ಕುಂದಾದ್ರಿ : ಕುಂದ ಕುಂದ ಆಚಾರ್ಯರ ತಪೋ ಭೂಮಿ

0
2539

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಹೊರತುಪಡಿಸಿದರೆ ರಾಜ್ಯದ ಎರಡನೇ ಅತಿ ಎತ್ತರದ ಗಿರಿ ಯಾವುದು ಎಂಬ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಬೇಕಿದ್ದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ವಲಯದಲ್ಲಿರುವ ಕುಂದಾದ್ರಿ ಬೆಟ್ಟಕ್ಕೆ ಭೇಟಿ ನೀಡಬೇಕು. ಮುಳ್ಳಯ್ಯನಗಿರಿ ಸುಮಾರು 6,330 ಅಡಿಗಳಷ್ಟು ಎತ್ತರವಿದ್ದರೆ, ಕುಂದಾದ್ರಿ ಬೆಟ್ಟ ಸುಮಾರು 3,550 ಅಡಿಗಳಷ್ಟು ಎತ್ತರವಿದೆ. ಕುಂದಾದ್ರಿ ಗ್ರಾಮದ ಪ್ರವೇಶದ್ವಾರದಿಂದ ಬೆಟ್ಟದ ತುದಿಯವರೆಗೆ ಸುಮಾರು 4 ಕಿ.ಮೀ.ಗಳಷ್ಟು ಅಂತರವಿದೆ.

0

ಶತಮಾನಗಳ ಹಿಂದೆ ಜೈನ ಮುನಿ ಆಚಾರ್ಯ ಕುಂದ ಕುಂದ ಈ ಬೆಟ್ಟದ ಮೇಲೆ ತಂಗಿ ತಪಸ್ಸು ಮಾಡಿದ್ದರು. ಹೊಂಬುಜ (ಹುಂಚ) ಅತಿಶಯ ಶ್ರೀಕ್ಷೇತ್ರ ಜೈನಮಠದ ಅಧೀನ ಕ್ಷೇತ್ರವಾಗಿರುವ ಕುಂದಾದ್ರಿ ಶ್ರೀಕ್ಷೇತ್ರದಲ್ಲಿ ಬೆಳಿಗ್ಗೆ ಪಾರ್ಶ್ವನಾಥಸ್ವಾಮಿಗೆ ನವಕಳಸಾಭಿಷೇಕ, ವಿಶೇಷ ಪೂಜೆ, ಪದ್ಮಾವತಿ ದೇವಿ ಷೋಡಶೋಪಚಾರ ಪೂಜೆ ಮತ್ತು ಆಚಾರ್ಯ ಕುಂದ ಕುಂದರ ಪಾದುಕೆಗಳ ಪೂಜೆ ನಡೆಯಲಿದ್ದು, ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

4 1

ಬೆಟ್ಟದ ಬಗ್ಗೆ ಒಂದಿಷ್ಟು

ಕಿರಿದಾದ ಟಾರು ರಸ್ತೆಯಿದೆಯಾದರೂ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಂತೂ ಏರಲು ಸಾಧ್ಯವೇ ಇಲ್ಲ. ಸುಮಾರು ಆಟೊರಿಕ್ಷಾಗಳು ಇವೆಯಾದರೂ ಅವುಗಳಲ್ಲಿ ಪ್ರಯಾಸದಲ್ಲೇ ಪ್ರಯಾಣಿಸಬೇಕು. ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿರುವ ದಟ್ಟವಾದ ಕಾಡು ಪ್ರದೇಶದಲ್ಲಿ ದಟ್ಟ ಗಿಡಮೂಲಿಕೆಗಳು ಇವೆ. ಹುಲಿಗಳು ಸೇರಿದಂತೆ ಬೇರೆ ಬೇರೆ ಕಾಡುಪ್ರಾಣಿಗಳು ಈ ಕಾಡುಪ್ರದೇಶವನ್ನು ಆಶ್ರಯತಾಣವಾಗಿಸಿಕೊಂಡಿವೆ. ಇದು ವನ್ಯವಿಜ್ಞಾನಿಗಳ ಅಧ್ಯಯನ ತಾಣವೂ ಆಗಿದೆ. ಈ ಕಾರಣದಿಂದಲೇ ಈ ಕಾಡು ಪ್ರದೇಶವನ್ನು ಮೀಸಲು ಅರಣ್ಯವಾಗಿರಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

