ನಿಮಗೆ ಜಗತ್ತಿನಲ್ಲೇ ಹೆಚ್ಚು ಐಕ್ಯೂ(IQ) ದಾಖಲಿಸಿದ ಕೊರಿಯನ್ `ಮಹಾಮೇಧಾವಿ‘ ಬಾಲಕನ ಬಗ್ಗೆ ಗೊತ್ತೆ?

0
930

ನಿಮಗೆ ಜಗತ್ತಿನಲ್ಲೇ ಹೆಚ್ಚು ಐಕ್ಯೂ(Iಕಿ) ದಾಖಲಿಸಿದ ಕೊರಿಯನ್ `ಮಹಾಮೇಧಾವಿ‘ ಬಾಲಕನ ಬಗ್ಗೆ ಗೊತ್ತೆ? ಆತನ ಹೆಸರು ಕಿಮ್ ಯುಂಗ್-ಯಾಂಗ್. ಹುಟ್ಟಿದ್ದು 1963ರ ಮಾರ್ಚ್ 7. ಈಗ 53 ವರ್ಷ.

ಮಹಾಮೇಧಾವಿ ಬಾಲಕ
ಒಂದು ವರ್ಷದ ಮಗು ತನ್ನ ಮಾತೃಭಾಷೆಯನ್ನೇ ಸರಿಯಾಗಿ ಕಲಿತಿರುವುದಿಲ್ಲ. ಅಮ್ಮ, ಅಪ್ಪ, ಬ್ಬೆ. ಬ್ಬೆ. ಬ್ಬೆ… ಹೀಗೆ ಚೂರುಪಾರು ಮಾತನಾಡುತ್ತಿದ್ದರೆ ಹೆತ್ತವರಿಗೆ ಖುಷಿಯೋ ಖುಷಿ. ಆದರೆ ದಕ್ಷಿಣ ಕೊರಿಯಾದ ಕಿಮ್ ಯುಂಗ್-ಯಾಂಗ್ ತನ್ನ ಮೊದಲ ವರ್ಷದ ಹುಟ್ಟುಹಬ್ಬದ ಹೊತ್ತಿಗೆ ನಾಲ್ಕು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ! ಕೊರಿಯನ್, ಜಾಪನೀಸ್, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಪಟಪಟನೆ ಹರಟುತ್ತಿದ್ದ! ಅಷ್ಟೇ ಅಲ್ಲ ಆ ಭಾಷೆಗಳಲ್ಲಿ ಬರೆದುದನ್ನೂ ಸಹ ಸರಿಯಾಗಿ ಓದಿಬಿಡುತ್ತಿದ್ದ!!

ಅವನಿಗೆ ನಾಲ್ಕು ವರ್ಷ ವಯಸ್ಸ್ಸಾದಾಗ, ಅಂದರೆ 1967ರ ನವೆಂಬರ್ 2 ರಂದು ಆತ ಜಪಾನೀ ಟಿವಿ ಚಾನೆಲೊಂದರಲ್ಲಿ ಅದ್ಭುತ ಪ್ರದರ್ಶನ ಕೊಟ್ಟ. ಯಾವ ಪ್ರದರ್ಶನ ಗೊತ್ತೆ?
ಇಂಟಿಗ್ರಲ್ ಕ್ಯಾಲ್‍ಕ್ಯುಲಸ್ ಸಮಸ್ಯೆಗಳನ್ನು ಬಿಡಿಸುವುದು! ನಮ್ಮಲ್ಲಿ ಡಿಗ್ರಿ (ಪದವಿ – ಬಿಎಸ್‍ಸಿ) ಮಟ್ಟದ ತರಗತಿಗಳಲ್ಲಿ ಕಲಿಸುವ ಗಣಿತ! ಇದನ್ನು ನೋಡಿದ ಜನರು ದಂಗಾಗಿ ಹೋದರು. ಅಷ್ಟು ಹೊತ್ತಿಗೆ ಇನ್ನೂ ಒಂದು ಬೆಳವಣಿಗೆಯಾಗಿತ್ತು. ಹುಟ್ಟಿದ ಒಂದು ವರ್ಷಕ್ಕೇ ನಾಲ್ಕು ಭಾಷೆಗಳನ್ನು ಕಲಿತಿದ್ದ ಕಿಮ್ 4 ವರ್ಷ ತುಂಬಿದ ನಂತರ 5ನೇ ವರ್ಷದಲ್ಲಿ ಸುಮ್ಮನಿರುವನೆ? ಟಿವಿ ಪ್ರದರ್ಶನದಲ್ಲಿ ತನ್ನ ಹೊಸ ಭಾಷಾ ಜ್ಞಾನವನ್ನೂ ಪ್ರದರ್ಶಿಸಿದ. ಈಗ ಹೊಸದಾಗಿ ಸೇರ್ಪಡೆಯಾಗಿದ್ದ ಭಾಷೆಗಳು: ಚೈನಿಸ್, ಸ್ಪ್ಯಾನಿಷ್, ಆಫ್ರಿಕನ್, ವಿಯೆಟ್ನಮಿಸ್, ಟ್ಯಗೊಲಿಕ್!! ಬರೀ ಮಾತನಾಡಿದ್ದೇ ಅಲ್ಲ, ಈ ಭಾಷೆಗಳಲ್ಲಿ ಆತ ಕವಿತೆಗಳನ್ನೂ ರಚಿಸಿ ತೋರಿಸಿದ! ಮೊದಲು 4 ಅನಂತರ 5, ಹೀಗೆ ಒಟ್ಟು 9 ಭಾಷೆಗಳಲ್ಲಿ 4 ವರ್ಷದ ಜ್ಞಾನ ಪ್ರದರ್ಶಿಸಿದ!
ಗಿನ್ನೆಸ್ ವಿಶ್ವದಾಖಲೆಗಳ ಸಂಸ್ಥೆ ಕಿಮ್‍ನ ಬುದ್ಧಿಶಕ್ತಿಯ (ಐಕ್ಯೂ) ಬಗ್ಗೆ ಅಂದಾಜು ಹಾಕಿತು. ಅದರ ಪ್ರಕಾರ, ಅವನ ಐಕ್ಯೂ 210 ಇತ್ತು!! ಈ ಬಗೆಯ ಬುದ್ಧಿಶಕ್ತಿಯನ್ನು ಏನೆಂದು ಕರೆಯಬೇಕೋ ಗೊತ್ತಿಲ್ಲ!

