ಖಾದಿ ಕ್ಯಾಲೆಂಡರ್‍ನಿಂದ ಮಹಾತ್ಮಾಗಾಂಧಿ ಹೊರಗೆ, ಮತ್ತೊಂದು ವಿವಾದದಲ್ಲಿ ಮೋದಿ

0
732

ಜನಪ್ರಿಯತೆಯ ಉತ್ತುಂಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ. ನೋಟ್‍ ಬ್ಯಾನ್‍ ನಂತರ ಇದೀಗ ಖಾದಿ ಕ್ಯಾಲೆಂಡರ್ ‍ವಿವಾದ ಅವರನ್ನು ಆವರಿಸಿಕೊಂಡಿದೆ.

ಖಾದಿಯ ರಾಯಭಾರಿಯಾಗಿ ದಶಕಗಳಿಂದ ಮಹಾತ್ಮಗಾಂಧಿ ಅವರನ್ನು ಭಾರತೀಯರು ಗುರುತಿಸಿಕೊಂಡು ಬಂದಿದ್ದಾರೆ. ಆದರೆ ಖಾದಿ ಗ್ರಾಮೋದ್ಯೋಗ ಪ್ರಕಟಿಸಿದ 2017ರ ಕ್ಯಾಲೆಂಡರ್‍ ಮತ್ತು ಡೈರಿಗಳಲ್ಲಿ ಮೋದಿ ಅವರ ಭಾವಚಿತ್ರ ಪ್ರಕಟವಾಗಿದ್ದು, ಇದುವರೆಗೂ ಪ್ರಕಟವಾಗುತ್ತಿದ್ದ ಮಹಾತ್ಮಗಾಂಧಿ ಅವರ ಚಿತ್ರ ನಾಪತ್ತೆಯಾಗಿದೆ.

ಗಾಂಧೀಜಿ ಚರಕದಲ್ಲಿ ನೂಲು ತೆಗೆಯುವ ಚಿತ್ರ ಜಗದ್ವಿಖ್ಯಾತಿ ಪಡೆದಿದೆ. ಇದು ದೇಶೀಯ ಖಾದಿಯ ಬ್ರ್ಯಾಂಡ್‍ ಆಗಿ ದಶಕಗಳಿಂದ ಬಳಸಲಾಗುತ್ತಿದೆ. ಆದರೆ ಕ್ಯಾಲೆಂಡರ್‍ ಮತ್ತು ಡೈರಿಗಳಲ್ಲಿ ಗಾಂಧೀಜಿಯಂತೆ ಮೋದಿ ಚರಕದಿಂದ ನೂಲು ತೆಗೆಯುತ್ತಿರುವಂತೆ ಚಿತ್ರ ತೆಗೆದು ಬಳಸಿಕೊಳ್ಳಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಗಾಂಧೀಯಂತೆ ಫೋಸ್‍ ಕೊಟ್ಟರೆ ನೀವು ಗಾಂಧೀ ಆಗುವುದಿಲ್ಲ. ಇಂತಹ ಕ್ರಮಗಳಿಂದ ನಗೆಪಾಟಿಲಿಗೀಡಾಗುತ್ತೀರಿ ಅಷ್ಟೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಹಾತ್ಮಗಾಂಧೀ ಫಾದರ್‍ ಆಫ್‍ ನೇಷನ್‍ ಆಗಿದ್ದಾರೆ. ಮೋದಿಜಿ ಏನು ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‍ ಉಪಾಧ್ಯಕ್ಷ ರಾಹುಲ್‍ ಗಾಂಧಿ, ಮಂಗಳಯಾನದ ಪ್ರತಿಫಲ ಇದು. ಮಂಗಳಯಾನ ಯಶಸ್ವಿಯಾಗಿದ್ದರ ಲಾಭವನ್ನು ಮೋದಿ ಈ ರೀತಿ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಕ್ಯಾಲೆಂಡರ್‍ ಮತ್ತು ಡೈರಿಗಳಲ್ಲಿ ಗಾಂಧೀ ಚಿತ್ರ ನಾಪತ್ತೆಯಾಗಿ ಮೋದಿ ಭಾವಚಿತ್ರ ಪ್ರಕಟವಾಗಿರುವುದು ವಿವಾದ ಸೃಷ್ಟಿಯಾಗಿರುವುದಕ್ಕೆ ಖಾದಿ ಗ್ರಾಮೋದ್ಯೋಗ ಇಲಾಖೆ ಹಾಗೂ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಖಾದಿ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಕೇವಲ ಗಾಂಧೀ ಅವರ ಚಿತ್ರವೇ ಪ್ರಕಟಿಸಬೇಕು ಎಂಬ ನಿಯಮ ಇಲ್ಲ. ವಿನಾಕಾರಣ ವಿವಾದ ಸೃಷ್ಟಿಸಲಾಗುತ್ತಿದ್ದು, ಆರೋಪಗಳು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

1996, 2002, 2011, 2013 ಮತ್ತು 2016ರ ಕ್ಯಾಲೆಂಡರ್‍ ಗಳಲ್ಲಿ ಗಾಂಧಿ ಅವರ ಭಾವಚಿತ್ರ ಪ್ರಕಟವಾಗಿರಲಿಲ್ಲ. ಇದೀಗ ವಿವಾದ ಸೃಷ್ಟಿಸುವ ಅಗತ್ಯವೇನಿದೆ ಎಂದು ಬಿಜೆಪಿ ಪ್ರಶ್ನಿಸಿದೆ.

ಮೋದಿ ಈಗಿನ ಯುವ ಸಮುದಾಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅವರನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವ ಮೂಲಕ ಖಾದಿಯ ಉತ್ಪನ್ನದ ಜನಪ್ರಿಯತೆ ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದು ಸರಕಾರದ ಮೂಲಗಳು ಹೇಳಿಕೊಂಡಿವೆ.