ನಾಡಿನ ಪ್ರಸಿದ್ಧ ನಾಗಾರಾಧನೆಯ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆದಾಯದಲ್ಲಿ ಈ ವರ್ಷವೂ ನಂ. 1

0
990

ದೇಶದ ಶ್ರೀಮಂತ ದೇವಸ್ಥಾನ ತಿರುಪತಿ ತಿಮ್ಮಪ್ಪ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕರ್ನಾಟಕದ ಪಾಲಿಗೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಈ ವರ್ಷವೂ ನಂಬರ್ 1 ಶ್ರೀಮಂತ ದೇವಸ್ಥಾನವಾಗಿ ಉಳಿಯುವ ಸಾಧ್ಯತೆ ಇದೆ.

2016-17ನೇ ಸಾಲಿನಲ್ಲಿ 89.65 ಕೋಟಿ ರೂಪಾಯಿ ಆದಾಯ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮುಜರಾಯಿ ಇಲಾಖೆ ಅಧೀನಕ್ಕೊಳಪಟ್ಟ ದೇವಸ್ಥಾನಗಳ ಪೈಕಿ ಅಗ್ರಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಬಂದ ಆದಾಯದಲ್ಲಿ 36.02 ಕೋಟಿ ವೆಚ್ಚವಾಗಿದೆ.

ಹತ್ತು ವರ್ಷಗಳ ಹಿಂದೆ 19.76 ಕೋಟಿ ಆದಾಯ ಹೊಂದಿದ್ದ ಕುಕ್ಕೆ ಸುಬ್ರಹ್ಮಣ್ಯ ಇದೀಗ ನಾಲ್ಕು ಪಟ್ಟು ಹೆಚ್ಚು ಆದಾಯ ಗಳಿಸುತ್ತಿದೆ. 2007-08ರಲ್ಲಿ ದೇವಸ್ಥಾನ 24.44 ಕೋಟಿ ಆದಾಯ ಪಡೆಯುವ ಮೂಲಕ ರಾಜ್ಯದ ನಂಬರ್ 1 ದೇವಸ್ಥಾನವಾಗಿ ಮೂಡಿ ಬಂದಿತ್ತು. ಅಲ್ಲಿಂದ ಈ ಸ್ಥಾನವನ್ನು ಕುಕ್ಕೆ ಸುಬ್ರಹ್ಮಣ್ಯ ನಿರಂತರವಾಗಿ ಕಾಪಾಡುತ್ತಾ ಬಂದಿದೆ.

ಆದಾಯ ವಿವರ ಹೀಗಿದೆ.

2006-07ರಲ್ಲಿ 19.76 ಕೋಟಿ, 2007-08ರಲ್ಲಿ 24.44 ಕೋಟಿ ರೂ. ಇತ್ತು. 2013-14ರಲ್ಲಿ 68 ಕೋಟಿ 2014-15ರಲ್ಲಿ 77.6 ಕೋಟಿ, 2015-16ರಲ್ಲಿ 88 ಕೋಟಿಗೆ ಆದಾಯ ಏರಿಕೆಯಾಗಿತ್ತು.

ನೋಟು ಬ್ಯಾನ್‍ನಿಂದ ಆದಾಯ ಪ್ರಮಾಣದಲ್ಲಿ ಈ ಬಾರಿ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 2016-17ನೇ ಸಾಲಿನ ಒಟ್ಟಾರೆ ಆದಾಯದಲ್ಲಿ ಕೃಷಿಕರು ನೀಡಿದ ಬೆಳೆಗಳಿಂದ 2.12 ಕೋಟಿ, ಕಟ್ಟಡಗಳ ಬಾಡಿಗೆಯಿಂದ 44 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ. ಇನ್ನು ಹರಕೆಗಳಿಂದ 1.68 ಕೋಟಿ, ಹುಂಡಿಯಿಂದ 17.65 ಕೋಟಿ, ಸೇವೆಗಳಿಂದ ಮತ್ತು ಪ್ರಸಾದ ಮಾರಾಟದಿಂದ 38.24 ಕೋಟಿ ಹಾಗೂ ಕೆಲವು ಅನುದಾನಗಳಿಂದ ಕುಕ್ಕೆ ಸುಬ್ರಹ್ಮಣ್ಯಗೆ 1.22 ಲಕ್ಷ ಆದಾಯವಾಗಿದೆ.

ಕಳೆದೊಂದು ವರ್ಷದಲ್ಲಿ ಪೂಜೆ ಸೇವೆಗಳಿಂದಲೇ ದೇವಸ್ಥಾನ 30.56 ಕೋಟಿ ಆದಾಯ ಪಡೆದಿರುವುದು ಇಲ್ಲಿಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯ ಏರಿಕೆಗೆ ಕೈಗನ್ನಡಿ ಹಿಡಿದಿದೆ.