ತೆಲುಗಿನ “ಮಹಾನಟಿ” ಸಾವಿತ್ರಿಯವರ ಬಗ್ಗೆ ತಿಳಿದುಕೊಳ್ಳಿ, ಅವರಲ್ಲಿನ ಮಾನವತಾ ವ್ಯಕ್ತಿತ್ವ ನಿಮಗೆ ಸ್ಪೂರ್ತಿಯಾಗುತ್ತೆ!!

0
725

ನಮ್ಮ ಉತ್ತಮ ವ್ಯಕ್ತಿತ್ವ ಜನರನ್ನ ಹೇಗೆಲ್ಲ ಆಕರ್ಷಿಸುತ್ತೆ, ಅವರು ನಮ್ಮನ್ನ ಮನಸಾರೆ ಗೌರವಿಸೋ ಹಾಗೆ ಮಾಡುತ್ತೆ ಅನ್ನೋದಕ್ಕೆ ಉತ್ತಮ ಉದಾಹರಣೆ ಅಂದ್ರೆ ದಕ್ಷಿಣಭಾರತ ಚಿತ್ರರಂಗದ ಪ್ರಖ್ಯಾತ ಮಹಾನಟಿ ಸಾವಿತ್ರಿ ಅಲಿಯಾಸ್ ನಿಸ್ಸಂಕರ ಸಾವಿತ್ರಿ ಗಣೇಶನ್. ಇವರು ಹುಟ್ಟಿದ್ದು, ಮರಣ ಹೊಂದಿದ್ದು, ಚಿತ್ರರಂಗದಲ್ಲಿ ಸಾಧನೆ ಮಾಡಿದ್ದು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದದ್ದು, ಹಾಗೂ ಮಹಾನಟಿ ಅನ್ನೋ ಬಿರುದಾಂಕಿತರಾದದ್ದು ಎಲ್ಲವನ್ನೂ ತಿಳಿಸುವುದು ಮುಖ್ಯವಾದರೂ ಈ ಲೇಖನದಲ್ಲಿ ಪ್ರಸ್ತುತ ಅನಿಸೋದು ಅವರ ಸಮಾಜಮುಖಿ ಕಾರ್ಯಗಳು, ಹಾಗೂ ಅವರೊಳಗಿನ ದಿವ್ಯ ದೇಶಪ್ರೇಮದ ಬಗ್ಗೆ ತಿಳಿಸೋದು.

ಆಂಧ್ರಪ್ರದೇಶದ ಪಡ್ಡಿವಾರಿಪಾಲೇಂ ಅನ್ನೋ ಪುಟ್ಟ ಹಳ್ಳಿಯಲ್ಲಿ ಮಹಾನಟಿ ಶ್ರೀಮತಿ ಸಾವಿತ್ರಿ ಗಣೇಶ್ ಅವರು 1962 ರಲ್ಲಿ ತಮ್ಮ ಸ್ವಂತ ಹಣದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಶಾಲೆಯೊಂದನ್ನು ಕಟ್ಟಿಸ್ತಾರೆ. ಮುಂದೆ ಸರ್ಕಾರದ ಅನುದಾನದಲ್ಲಿ ಈ ಶಾಲೆ ನಡೆಯಲಾರಂಭಿಸುತ್ತೆ. ನಂತರದ ದಿನಗಳಲ್ಲಿ ಸರ್ಕಾರ ಬದಲಾದಾಗ ಈ ಶಾಲೆಗೆ ನೀಡುತ್ತಿದ್ದ ಅನುದಾನ ನಿಂತುಹೋಗುತ್ತೆ, ಶಿಕ್ಷಕರೆಲ್ಲ ಸಾವಿತ್ರಿಯವರು ಕಟ್ಟಿಸಿದ ಶಾಲೆ ಎಂಬ ಅಭಿಮಾನದ ಒಂದೇ ಕಾರಣಕ್ಕೆ ಸುಮಾರು ಐದು ತಿಂಗಳ ಕಾಲ ಸಂಬಳವಿಲ್ಲದಿದ್ದರೂ ಕಾರ್ಯ ನಿರ್ವಹಿಸ್ತಾರೆ. ಈ ವಿಷಯ ಹೇಗೋ ಸಾವಿತ್ರಿ ಅವರ ಕಿವಿಗೆ ಬೀಳುತ್ತಿದ್ದಂತೆ ಅವರು ಶಾಲೆಯ ಮುಖ್ಯಸ್ಥರನ್ನ ಮದ್ರಾಸಿಗೆ ಕರೆಸಿಕೊಂಡು ಎಲ್ಲ ಸಿಬ್ಬಂದಿಗಳ ಇದುವರೆಗೆ ತಡೆಹಿಡಿದಿದ್ದ ವೇತನವನ್ನು ಕೊಟ್ಟು ಕಳಿಸ್ತಾರೆ. 1975 ರ ಆಸುಪಾಸಿನಲ್ಲಿ ನಡೆದ ಘಟನೆ ಇದು. ಆ ಕಾಲಕ್ಕೆ ಅವರು ಕೊಟ್ಡದ್ದು 104000 ರೂಪಾಯಿಗಳು, ಅಂದ್ರೆ ಈಗ ಅದು ಸರಿಸುಮಾರು 40 ಲಕ್ಷಕ್ಕೆ ಸಮ.