ಕಿಮ್ 80 ದಿನಗಳ ಮಗುವಾಗಿದ್ದಾಗಲೇ ನಡೆಯಲು ಆರಂಭಿಸಿದನಂತೆ. 2 ವರ್ಷ 4 ತಿಂಗಳಾದಾಗ ಡೈರಿ (ದಿನಚರಿ) ಬರೆಯಲು ಆರಂಭಿಸಿದನಂತೆ! ಅದರಲ್ಲಿ ತತ್ತ್ವಶಾಸ್ತ್ರ, ಹೊರಗೆ ಕಾಣುವ ಮೋಡಗಳು – ಹೀಗೆ ನಾನಾ `ದೊಡ್ಡ’ ವಿಷಯಗಳ ಬಗ್ಗೆ ಬರೆದಿದ್ದಾನೆ! ಅವನ ಬಾಲಪ್ರತಿಭೆ ಕಂಡು ಅವನನ್ನು ಅಮೆರಿಕದ ಕಾಲೇಜಿನಲ್ಲಿ ಓದಿಸಲು ಅನೇಕರು ಮುಂದೆ ಬಂದರು. ಆದರೆ ಯಾರೂ ಸರಿಯಾದ ಸಹಾಯ ಮಾಡಲಿಲ್ಲ. ಆದರೂ ಅವನು 3 ರಿಂದ 6 ವರ್ಷಗಳ ಕಿಶೋರನಾಗಿದ್ದಾಗಲೇ ದಕ್ಷಿಣ ಕೊರಿಯಾದ ಹನ್ಯಾಂಗ್ ವಿಶ್ವವಿದ್ಯಾಲಯ ಸೇರಿ ಭೌತಶಾಸ್ತ್ರವನ್ನು ಓದಿದ. 7 ವರ್ಷದವನಾಗಿದ್ದಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ’ ಅವನನ್ನು ಆಹ್ವಾನಿಸಿತು. ಅಮೆರಿಕಕ್ಕೆ ಹೋಗಿ 16ನೇ ವರ್ಷದಲ್ಲಿ ಕೊಲರೇಡೋ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದ ಪಿಎಚ್‍ಡಿ (ಡಾಕ್ಟರೇಟ್) ಪಡೆದ. ಕೊಲರೇಡೋದಲ್ಲಿ ಓದುವಾಗಲೇ 4 ವರ್ಷಗಳ ಕಾಲ ನಾಸಾದಲ್ಲಿ ಸಂಶೋಧನೆ ಮಾಡಿದ. ಪಿಎಚ್‍ಡಿ ನಂತರ 1978ರಲ್ಲಿ ಸ್ವದೇಶಕ್ಕೆ ಮರಳಿ ಸಿವಿಲ್ ಎಂಜಿನಿಯರಿಂಗ್ ಓದಿದ. ಅದರಲ್ಲೂ ಡಾಕ್ಟರೇಟ್ ಪಡೆದ. ಜಗತ್ತಿನ ಪ್ರಸಿದ್ಧ ವಿಶ್ವವಿದ್ಯಾಲಯಗಳು ಅವನನ್ನು ಪ್ರ್ರೊಫೆಸರ್ ಹುದ್ದೆಗೆ ಆಹ್ವಾನಿಸಿದವು. ಅವುಗಳನ್ನು ಒಪ್ಪದೇ ಸ್ವದೇಶದ ಒಂದು ವಿಶ್ವವಿದ್ಯಾಲಯ ಸೇರಿ ಬೋಧಕನಾದ.