ಧರ್ಮಸ್ಥಳಕ್ಕೆ ಹೋಗುವವರು ಹೊರನಾಡು ದೂರ, ಹೋಗಕ್ಕಾಗಲ್ಲ ಅಂತ ಬೇಸರ ಪಡ್ಕೊಬೇಡಿ…ಧರ್ಮಸ್ಥಳದ ಹತ್ತಿರವೇ ಇದೆ ಹೊರನಾಡಿನ ಪ್ರತಿರೂಪ ಈ ಹೊಸನಾಡ ಅನ್ನಪೂರ್ಣೇಶ್ವರಿ..

0
3028

ಕರಾವಳಿಯ ಏಕೈಕ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರವೆಂದು ಖ್ಯಾತಿವೆತ್ತ ಈ ಕೊಡ್ಯಡ್ಕದ ಹೊಸನಾಡ ಶ್ರೀ ಅನ್ನಪೂರ್ಣೇಶ್ವರಿಯ ದರ್ಶವಾಗುತ್ತಿದಂತೆ ಸಾಕ್ಷಾತ್ ಹೊರನಾಡ ಅನ್ನಪೂರ್ಣೇಶ್ವರಿಯೇ ನಮ್ಮ ಕಣ್ಮುಂದೆ ನಿಂತಿರುವಂತೆ ಭಾಸವಾಗುತ್ತದೆ.

ಕಾರ್ಕಳದಿಂದ ಮೂಡಬಿದ್ರೆಗೆ ಸಾಗುವ ಹಾದಿಯಲ್ಲಿ ಮೂಡಬಿದ್ರೆಗೆ ಇನ್ನು ಮೂರು ಕಿಮಿ ಇರುವಾಗಲೇ ಅಲಂಗಾರು ಎಂಬಲ್ಲಿ ಪಶ್ಚಮಕ್ಕೆ ಕೇವಲ ಮೂರು ಕಿಮಿ ದೂರದಲ್ಲಿರುವುದೇ ಈ ಕೊಡ್ಯಡ್ಕದ ಹೊಸನಾಡ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ.

ಸದಾ ಹಚ್ಚಹಸುರಿನ ಪ್ರಶಾಂತ ಪರಿಸರವನ್ನೊಳಗೊಂಡ ಈ ಕ್ಷೇತ್ರಕ್ಕೆ ಕಟೀಲಿನಿಂದಲೂ ಬರಬಹುದು. ಕಟೀಲಿನಿಂದ ಜಾರಿಗೆ ಕಟ್ಟೆ ಮಾರ್ಗದಲ್ಲಿ ೨೨ ಕಿಮಿ ಕ್ರಮಿಸಿದರೆ ಈ ದಿವ್ಯಸನ್ನಿಧಿಯನ್ನು ತಲುಪಬಹುದು. ಹೊರನಾಡು ಕ್ಷೇತ್ರವು ಮಲೆನಾಡಿನ ಹಚ್ಚ ಹಸುರಿನ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದರೆ ಈ ಹೊಸನಾಡು ಕ್ಷೇತ್ರವು ಕರಾವಳಿಯ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತಿದೆ.

