ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ವಾಹನದ ಮೇಲೆ ಸಿಂಹಗಳ ಘರ್ಜನೆ…

0
726

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಸಿಂಹವೊಂದು ಸಫಾರಿ ವಾಹನವನ್ನು ತಡೆದು ನಿಲ್ಲಿಸಿ ಅರೆ ಕ್ಷಣ ಕಾರಿನಲ್ಲಿದ್ದ ಪ್ರವಾಸಿಗರನ್ನು ಕಂಗಾಲಾಗಿಸಿದ ಘಟನೆ ನಡೆದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಂಹ ಸಫಾರಿಗೆ ವಿಐಪಿ ಹಾಗೂ ವಿವಿಐಪಿ ವಾಹನಗಳಲ್ಲಿ ತೆರಳಿದ ಪ್ರವಾಸಿಗರ ವಾಹನವನ್ನು ಸಿಂಹಧಾಮದಲ್ಲಿನ ಎರಡು ಸಿಂಹಗಳು ಅಡ್ಡಗಟ್ಟಿ ವಾಹನಗಳ ಮೇಲೆ ಏರಿದ್ದರಿಂದ ಪ್ರವಾಸಿಗರು ಪ್ರಾಣವನ್ನು ಕೈಯಲ್ಲಿ ಇಟ್ಟುಕೊಂಡು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಫಾರಿಗೆ ತೆರಳಲು ಬಸ್‌ನ ವ್ಯವಸ್ಥೆಯಿದೆ. ಬಸ್‌ನ ಎಲ್ಲಾ ಭಾಗಗಳಲ್ಲೂ ಭದ್ರವಾದ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಬಯಲಿನಲ್ಲಿರುವ ಹುಲಿ, ಸಿಂಹಗಳನ್ನು ವೀಕ್ಷಿಸಿ ಸಂತಸ ಪಡುವ ಹಂಬಲದಿಂದ ಪ್ರವಾಸಿಗರು ಅವುಗಳಲ್ಲಿ ತೆರಳುತ್ತಾರೆ. ಇದಲ್ಲದೆ ಅತಿ ಗಣ್ಯರು (ವಿಐಪಿ) ಹಾಗೂ ಅತಿ ಹೆಚ್ಚು ಗಣ್ಯರಿಗೆ (ವಿವಿಐಪಿ) ಎಂಟು ಇನೋವಾ ಕಾರುಗಳೂ ಇವೆ. ಇಂಥ ಕಾರಿನಲ್ಲಿ ಪ್ರವಾಸಿಗರು ಸಿಂಹಧಾಮಕ್ಕೆ ತೆರಳಿದ್ದರು. ಆಗ ಹೆಣ್ಣು ಸಿಂಹವೊಂದು ಕಾರನ್ನು ಅಡ್ಡಗಟ್ಟಿ ಗರ್ಜಿಸಿತು. ಹಿಂದೆಯೇ ಇದ್ದ ಗಂಡು ಸಿಂಹ ಕಾರಿನ ಮೇಲೆ ನೆಗೆಯಿತು. ಗಾಜನ್ನು ಒಡೆಯಲು ಮುಂದಾಯಿತು. ಕಾರಿನಲ್ಲಿದ್ದರೂ ಈ ಸಿಂಹಗಳ ಘರ್ಜನೆಗೆ ಬೆವತು ಹೋದೆವು ಎಂದು ಪ್ರವಾಸಕ್ಕಾಗಿ ತೆರಳಿದವರು ಮಾಹಿತಿ ನೀಡಿದ್ದಾರೆ.

ಸಿಂಹಗಳ ಈ ರೀತಿಯ ವರ್ತನೆಯನ್ನು ಹಿಂದಿನ ಮತ್ತೊಂದು ವಾಹನದಲ್ಲಿದ್ದ ಪ್ರಯಾಣಿಕರು ಮೊಬೈಲ್‌ಗಳಲ್ಲಿ ವಿಡಿಯೊ ಮಾಡಿದರು. ಅಲ್ಲದೆ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ಸಫಾರಿಯಲ್ಲಿನ ರಕ್ಷಣಾ ವ್ಯವಸ್ಥೆಯ ಬಗ್ಗೆ ಆತಂಕ ಉಂಟಾಗುತ್ತದೆ ಎಂದು ಸ್ಥಳೀಯರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಯಂತೆ ಸಫಾರಿಗೆ ತೆರಳುವ ಎಲ್ಲಾ ವಾಹನಗಳಿಗೂ ಕಬ್ಬಿಣದ ಜಾಲರಿಗಳನ್ನು ಅಳವಡಿಸುವುದು ಕಡ್ಡಾಯ. ಆದರೆ ಈ ಕಾರುಗಳಿಗೆ ಸಂಪೂರ್ಣವಾಗಿ ಕಬ್ಬಿಣದ ಜಾಲರಿಗಳನ್ನು ಅಳವಡಿಸದೇ ಸಫಾರಿಯಲ್ಲಿ ಬಳಸುತ್ತಿರುವುದು ಆತಂಕ ಉಂಟಾಗಿದೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರವಾಸಿಗರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.