ಕೋಲಾಟ

0
931

ಬಹುಶ ಕೋಲಾಟ ಇಲ್ಲದ ಊರುಗಳೇ ಇಲ್ಲ. ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಕೋಲಾಟ ರೂಢಿಯಲ್ಲಿದೆ. ಸುಗ್ಗಿಯ ದಿನಗಳಲ್ಲಿ ಬೆಳದಿಂಗಳ ರಾತ್ರಿಗಳಲ್ಲಿ ಅಂದಂದಿನ ದಂದುಗಕ್ಕೆ ಮೈಸೋತು ಮನ ಸೋತ ಮಂದಿ ಮನರಂಜನೆಗಾಗಿ ಕೋಲು ಹುಯ್ಯುವುದುದಂಟು. ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಸುಲಭ ಅಳತೆಯ ಕೋಲುಗಳನ್ನು ಹಿಡಿದು, ಕಾಲಿಗೆ ಗಜ್ಜೆ ಕಟ್ಟಿ, ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾ ಕೋಲು ಹುಯ್ಯುವ ರೀತಿ ಆಕರ್ಷಣೀಯವಾದುದು.

ಗಂಡಸರು ಮತ್ತು ಹೆಂಗಸರು ಪ್ರತ್ಯೇಕವಾಗಿ ಇಲ್ಲವೆ ಒಟ್ಟಾಗಿ ಸೇರಿ ಎದುರುಬದುರಾಗಿ ನಿಂತು ಕೈಲ್ಲಿ ಹಿಡಿದ ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿ, ಸೊಂಟದ ಹಿಂಭಾಗ, ಮೊಳಕಾಲ ಬಳಿ, ಕಾಲಿಗೆ ಕೆಳಗೆ ಹುಯ್ಯುತ್ತಾ ಅಥವಾ ಸಂಗಾತಿಗಳು ಹಿಡಿದಿರುವ ಕೋಲುಗಳಿಗೆ ವಿವಿಧ ವಿನ್ಯಾಸಗಳಲ್ಲಿ, ಲಯಗಳಲ್ಲಿ ತಾಡಿಸುತ್ತಾ, ಹಾಡುತ್ತಾ ಕುಣಿಯುವ ಕುಣಿತವೇ ಕೋಲಾಟ. ಕ್ರಮಬದ್ಧವಾದ ಪರಸ್ಪರ ಕೋಲುಗಳ ತಾಡನ, ಗೆಜ್ಜೆ ಕಟ್ಟಿದ ಕಾಲುಗಳ ಲಯಬದ್ಧ ಪದಗತಿ ಮತ್ತು ಹಿನ್ನಲೆಯ ಹಾಡುಗಳು ಇವು ಮೂರರಿಂದಾಗಿ ಕೋಲಾಟವು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

ಕೋಲಾಟಕ್ಕೆ ಇಂತಿಷ್ಟೇ ಜನರಿರಬೇಕೆಂಬ ನಿಯಮವೇನಿಲ್ಲ. ಆದರೆ ಸಮಸಂಖ್ಯೆಯಲ್ಲಿರಬೇಕು. ಅಷ್ಟೆ. ಕೋಲು ಹಿಡಿಯುವ ಮುನ್ನ ಕಲಾವಿದರುಗಳೆಲ್ಲಾ ವರ್ತುಲಾಕಾರವಾಗಿ ಸೇರಿ ರಂಗದ ಮಧ್ಯೆ ಕೋಲುಗಳ್ನು ಇರಿಸಿ, ಪೂಜಿಸಿ, ಕೋಲು ಮೇಳದ ಗುರುವಿಗೆ ವಂದಿಸಿ ತಮಗಿಷ್ಟವಾದ ಪ್ರಕಾರಕ್ಕೆ ಅನುಗುಣವಾಗಿ ಕೋಲಾಟವಾಡಲು ಪ್ರಾರಂಭಿಸುತ್ತಾರೆ.

ಕೋಲಾಟಕ್ಕೆ ವೇಷಭೂಷಣ ಇರಬೇಕಿಲ್ಲ ಎಂದು ಕೂಡ ಹೇಳಬಹುದು. ಇತ್ತೀಚೆಗೆ ಬಯಲು ಸೀಮೆಯಲ್ಲಿ ಹಾಗೇ ಆಗಿದೆ. ಬಿಳಿಯ ಅಂಗಿ (ಬನಿಯನ್) ಬಣ್ಣದ ಚಡ್ಡಿ, ತಲೆಗೆ ಮತ್ತು ನಡುವಿಗೆ ಬಣ್ಣದ ವಸ್ತ್ರ, ಕಾಲಿಗೆ ಗಜ್ಜೆ – ಇವು ದಕ್ಷಿಣ ಭಾಗದ ಬಯಲು ಸೀಮೆಯ ಸಾಮಾನ್ಯ ವೇಷಭೂಷಣಗಳು. ಉತ್ತರ ಕರ್ನಾಟದಲ್ಲಾದರೆ ಬಿಗಿದು ಕಟ್ಟಿದ ಕಚ್ಚೆ (ಕಾಸೆ) ತಲೆಗೆ ಟೋಪಿ ನಡುವಿಗೆ ವಸ್ತ್ರ ಕಾಲಿಗೆ ಗೆಜ್ಜೆ ಇವಿಷ್ಟು ಇರುತ್ತವೆ.

