ಡಾ|| ಸರ್. ಕೆ.ಪಿ. ಪುಟ್ಟಣ್ಣ ಚೆಟ್ಟಿ ಪುರಭವನ” 1935ರಲ್ಲಿ ಮೈಸೂರು ಸಂಸ್ಥಾನದ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ಉದ್ಘಾಟಿಸಲ್ಪಟ್ಟಿದೆ.

0
503

ದಿವಂಗತ ರಾಜಸಭಾ ಭೂಷಣ. ದಿವಾನ್ ಬಹದ್ದೂರ್. ಡಾ|| ಸರ್.ಕೆ.ಪಿ. ಪುಟ್ಟಣ್ಣ ಚೆಟ್ಟಿಯವರು 1856 ನೇ ಇಸವಿ ಏಪ್ರಿಲ್ 29 ರಂದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರಿನಲ್ಲಿ ಪ್ರತಿಷ್ಠಿತ ಗೌರವಪೂರ್ಣ ವೀರಶೈವ ಕುಟುಂಬದಲ್ಲಿ ಜಿನಿಸಿದರು. ಇವರು ತಂದೆಯ ಹೆಸರು ಯಲ್ಲಪ್ಪಶೆಟ್ಟರು, ಯಾಯಿಯ ಹೆಸರು ಯಲ್ಲಮ್ಮ.

ಇವರು ಪ್ರೌಢಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನ ವೆಸ್ಲಿಯನ್ ವಿಷನ್ ಹೈಸ್ಕೂಲಿನಲ್ಲಿಯೂ,  ಕಾಲೇಜಿನ ವಿಧ್ಯಾಭ್ಯಾಸ ಸೆಂಟ್ರಲ್ ಕಾಲೇಜಿನಲ್ಲಿಯೂ ನಡೆಯಿತು. ಕಾರಣಾಂತರಗಳಿಂದ ಅವರು ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದೆ, ಯಾವ ಡಿಗ್ರಿಯನ್ನು ಪಟೆಯಲಾಗಲಿಲ್ಲ. ಆಂಗ್ಲಭಾಷೆ ಮತ್ತು ಕನ್ನಡ ಇವೆರಡರಲ್ಲಿ ಹೆಚ್ಚಿನ ಪ್ರಭೂತ್ವವನ್ನೂ ಸಾಧಿಸಿದ್ದರು. ಸರಳ ಸ್ವಾಭಾವ ಹಾಗೂ ಕರ್ತವ್ಯ ಪ್ರಜ್ಞೆಗೆ ಹೆಸರಾದ ಇವರು ಕೊಡುಗೈ ದಾನಿಗಳಾಗಿ ಸದಾ ಬಡಜನರ ಏಳಿಗೆಗೆ ಸಹಾಯನ್ನೂ ಮಾಡುತ್ತಿದ್ದರು. ಇವರ ವಡೆ, ನುಡಿ, ಸಹಾಯ ಮನೋಭಾವ, ಮುಖಂಡತ್ವನ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿದ. ಇವರ ದೃಢ ಸ್ವಭಾವ ಹಾಗೂ ಧೀಮಂತ ವ್ಯಕ್ತಿತ್ವ ಮೈಸೂರಿನ ಜನರಿಗೆ ಅಪ್ಯಾಯಮಾನ ವಾಗಿತ್ತು. ಇವರ ನಿಸ್ವಾರ್ಥ ಸೇವಾ ಮನೋಭಾವ, ಇವರಿಗೆ ಅಪಾರ ಕೀರ್ತಿ ತಂದುಕೊಟ್ಟಿತು.

