ಕೋಲಾರದ ಹಾಸ್ಟೆಲ್ ಗಳ ಮೇಲೆ ಖಡಕ್ ಅಧಿಕಾರಿ ಮಣಿವಣ್ಣನ್ ನೇತೃತ್ವದ ತಂಡದಿಂದ ದಾಳಿ!!!

0
698

ಕೋಲಾರದ ಹಾಸ್ಟೆಲ್ ಗಳ ಮೇಲೆ ಮಣಿವಣ್ಣನ್ ನೇತೃತ್ವದ ತಂಡದಿಂದ ದಾಳಿ; ಹಾಸ್ಟೆಲ್ಗಳಿಗೆ ಬಿಡುಗಡೆಯಾದ ದುಡ್ಡನ್ನು ಜೇಬಿಗಿಳಿಸಿದ ಐವರು ಅಧಿಕಾರಿಗಳು ಸಸ್ಪೆಂಡ್ !

ಕೋಲಾರ ಸಮಾಜ ಕಲ್ಯಾಣ ಇಲಾಖೆಯಲ್ಲಿ, ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ನಡೆಯಲಾಗಿದ್ದ ಭ್ರಷ್ಟಾಚಾರದ ಕುರಿತು ಜಿಲ್ಲಾಧಿಕಾರಿ ಡಾ.ತ್ರಿಲೋಕ್ ಚಂದ್ರ ವರದಿ ಸಲ್ಲಿಸಿರುವ ಬೆನ್ನಲ್ಲೇ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಮಣಿವಣ್ಣನ್ ಮತ್ತು ಎ.ಡಿ.ಜಿ.ಪಿ.ಸುನಿಲ್ ಅಗರ್ವಾಲ್ ನೇತೃತ್ವದ ತಂಡ ಕೋಲಾರದ ಹಾಸ್ಟೆಲ್ ಗಳಿಗೆ ದಾಳಿ ನಡೆಸಿ ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದೆ ಎಂದು ನಮ್ಮ ಮೂಲಗಳು ತಿಳಿಸಿವೆ.

350 ಅಧಿಕಾರಿಗಳ ಬೃಹತ್ ಕಾರ್ಯಾಚರಣೆ !

ಭ್ರಷ್ಟಾಚಾರವೆಸಗುತ್ತಿದ್ದ ಕೆಲ ಪಟ್ಟಭದ್ರರ ವಿರುದ್ಧ ‘ಖಡಕ್’ ಐ.ಎ.ಎಸ್ ಅಧಿಕಾರಿ ಮಣಿವಣ್ಣನ್ ಮತ್ತು ಅವರ ಜೊತೆ 350 ಅಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಿಲ್ಲೆಯ ವಿವಿಧ ಹಾಸ್ಟೆಲ್ ಗಳ ಮೇಲೆ ಈ ತಂಡ ದಾಳಿ ನಡೆಸಿ ಮಹತ್ವದ ದಾಖಲೆ ಮತ್ತು ಮಾಹಿತಿ ಕಲೆಹಾಕಿದ್ದಾರೆ.

ತಿಮಿಂಗಲಗಳು ಸಸ್ಪೆಂಡ್ !

ಸಾಮಗ್ರಿ ಖರೀದಿ ಹಗರಣದಲ್ಲಿ ತಪ್ಪೆಸೆಗಿರುವ ಮಾಲೂರಿನ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ರಾಮಸ್ವಾಮಿ, ಕೋಲಾರದ ಅನುಸೂಯಮ್ಮ, ಶ್ರೀನಿವಾಸಪುರದ ಶಾಂತಮ್ಮ, ಮುಳಬಾಗಲಿನ ಕಸ್ತೂರಿ ಬಾಯಿ, ಬಂಗಾರಪೇಟೆಯ ಶಿವಕುಮಾರ್ ರನ್ನು ಈಗಾಗಲೇ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.

ಸಮಾಜ ‘ಕಲ್ಯಾಣವೋ’; ಸ್ವಂತ ‘ಕಲ್ಯಾಣವೋ’

ಸರ್ಕಾರದ ಹಾಸ್ಟೆಲ್ಗಳನ್ನು ಮೇಲ್ದರ್ಜೆಗೆ ಏರಿಸಲು ಮತ್ತು ಅವಶ್ಯಕವಾದ ಪೀಠೋಪಕರಣ, ಅಗತ್ಯ ವಸ್ತುಗಳು, ಸಾಮಗ್ರಿಗಳನ್ನು ಕಾನೂನುರೀತ್ಯಾ, ಇಲಾಖೆಯ ನಿಯಮಾವಳಿಗಳ ತಕ್ಕಂತೆ ಖರೀದಿ ಮಾಡಬೇಕಿದ್ದ ಅಧಿಕಾರಿಗಳು; ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರವೆಸಗಿರುವುದು ಅತ್ಯಂತ ದುರದೃಷ್ಟಕರವಾದದ್ದು.

ಅವರು ಮಣಿವಣ್ಣನ್ !

ಭ್ರಷ್ಟಾಚಾರ, ಅವ್ಯವಹಾರ, ದೂರು-ದುಮ್ಮಾಣೆಗಳನ್ನು ಸ್ವೀಕರಿಸಿದ ಅಧಿಕಾರಿಗಳಿಗೆ ‘ಸಿಂಹ ಸ್ವಪ್ನ’ ವಾಗಿರುವ ಶ್ರೀ ಮಣಿವಣ್ಣನ್ ರವರು, ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದು -ತಾವು ಒಬ್ಬ ಜನ ಪರ ಅಧಿಕಾರಿಯೆಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.