ಕುವೆಂಪು ಮಾತನ್ನೇ ಮರೆತ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ!

1
1870

kuvempu

ಈ ಮಾರ್ಗ ಸೂಚಕ ಇರುವುದು ರಾಷ್ಟ್ರಕವಿ ಕುವೆಂಪು ಅವರ ಊರಾದ ಕುಪ್ಪಳಿಯ ಹತ್ತಿರದಲ್ಲಿ. ಕುವೆಂಪು ಅವರ ಮನೆ ಒಂದು ಕಿಲೋಮೀಟರ್ ದೂರವಿದೆ ಎನ್ನುವುದನ್ನೂ, ಯಾವ ಕಡೆ ಸಾಗಬೇಕೆನ್ನುವುದನ್ನೂ ತೋರಿಸುತ್ತಿರುವ ಇದನ್ನು ಒಮ್ಮೆ ಗಮನಿಸಿ ನೋಡಿದಾಗ “ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ”ದವರು ಕುವೆಂಪುರವರ ಮಾತುಗಳನ್ನು ಅರ್ಥ ಮಾಡಿಕೊಂಡಿಲ್ಲವೇನೋ ಎನ್ನುವ ರೀತಿಯಲ್ಲಿ ಈ ಫಲಕ ಹಾಕಿ ರಾಷ್ಟ್ರಕವಿಗಳ ನಿಲುವಿಗೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನಿಸುತ್ತಿದೆ. ಏನದು ರಾಷ್ಟ್ರಕವಿಗಳ ನಿಲುವು? ಯಾವುದರ ಬಗೆಗಿನ ನಿಲುವು? ಎನ್ನುತ್ತಿದ್ದೀರಾ? ಹಾಗಾದರೆ ಕುವೆಂಪು ಅವರ ಈ ಕವನದ ಸಾಲುಗಳನ್ನೊಮ್ಮೆ ಓದಿ ನೋಡಿ

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿಣೇತ್ರ |
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ
ನುಂಗದಿದ್ದರೆ ಹಸಿವೆ, ನುಂಗಿದರೆ ಪ್ರಾಣಶೂಲ ||

15442252_1783040215284132_3129014358036992635_n

“ವಿಚಾರ ಕ್ರಾಂತಿಗೆ ಆಹ್ವಾನ, ಬರಹಗಾರರು” ಕುವೆಂಪು, ಪ್ರಕಾಶನ: ಉದಯರವಿ ಪ್ರಕಾಶನ, ಮೈಸೂರು ರಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಕುವೆಂಪು ಅವರ ವಿಚಾರಕ್ರಾಂತಿಯ ಬರಹ:

15420923_1782967295291424_5326282853117351533_n

ತ್ರಿಭಾಷಾ ಸೂತ್ರದ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ಕಾರಣಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ವೈಭವವನ್ನು ಏನೂ ಅರಿಯದ ನಮ್ಮ ಹಸುಳೆಗಳ ಮುಂದೆ ವರ್ಣಿಸಿ ಅವರ ಮನಸ್ಸನ್ನು ಅವುಗಳ ಕಡೆಗೇ ಎಳೆದು ದೇಶಭಾಷೆಗಳ ಅಧ್ಯಯನವನ್ನು ಹಿಂದಕ್ಕೊತ್ತರಿಸುವ ಪ್ರಯತ್ನವನ್ನೂ ಮಾಡುತ್ತಿರುವವರು ಅನೇಕರಿದ್ದಾರೆ.

ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆ ‘ಬಹುಭಾಷೆಗಳಲ್ಲಿ ದ್ವಿಭಾಷೆ‘ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ಭರತಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲಾತ್ಕಾರವಾಗಿ ಹೇರಬಾರದು. ತಮ್ಮ ಆವಶ್ಯಕತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ; ಆರಿಸಿಕೊಳ್ಳುವ ಸ್ವಾತಂತ್ರ್ಯ ಪ್ರಜಾಸತ್ತಾತ್ಮಕವಾಗುತ್ತದೆ.

ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ‘ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.

ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳಬಹುದು ಎನ್ನುವುದರಿಂದ ಹಿಂದಿ ಬೇಡ ಎನ್ನುವವರಿಗೆ, ಇಂಗ್ಲಿಷ್ ಬೇಡ ಎನ್ನುವವರಿಗೆ, ಅವುಗಳನ್ನು ಬಲಾತ್ಕಾರವಾಗಿ ಹೇರಿದಂತಾಗುವುದಿಲ್ಲ; ನಿಷೇಧಿಸಿದಂತೆಯೂ ಆಗುವುದಿಲ್ಲ. ಮಹಾಜನರೇ ಕಾಲಕ್ರಮೇಣ, ತಮ್ಮ ತಮ್ಮ ಅಭಿರುಚಿ ಆವಶ್ಯಕತೆಗಳಿಗೆ ತಕ್ಕಂತೆ ಹಿಂದಿ, ಇಂಗ್ಲಿಷ್, ರಷ್ಯನ್, ಸಂಸ್ಕೃತ ಮೊದಲಾದ ಭಾಷೆಗಳನ್ನು ಯಾವ ಶೇಕಡಾವಾರು ಪ್ರಮಾಣದಲ್ಲಿ ಕಲಿಯಬೇಕೆಂಬುದನ್ನು ತಮಗೆ ತಾವೇ ಗೊತ್ತುಮಾಡಿಕೊಳ್ಳುತ್ತಾರೆ.

ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟೀಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?

ಆದ್ದರಿಂದ ‘ಬಹುಭಾಷೆಗಳಲ್ಲಿ ದ್ವಿಭಾಷೆ‘ ಎಂಬುದೇ ನಮಗಿಂದು ಕ್ಷೇಮಕರ ಸೂತ್ರವಾಗಿದೆ. ಒಂದುವೇಳೆ ಮೂರು ಭಾಷೆಗಳನ್ನೂ ಕಲಿಯಬೇಕು ಎಂದು ಹಠ ಹಿಡಿದರೂ ಬಹುಭಾಷೆಗಳಲ್ಲಿ ಮೂರು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರಬೇಕು. ‘ಬಹುಭಾಷೆಗಳಲ್ಲಿ ತ್ರಿಭಾಷೆ’ ಆಗಬೇಕೇ ಹೊರತೂ ಬರಿಯ ‘ತ್ರಿಭಾಷೆ’ಯಾಗಬಾರದು. ಬರಿಯ ‘ತ್ರಿಭಾಷೆ’ಯಾದರೆ ಇಂಗ್ಲಿಷ್ ಮತ್ತು ಹಿಂದಿ ಬಲಾತ್ಕಾರದ ಭಾಷೆಗಳಾಗುತ್ತವೆ. ಕನ್ನಡ ತೆಲುಗು ತಮಿಳು ಮಲೆಯಾಳ ಭಾಷೆಗಳು ತಮ್ಮ ರಾಜ್ಯಗಳಲ್ಲಿಯೆ ಐಚ್ಛಿಕ ಭಾಷೆಗಳಾಗಿ ತೃತೀಯ ಸ್ಥಾನಕ್ಕಿಳಿದು ಹಿಂದಿಯನ್ನು ‘ಓಲೈಸುವ ಅಡಿಯಾಳುಗಳಂತಾಗಿ ತೊತ್ತುಗಳಾಗುತ್ತವೆ.

 

ಮೇಲಿನ ಕುವೆಂಪು ಅವರ ಕನ್ನಡ ಪರ ಪ್ರೇಮ ನೋಡಿ ಆದರೂ  “ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ”ದವರೋ, ಸರ್ಕಾರದವರೋ.. ಒಟ್ಟಲ್ಲಿ ಸಂಬಂಧಪಟ್ಟವರು ರಾಷ್ಟ್ರಕವಿಗಳ ಆಶಯಕ್ಕೆ ಪೂರಕವಾಗಿ ಸ್ಪಂದಿಸಿ ದ್ವಿಭಾಷೆ ಉಪಪಯೋಗಿಸಿದರೆ ನಮಗೆ ಅಷ್ಟೇ ಸಾಕು