ಶ್ರೀಮಾನ್ ಡಾ|| ಸರ್. ಕೆ.ಪಿ. ಪುಟ್ಟಣ್ಣ ಚೆಟ್ಟಿಯವರು 1875ರಲ್ಲಿ ಮೈಸೂರು ಸರ್ಕಾರದಲ್ಲಿ ಕರಣಿಕಾರಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅನಂತರ 1886 ರಲ್ಲಿ ಸಹಾಯಕ ಕಮಿಷನ್ ರವರಾಗಿ, ತಮ್ಮ ಆಡಳಿತಾತ್ಮಕ ಸಾಮರ್ಥ್ಯಕ್ಕೆ ಹೆಸರಾದವರು. ಇದರ ಜೊತೆಗೆ ಕೋಲಾರ ಮತ್ತು ಶಿವಮೊಗ್ಗಗಳಲ್ಲಿ ಜಿಲ್ಲಾಧಿಕಾರಿಗಳಾಗಿ ತಮ್ಮ ಕಾರ್ಯ ದಕ್ಷತೆಯಿಂದ ಜನರ ಮೆಚ್ಚುಗೆಗ ಪಾತ್ರರಾಗಿ ಪ್ರಖ್ಯಾತಿಯನ್ನೂ ಪಡೆದರು ಇವರ ಜೀವನದ ಅತ್ಯಂತ ಪ್ರಮುಖವಾದ ಘಟ್ಟವೆಂದರೆ 1911 ನೇ ಇಸವಿ. ಈ ಸಂವತ್ಸರದಲ್ಲಿ ಇವರು ಆಗಿನ ಮೈಸೂರು ಸಂಸ್ಥಾನದ  ಕೌನ್ಸಿಲಿನ ಪ್ರಥಮ ಸದಸ್ಯರಾಗಿ ವಿಶೇಷ ಸ್ಥಾನಮಾನಗಳನ್ನು ಗಳಿಸಿಕೊಂಡರು. ಇದಲ್ಲದೆ ಶ್ರೀಮನ್ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ “ರಾಜಸಭಾ ಭೂಷಣ” ಎಂಬ ಪ್ರಶಸ್ತಿಯನ್ನು. ಭಾರತ ಸರ್ಕಾರದಿಂದ “ದಿವಾನ್ ಬಹದ್ದೂರ್”, ಎಂಬ ಘನ ಪ್ರಶಸ್ತಿಯನ್ನು ಗಳಿಸಿಕೊಂಡರು. 1912ರಲ್ಲಿ ಇವರು ಅಧಿಕಾರದಿಂದ ನಿವೃತ್ತರಾದರು. ಆದರೂ ಇವರು ವಿಶ್ರಾಂತಿ ಜೀವನವನ್ನು ಅನುಭವಿಸಲು ಬಯಸಲಿಲ್ಲ. ಅದಕ್ಕೆ ಬದಲಾಗಿ ಇನ್ನೂ ಹೆಚ್ಚು ಸೇವಾ ಕಾಯಕಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು.

1917ರಲ್ಲಿ ಇವರಿಗೆ Kt., C.I.E.   ಎಂಬ ಶೈಕ್ಷಣಿಕ ಬಿರುದನ್ನು (Company of the Indian Empire) 1936ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ L.L.D (Doctor of Laws) ಎಂಬ ಗೌರವ ಸನ್ಮಾನವೂ ದೊರಕಿದೆ.

ಪುಟ್ಟಣ್ಣ ಚೆಟ್ಟಿಯವರು ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳು:

1) ಮೈಸೂರು ಬ್ಯಾಂಕಿನ ಆಡಳಿತ ಮಂಡಳಿಯ ಪ್ರಥಮ ಅಧ್ಯಕ್ಷರು ಮತ್ತು 1915 ರಿಂದ 1920ರವರೆಗೂ ಅಧ್ಯಕ್ಷರಾಗಿ ಮುಂದುವರಿಕೆ, ನಂತರ ಆಡಳಿತ ಮಂಡಳಿಯಲ್ಲಿ ಅವರ ಕೊನೆಯವರೆಗೂ ನಿರ್ದೇಶಕರಾಗಿ ಸೇವೆ.

2) ಬೆಂಗಳೂರು – ಚಿಕ್ಕಬಳ್ಳಾಪುರ ರೈಲ್ವೆ ಬೋರ್ಡಿನ ಅಧ್ಯಕ್ಷರಾಗಿ.

