ಕುಕ್ಕೆ ಸುಬ್ರಹ್ಮಣ್ಯ- ಸರ್ಪಗಳ ದೇವತೆಯ ನಿವಾಸ ತಾಣ

0
7631

ಕಷ್ಟಗಳು ಎದುರಾದಾಗ ಜನರು ಭಗವಂತನ ಮೊರೆ ಹೋಗುವುದು ಸಾಮಾನ್ಯ. ಹೀಗೆ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಕೊಡುವ ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಕೊರತೆ ಇಲ್ಲ. ಇವು ಜನರ ಕಷ್ಟ ಪರಿಹರಿಸುವ ಶಕ್ತಿ ಕೇಂದ್ರಗಳಾಗಿವೆ. ಇಂತಹ ಪವಿತ್ರ ಕ್ಷೇತ್ರಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಮಣ್ಯ ಸಹ ಒಂದು. ಪುಟ್ಟ ಊರು ಸುಬ್ರಹ್ಮಣ್ಯ. ಸುತ್ತ ದರ್ಪಣ ತೀರ್ಥ ನದಿ. ನಂಬಿ ಬಂದ ಭಕ್ತರಿಗೆ ಇಂಬು ನೀಡುವ ಕಾರಣಿಕದ ಸನ್ನಿಧಿ ಈ ಕ್ಷೇತ್ರ

ಕರ್ನಾಟಕ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಮಂಗಳೂರು ಸಮೀಪದ ಸುಳ್ಯದಲ್ಲಿದೆ. ಈ ದೇವಾಲಯವು ಸರ್ಪಗಳ ದೇವತೆಯಾದ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಗೆ ಪ್ರಸಿದ್ಧವಾಗಿದೆ. ಈ ದೇವಾಲಯದ ಕುರಿತಾದ ದಂತಕಥೆಗಳಿಂದಾಗಿ ಇದು ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಹಲವು ಪೂಜಾ ಕೈಂಕರ್ಯಗಳಿಗಾಗಿ ಭಕ್ತರು ಎಲ್ಲೆಡೆಯಿಂದ ಈ ದೇವಾಲಯಕ್ಕೆ ಆಗಮಿಸುತ್ತಾರೆ.

kukke-subramanya-temple22

ಪ್ರಾಚೀನ ಸಿದ್ದಾಂತದತ್ತ ಒಂದು ನೋಟ

ಒಂದು ಪ್ರಾಚೀನ ಸಿದ್ದಾಂತವೊಂದರ ಪ್ರಕಾರ, ಈಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿರುವ ಸ್ಥಳದಲ್ಲಿ ಸರ್ಪಗಳ ರಾಜನಾದ ವಾಸುಕಿಯು, ಗರುಡನ ಕೋಪದಿಂದ ಸರ್ಪ ಸಂಕುಲವನ್ನು ಕಾಪಾಡುವಂತೆ ಕೋರಿ ಪರಶಿವನನ್ನು ಕುರಿತು ತಪಸ್ಸು ಕೈಗೊಂಡನಂತೆ. ತಪಸ್ಸಿಗೆ ಮೆಚ್ಚಿದ ಶಿವನು ಸುಬ್ರಹ್ಮಣ್ಯನನ್ನು ಸರ್ಪಗಳನ್ನು ರಕ್ಷಿಸುವಂತೆ ಹೇಳಿ ಕಳುಹಿಸದನಂತೆ. ಹಾಗಾಗಿ ಸುಬ್ರಹ್ಮಣ್ಯನನ್ನು ಸರ್ಪಗಳ ರಕ್ಷಕನೆಂದು ಪೂಜಿಸಿ ಕೊಂಡು ಬರಲಾಗುತ್ತಿದೆ.

ಮತ್ತೊಂದು ಕುತೂಹಲದಾಯಕ ವಿಚಾರವೆಂದರೆ, ವಾಸುಕಿಯು ಈ ದೇವಾಲಯದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಇಲ್ಲಿ ಒಂದು ಗರುಡಗಂಬವನ್ನು ನಿಲ್ಲಿಸಲಾಗಿದೆ. ಇದು ಬೆಳ್ಳಿಯಿಂದ ಮಾಡಲಾಗಿದ್ದು, ವಾಸುಕಿಯ ಉಸಿರಾಟದಿಂದ ಹೊರಬರುವ ವಿಷದ ಧೂಮದಿಂದ ಭಕ್ತಾದಿಗಳನ್ನು ಇದು ರಕ್ಷಿಸುತ್ತದೆಯಂತೆ. ಆಶ್ಲೇಷ ಬಲಿ ಮತ್ತು ಸರ್ಪ ಸಂಸ್ಕಾರ ಎಂಬ ಎರಡು ಪ್ರಮುಖ ಪೂಜೆಗಳನ್ನು ಈ ದೇವಾಲಯದಲ್ಲಿ ಕೈಗೊಳ್ಳಲಾಗುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ವಾಯು, ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ತಲುಪಬಹುದು. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವು ಮಂಗಳೂರಿನಲ್ಲಿದೆ. ರೈಲ್ವೇ ನಿಲ್ದಾಣವು ದೇವಾಲಯದಿಂದ 7 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮತ್ತು ಮಂಗಳೂರಿನಿಂದ ಹಲವಾರು ಬಸ್ಸುಗಳು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೊರಡುತ್ತವೆ.