2 3

ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ, ಬೆಟ್ಟದ ತುದಿಯಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲೆಂದೇ ದೂರದೂರದ ಊರುಗಳಿಂದ ಜನರು ಬರುತ್ತಾರೆ. ಬಸದಿಯ ಬಳಿಯಿರುವ ಆಳವಾದ ಹೊಂಡದ ಬದಿಯಲ್ಲಿ ಕೂತು ಕಾಲ ಕಳೆಯುವ ಜನರು ಅಲ್ಲಿಂದ ಕಣ್ಣು ಹಾಯಿಸಿದಷ್ಟು ಕಾಣಸಿಗುವ ಕಾಡನ್ನು ಕಂಡು ಮೈಮೆರೆಯುತ್ತಾರೆ. ಬಿಸಿಲಿದ್ದರೂ ಅದರ ತಾಪ ತಾಗದೇ ಬೀಸುವ ತಂಗಾಳಿಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಕೆಲ ಬಾರಿ ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಕೂಡ ಸಿಗದೇ ಜಗತ್ತಿನ ಎಲ್ಲ ಸಂಪರ್ಕ ಕಳೆದುಕೊಂಡು ಕೆಲ ನಿಮಿಷಗಳಾದರೂ ನೆಮ್ಮದಿಯಾಗಿರಲು ಬಯಸುತ್ತಾರೆ.

23

ಕುಂದಾದ್ರಿ ಬೆಟ್ಟ, ಬೆಟ್ಟದ ಮೇಲಿರುವ ಜೈನ ಬಸದಿ, ಆಚಾರ್ಯ ಕುಂದ ಕುಂದ ಅವರಿಗೂ ಮತ್ತು ಜೈನ ಸಮುದಾಯಕ್ಕೂ ಸುಮಾರು ನೂರಾರು ವರ್ಷಗಳ ಗಾಢವಾದ ನಂಟು ಇದೆ. ಆಚಾರ್ಯ ಕುಂದ ಕುಂದ ಅವರು ಇಲ್ಲಿ ದೀರ್ಘ ಕಾಲದವರೆಗೆ ತಪಸ್ಸು ಮಾಡಿದ್ದರು. ಆಗ ದಟ್ಟವಾದ ಕಾಡು ಮತ್ತು ಪ್ರಾಣಿಪಕ್ಷಿಗಳಿದ್ದರೂ ಅದ್ಯಾವುದನ್ನೂ ಲೆಕ್ಕಿಸದೇ ತಪಸ್ಸು ಮಾಡುತ್ತ ವಿದ್ಯಾಪೀಠವೊಂದನ್ನು ಸ್ಥಾಪಿಸಿದ್ದರು. ಮಕ್ಕಳಿಗೆ ವಿದ್ಯೆಯನ್ನು ನೀಡುತ್ತಿದ್ದರು. ಈ ಕಾರಣದಿಂದಲೇ ಬಸದಿ ಬಳಿ ಪಾದುಕೆಯಿದೆ’ ಎಂದು ಜೈನ ಬಸದಿಯ ಶಾಂತಿನಾಥ ಪಂಡಿತರು ಹೇಳುತ್ತಾರೆ.

ಕುಂದಾದ್ರಿಯೆಂದರೆ ದುಂಡು ಮಲ್ಲಿಗೆಯೆಂದು ಅರ್ಥ. ಸರಳವಾಗಿ ಹೇಳುವುದಾದರೆ, ಇದು ದುಂಡುಮಲ್ಲಿಗೆ ಬೆಟ್ಟ. ಬಸದಿಯ ಎರಡೂ ಬದಿಗಳಲ್ಲಿ ಹೊಂಡಗಳಿದ್ದು, ನೀರು ಪರಿಶುದ್ಧವಾಗಿದೆ. ಜೈನ ಸಮುದಾಯದವರಿಗೆ ಇದು ಪ್ರಮುಖ ಕ್ಷೇತ್ರವಾಗಿದ್ದು, ಹೊಂಬುಜ (ಹುಂಚ) ಅತಿ ಶಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಈ ಬೆಟ್ಟಕ್ಕೆ ತಪ್ಪದೇ ಬರುತ್ತಾರೆ.