ಆದರೆ ಮಲೆನಾಡು ಮತ್ತು ಕರಾವಳಿಗಳಲ್ಲಿಯ ವೇಷಭೂಷಣಗಳು ಸಂಪೂರ್ಣ ಭಿನ್ನ. ಅದರಲ್ಲೂ ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡದ ಬುಡಕಟ್ಟು ಜನರಲ್ಲಿ ಕೋಲಾಟ ಒಂದು ಆರಾಧನೆಯಾಗಿಯೇ ಉಳಿದು ಬಂದಿರುವ ಕಾರಣ ಅವರ ವೇಷಭೂಷಣಗಳೂ ಸಾಂಪ್ರದಾಯಿಕವಾಗಿಯೇ ಇರುತ್ತವೆ. ಮುಖ್ಯ ಬಣ್ಣ, ತಲೆಗೆ ಮುಂಡಾಸು ಮುಂತಾದ ಬಣ್ಣ ಬಣ್ಣದ ಶೃಂಗಾರ ಇದ್ದೇ ಇರುತ್ತದೆ. ಕೆಲವು ಬುಡಕಟ್ಟುಗಳಲ್ಲಿ ಗಂಡಸರು ಲಂಗಕಟ್ಟು ಅಥವಾ ಸೀರೆಯನ್ನೇ ಉಟ್ಟು ಎತ್ತಿ ಕಟ್ಟಿಕೊಂಡು ಕೋಲಾಟ ಆಡುವುದಿದೆ. ಕೋಲುಗಳನ್ನು ಕೂಡ ಅಲಂಕರಿಸಲಾಗುತ್ತದೆ.

ದಕ್ಷಿಣ ಕರ್ನಾಟಕದಲ್ಲಿ ಕೋಲುಗಳ ಸಪ್ಪಳವೇ ಹಾಡಿಗೆ ಪೂರಕವಾದ ತಾಳವಾಗುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಮದ್ದಲೆ, ಡಪ್ಪು, ತಬಲಾ, ಢಕ್ಕೆ ಹಾಗೂ ಕಂಚಿನ ತಾಳಗಳನ್ನು ಬಳಸುವುದೂ ಉಂಟು. ಕರಾವಳಿಯಲ್ಲಿ ಗುಮಟೆ ಹಾಗೂ ಜಾಗಟೆಯನ್ನು ಕೋಲಾಟಕ್ಕೆ ಹಿನ್ನಲೆಯಾಗಿ ಬಳಸುವುದು ಕಂಡು ಬರುತ್ತದೆ. ಮೈಸೂರಿನ ಒಂದೆರಡು ಕಡೆ ಕೋಲಾಟದ ಹಿನ್ನಲೆಗೆ ತಮಟೆ ನುಡಿಸುವ ಪರಿಪಾಠವೂ ಇದೆ.

ಸುಮಾರು ಹತ್ತರಿಂದ ಹದಿನಾರು ಜನ ಕಲಾವಿದರು ಭಾಗವಹಿಸುವ ಕೋಲಾಟದಲ್ಲಿ ಹತ್ತಾರು ವೈವಿಧ್ಯಗಳಿವೆ. ಹೆಜ್ಜೆ ಹಾಕುವ ಮತ್ತು ಅದನ್ನು ಬದಲಿಸುವ ವಿಧಾನವನ್ನು ಅನುಸರಿಸಿ ಹಾಗೂ ಒಂದೆಡೆ ಸೇರುವ ಅಥವಾ ಬೇರ್ಪಡುವ ಮತ್ತು ತಿರುಗಿನ ವಿನ್ಯಾಸವನ್ನು ಅನುಸರಿಸಿ ಕೋಲಾಟದ ವಿಧಗಳನ್ನು ವಿಂಗಡಿಸಬೇಕಾಗುತ್ತದೆ. ಸಾಮಾನ್ಯವಾಗಿ ನಿಧಾನಕ್ಕೆ ಒಂದೊಂದು ಹೆಜ್ಜೆಯಿಂದ ಆರಂಭವಾಗುವ ಕೋಲಾಟ ತೀವ್ರವಾದ ಗತಿಗೆ ಬಂದು ನಿಲ್ಲುವಾಗ ಮೂರೆಜ್ಜೆಯ ಪ್ರಮಾಣಕ್ಕೆ ಬಂದಿರುತ್ತದೆ.