ಕೊಡ್ಯಡ್ಕದ ಶ್ರೀ ಜಯರಾಮ ಹೆಗ್ಗಡೆಯವರು ಈ ಕ್ಷೇತ್ರದ ಸ್ಥಾಪಕರು. ತಮ್ಮ ಆರಾಧ್ಯ ದೈವವಾದ ಶ್ರೀ ಹೊರನಾಡ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಇವರು ೧೯೯೨ ರಲ್ಲಿ ಸಕುಟುಂಬ ಸಪರಿವಾರ ಹೋಗಿದ್ದಾಗ ಅಲ್ಲಿ ಪವಾಡವೆಂಬಂತೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯಿಂದಲೇ ಸ್ವಯಂ ಪ್ರೇರಿತರಾಗಿ ಈ ಮಹಾ ಕ್ಷೇತ್ರ ನಿರ್ಮಾಣಕ್ಕೆ ಕಾರಣರಾದರು. ನಂತರ ಕಟೀಲು ಗೋಪಾಲಕೃಷ್ಣದ ಆಸ್ರಣ್ಣರ ಪ್ರೋತ್ಸಾಹದಿಂದ ಸುಮಾರು ೧೯೯೬ ರ ವೇಳೆಗೆ ಉಡುಪಿ ಪೇಜಾವರದ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸಾರಥ್ಯದಲ್ಲಿ ಈ ಮಹಾನ್ ಕ್ಷೇತ್ರಕ್ಕೆ ಒಂದು ಹೊಸ ಆಯಾಮ ಬಂದಿತು. ಅಂದಿನಿಂದ ಹಂತ ಹಂತವಾಗಿ ಎಲ್ಲಾ ರೀತಿಯ ಬೆಳವಣಿಗೆಯನ್ನು ಕಾಣುತ್ತ ಅಸಂಖ್ಯಾತ ಭಕ್ತರನ್ನು ತನ್ನೆಡಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ದೇಗುಲವನ್ನು ಪ್ರವೇಶಿಸುತ್ತಿದ್ದಂತೆ ಸೌಮಾರು ೪೦೦ ಮಂದಿ ಭಕ್ತರು ಆಸೀನರಾಗಬಹುದಂತಹ ಭವ್ಯವಾದ ಒಳಾಂಗಣ, ಆಳೆತ್ತರ ನಿಂತಿರುವ ದಿವ್ಯ ತೇಜಸ್ಸನ್ನೊಳಗೊಂಡ ಶ್ರೀ ಅನ್ನಪೂರ್ಣೇಶ್ವರಿಯ ಭವ್ಯ ಮೂರ್ತಿಯನ್ನೊಳಗೊಂಡ ಗರ್ಭಗುಡಿಯನ್ನು ಕಾಣಬಹುದು. ದೇಗುಲದ ಇಕ್ಕೆಲಗಳಲ್ಲಿ ಗಣಪತಿ, ಆಂಜನೇಯ, ಶ್ರೀ ನಾಗ ಸನ್ನಿಧಿ, ನವಗ್ರಹ ಮಂದಿರವಲ್ಲದೆ ತುಳಸಿ ಪೀಠ ಮತ್ತು ಶ್ರೀಶಂಕರರ ಹಾಗು ಮಧ್ವಾಚಾರ್ಯರ ಮೂರ್ತಿಗಳನ್ನು ಕಾಣಬಹುದು.
ಅನ್ನಪೂರ್ಣ ಮತ್ತು ವೈಷ್ಣವಿ ಎಂಬ ಎರಡು ಭವ್ಯವಾದ ಅಣ್ಣ ಛತ್ರಗಳಲ್ಲಿ ಒಮ್ಮೆಲೇ ಸುಮಾರು ಒಂದು ಸಾವಿರ ಭಕ್ತರು ಏಕಕಾಲದಲ್ಲಿ ಕುಳಿತು ದೇವಿಯ ಪ್ರಸಾದವನ್ನು ಮಧ್ಯಾಹ್ನ ೩ರ ವರೆಗೂ ಊಟದ ರೂಪದಲ್ಲಿ ಪಡೆಯಬಹುದು.

ಇನ್ನು ಹೊರಾಂಗಣದಲ್ಲಿ ಒಂದು ಸುಂದರ ಉದ್ಯಾನವಿದೆ. ಹಾಗು ಪುಟ್ಟ ಮೃಗಾಲಯವಿದೆ. ಇಲ್ಲಿ ಆನೆ, ಕುದುರೆ, ಜಿಂಕೆ, ಕಡವೆ, ಕಾಡುಬೆಕ್ಕು, ನವಿಲು, ಪಾರಿವಾಳಗಳನ್ನೂ ಕಾಣಬಹುದು. ಆನೆಕೆರೆಯೊಂದು ದೇವಿಯ ಸನ್ನಿಧಾನದಲ್ಲಿರುವ ಕೆರೆಯಾಗಿದ್ದು ಹಿಂದೆ ಆನೆಗಳು ಈ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದವೆಂಬ ಐತಿಹ್ಯವಿದೆ. ಈಗ ಬೃಹದಾಕಾರವಾದ ಶ್ರೀ ಆಂಜನೇಯ ಸ್ವಾಮಿಯ ಭವ್ಯ ಮೂರ್ತಿಯೊಂದು ದೇಗುಲದ ಮುಂಬಾಗದಲ್ಲಿ ರೂಪುಗೊಂಡಿದೆ. ಇಲ್ಲಿ ಕರಾವಳಿ ನಾಡಿನ ವೈಭವಯುತ ಉತ್ಸವವಾದ ನಾಗ ಮಂಡಲವು ಸಹ ಪರಂಪರೆಯ ಪ್ರತೀಕವಾಗಿ ಸಾಗುತ್ತ ಬಂದಿದೆ.

ಬೇಸಿಗೆ ರಜಾದಿನಗಳು ಪ್ರ್ರಾರಂಭವಾಗುತ್ತಿದಂತೆಯೇ ಅನೇಕ ಭಕ್ತರು ಈ ಹೊಸನಾಡ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗುತ್ತಾರೆ.

Also read: ಹಿಂದೂ ಧರ್ಮದ ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥವರಿತು, ತಾಯಿ ಗಾಯತ್ರಿ ದೇವಿಯ ಕೃಪೆಗೆ ಪಾತ್ರರಾಗಿ ಪುನೀತರಾಗಿ..