇದೆ. ನಾಲ್ಕು ತಿಂಗಳ ಬಳಿಕ ಸಚಿವರ ಕಾರ್ಯಸಾಧನೆಯನ್ನಾಧರಿಸಿ ದೊಡ್ಡ ಮಟ್ಟದಲ್ಲಿ ಸಂಪೂರ್ಣ ಪುನಾರಚನೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದೇ ವೇಳೆ, ಜುಲೈ 5ರಂದು ಆಫ್ರಿಕಾ ಪ್ರವಾಸಕ್ಕೆ ಮೋದಿ ಹೊರಡುವ ಮುನ್ನ ಮಧ್ಯಂತರ ಪುನಾರಚನೆ ನಡೆದುಹೋಗಬಹುದು. ಈ ನಿಟ್ಟಿನಲ್ಲಿ ಅಮಿತ್ ಶಾ ಮತ್ತು ಅರುಣ್ ಜೇಟ್ಲಿ ಇಬ್ಬರೂ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
Source: suvarnanews