3) ಆರ್ಥಿಕ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ

4) 1913-1920 ಕೈಗಾರಿಕ ಮತ್ತು ವಣಿಜ್ಯ ಮಂಡಳಿಯ ಸದಸ್ಯರಾಗಿ

5) ಬೆಂಗಳೂರು ಮುನಿಸಿಪಾಲಿಟಿಯ ಅಧ್ಯಕ್ಷರಾಗಿ

6) 1913-1922 ಬೆಂಗಳೂರಿನ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ

7) ರಾಜ್ಯ ಹಣಕಾಸು ಸಮಿತಿ ಮತ್ತು ಪಶು ಸಂರಕ್ಷಣಾ ಸಮಿತಿಯ ಸದಸ್ಯರಾಗಿ

8) ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ

9) ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ

10) ಬೆಂಗಳೂರು ಪ್ರಿಂಟಿಂಗ್ ಪ್ರೆಸ್ ನ ಅಧ್ಯಕ್ಷರಾಗಿ

11) 1921ನೇ ಇಸವಿಯಲ್ಲಿ 7ನೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ

12) 1907-1917ರ ತನಕ ಸೊಲ್ಲಾಪುರದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ

13) ರಾವ್ ಬಹದ್ದೂರ್ ಧರ್ಮ ಪ್ರವರ್ತಕ ಶ್ರೀ ಗುಬ್ಬಿ ತೋಟದಪ್ಪನವರ ಧರ್ಮಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

14) ಮೈಸೂರು ಲಿಂಗಾಯುತ ವಿದ್ಯಾಭಿವೃದ್ಧಿ ಸಂಘದಲ್ಲಿ ಅಧ್ಯಕ್ಷರಾಗಿ 17 ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿರುವ, ಇವರು ಕಟ್ಟಿಸಿದ “ಡಾ|| ಸರ್. ಕೆ.ಪಿ. ಪುಟ್ಟಣ್ಣ ಚೆಟ್ಟಿಪುರಭವನ” 1935ರಲ್ಲಿ ಮೈಸೂರು ಸಂಸ್ಥಾನದ ಯುವರಾಜರಾದ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ಉದ್ಘಾಟಿಸಲ್ಪಟ್ಟಿದೆ. ಇದಲ್ಲದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಔಟ್ ಪೇಶೆಂಟ್ ವಾರ್ಡ್ ಮತ್ತು ನೇರ ಚಿಕಿತ್ಸಾ ಕಟ್ಟಡ ಕಟ್ಟಿಸಿ ಬೆಂಗಳೂರಿನ ಜನಕ್ಕೆ ಮಹೋಪಕಾರ ಮಾಡಿದ್ದಾರೆ.

ಡಾ|| ಕೆ.ಪಿ.ಪುಟ್ಟಣ್ಣ ಚೆಟ್ಟರು 1956ರಲ್ಲಿ ಜನಿಸಿ 1938ರ ತನಕ ಸುಮಾರು 82 ವರ್ಷಗಳ ತುಂಬು ಜೀವನ ನಡೆಸಿದರು. ಇವರ ಕೆಲಸದ ನೈಪುಣ್ಯತೆ ಸರ್ವರ ಅಭಿಮಾನಕ್ಕೆ ಪಾತ್ರವಾಯಿತು, ಇವರು ದೇಶಸೇವೆ ನಿಷ್ಟೆ, ರಾಜಸೇವೆ ನಿಷ್ಟೆ ಮತ್ತು ಗುರುಸೇವೆ ನಿಷ್ಟೆಗಳನ್ನು ಮೈಗೂಡಿಸಿಕೊಂಡು ಕೀರ್ತಿವಂತರಾಗಿ ಮರೆದವರು. ಇವರು ಒಬ್ಬ ಶ್ರೇಷ್ಠ ಅಧಿಕಾರಿ ಮತ್ತು ಬಾಳಿನ ಗುರಿಯಾಗಿಟ್ಟುಕೊಂಡು ಸಾಧನೆ ಮಾಡಿದ ಮಹಾನ್ ವ್ಯಕ್ತಿ. ಶಿಸ್ತು, ಸುಂಯಮ ಇವರ ಬಾಳಿನ ಆದ್ಯ ಗುರಿ. ಇವರ ಜೀವನ ಗಡಿಯಾರದಂತೆ ಕ್ರಮಬದ್ಧವಾದುದು. ದಿನದ ಯಾವ ಕ್ಷಣವನ್ನೂ ಇವರು ವ್ಯರ್ಥವಾಗಿ ಕಳೆದವರಲ್ಲ.