ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ: ಸಚಿನ್‍ ದಾಖಲೆ ಸರಿಗಟ್ಟಿದ ಕೊಹ್ಲಿ

0
1146

ಇಂಗ್ಲೆಂಡ್‍ ಒಡ್ಡಿದ 351 ರನ್‍ಗಳ ಕಠಿಣ ಗುರಿ ಬೆಂಬತ್ತಿದ ಭಾರತ ಆರಂಭದಲ್ಲೇ 4 ವಿಕೆಟ್‍ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಅಮೋಘ ಶತಕ ಸಿಡಿಸಿದ ವಿರಾಟ್‍ ಕೊಹ್ಲಿ ಹಲವಾರು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ಮಹೇಂದ್ರ ಸಿಂಗ್‍ ಧೋನಿ ನಿರ್ಗಮನದ ನಂತರ ಏಕದಿನ ಕ್ರಿಕೆಟ್‍ನ ಸಾರಥ್ಯ ವಹಿಸಿದ ಮೊದಲ ಪಂದ್ಯದಲ್ಲೇ ವಿರಾಟ್‍ ಕೊಹ್ಲಿ ಶತಕ ಸಿಡಿಸಿದ ಗೌರವಕ್ಕೆ ಪಾತ್ರರಾದರು. ಇದು ಕೊಹ್ಲಿ ಆಟಗಾರನಾಗಿ ಸಿಡಿಸಿದ 27ನೇ ಶತಕವಾಗಿದೆ.

ರನ್‍ ಬೆಂಬತ್ತುವಾಗ ಕೊಹ್ಲಿ ದಾಖಲಿಸಿದ 17ನೇ ಶತಕ ಇದಾಗಿದೆ.ಈ ಮೂಲಕ ಏಕದಿನ ಕ್ರಿಕೆಟ್‍ನಲ್ಲಿ ಎರಡನೇ ಬಾರಿ ಬ್ಯಾಟ್‍ ಮಾಡಿದ ತಂಡದ ಪರ ಅತೀ ಹೆಚ್ಚು ಶತಕ ಬಾರಿಸಿದ ಸಚಿನ್‍ ತೆಂಡುಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ಸಚಿನ್‍ ಈ ಸಾಧನೆ ಮಾಡಲು 232 ಪಂದ್ಯಗಳನ್ನು ತೆಗೆದುಕೊಂಡರೆ, ಕೊಹ್ಲಿ ಕೇವಲ 96 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

93 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್‍ ಸಹಾಯದಿಂದ ಶತಕ ಪೂರೈಸಿದ ಕೊಹ್ಲಿ, 105 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ 122 ರನ್‍ ಗಳಿಸಿದ್ದಾಗ ಸ್ಟೋಕ್ಸ್‍ ಎಸೆತದಲ್ಲಿ ಬಟ್ಲರ್‍ ಗೆ ಕ್ಯಾಚ್‍ ನೀಡಿ ನಿರ್ಗಮಿಸಿದರು.

ಕೊಹ್ಲಿ ಔಟಾಗುವ ಮುನ್ನ ಮಿಂಚಿನ ಶತಕ ಸಿಡಿಸಿದ ಕೇದಾರ್ ‍ಜಾಧವ್‍ ಜೊತೆ 5ನೇ ವಿಕೆಟ್‍ಗೆ 24.3 ಓವರ್ ಗಳಲ್ಲಿ 200 ರನ್‍ಗಳ ಜೊತೆಯಾಟದಲ್ಲಿ ಭಾಗಿಯಾದರು.