ಇನ್ನೊಂದು ಘಟನೆ ಏನಪ್ಪ ಅಂದ್ರೆ, 1965 ರಲ್ಲಿ ಎರಡನೇ ಬಾರಿ ಭಾರತ-ಪಾಕ್ ಯುದ್ಧ ನಡೆಯುತ್ತಿದ್ದ ಸಂದರ್ಭ. ಭಾರತದ ಸೈನ್ಯದಲ್ಲಿ ಯುದ್ಧ ಸಾಮಾಗ್ರಿಗಳೆಲ್ಲ ಬರಿದಾಗ್ತಾ ಯುದ್ಧವನ್ನು ಎದುರಿಸಲು ಸೈನಿಕರು ಪರದಾಡುವಾಗ ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತುಂಬಾನೇ ಚಿಂತೆಯಲ್ಲಿ ಮುಳುಗಿದ್ದ್ರು. ನಮ್ಮ ಸೈನಿಕರ ಕಷ್ಟ ಸಾವಿತ್ರಿ ಅವರ ಅರಿವಿಗೆ ಬಂದದ್ದೇ ತಡ ನೇರವಾಗಿ ಶಾಸ್ತ್ರಿ ಅವರನ್ನು ಭೇಟಿಯಾಗುವ ಅವಕಾಶ ಪಡೆದುಕೊಂಡು ಹೋಗಿ ಅವತ್ತು ಮಾಂಗಲ್ಯಸರವೊಂದನ್ನು ಹೊರತುಪಡಿಸಿ ತಾವು ಧರಿಸಿದ ಎಲ್ಲ ಆಭರಣಗಳನ್ನು ಶಾಸ್ತ್ರಿ ಅವರಿಗೆ ಒಪ್ಪಿಸಿ, ಇದು ನನ್ನ ಕಡೆಯಿಂದ ದೇಶವನ್ನು ಕಾಪಾಡ್ತಿರೋ ಸೈನಿಕರಿಗೆ ಅರ್ಪಣೆ ಎಂದು ಹೇಳ್ತಾರೆ. ಅಕ್ಷರಶಃ ಅವತ್ತು ಶಾಸ್ತ್ರಿ ಅವರು ಹೆಮ್ಮೆಯಿಂದ ಸಾವಿತ್ರಿ ಅವರನ್ನು ನೀವೊಬ್ಬ ಮಹನೀಯರು ಎಂದು ಹೇಳಿ ಕೈ ಮುಗಿಯುತ್ತಾರೆ. ಇಂಥಾ ದೇಶಾಭಿಮಾನವನ್ನು ಇಟ್ಟುಕೊಂಡಿದ್ದ ಸಾವಿತ್ರಿ ಅವ್ರಿಗೆ ಆಗ ಕೇವಲ 28 ವರ್ಷ.

ಇಂಥದ್ದೊಂದು ವ್ಯಕ್ತಿತ್ವವೇ ಸಾವಿತ್ರಿ ಅವರನ್ನು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದು. ಈ ಎರಡು ಉದಾಹರಣೆಗಳಷ್ಟೇ ಸಾವಿತ್ರಿ ಅವ್ರ ವ್ಯಕ್ತಿತ್ವನ್ನು ಹೇಳೋದಿಲ್ಲ, ನೂರಾರಿವೆ ಉದಾಹರಣೆಗಳು, ಇವು ಬರೀ ಮುನ್ನುಡಿಗಳಷ್ಟೇ. ಪದ್ಮಶ್ರೀ ಪುರಸ್ಕೃತೆ ಸಾವಿತ್ರಿ ಮಹಾನಟಿಯೂ ಹೌದು, ಮಹಾಪಾಠವೂ ಹೌದು.