ಪೇ ಚಾನೆಲ್‌ ಆಯ್ಕೆ ಮಾಡಿಲ್ಲವೇ ? ಹಾಗಾದ್ರೆ ಇಂದೇ ಸ್ಥಗಿತವಾಗುತ್ತೆ ನಿಮ್ಮ ಟಿವಿ ಪ್ರಸಾರ..

0
1142

ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಟ್ರಾಯ್ ನಿಯಮದ ಪ್ರಕಾರ ಜನವರಿ 31 ರೊಳಗೆ ಗ್ರಾಹಕರು ತಮಗೆ ಇಷ್ಟವಾದ ಪೇ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿತ್ತು. ನಂತರ ಇದಕ್ಕೆ ಫೆಬ್ರುವರಿ 7 ರ ವರೆಗೆ ಗಡುವು ನೀಡಿತ್ತು. ಅದರಂತೆ ಈ ದಿನ ಚಾನಲ್-ಗಳ ಆಯ್ಕೆ ಮಾಡದಿದ್ದರೆ ಇಂದೇ ನಿಮ್ಮ ಟಿವಿ ಸ್ಥಗಿತವಾಗುತ್ತೆ.

ಹೌದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌)ದ ನೂತನ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಅನ್ವಯ ಗ್ರಾಹಕರಿಗೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಗುರುವಾರ (ಫೆ.7) ಮುಕ್ತಾಯವಾಗಲಿದೆ. ವಾರದ ಹಿಂದೆಯೇ ಕೇಬಲ್‌ ಆಪರೇಟರ್‌ಗಳು ಉಚಿತ ಚಾನೆಲ್‌ಗಳ ಆಯ್ಕೆಗಾಗಿ ಗ್ರಾಹಕರಿಗೆ ಚಾನೆಲ್‌ಗಳ ಪಟ್ಟಿನೀಡಿ, ನಿಗದಿತ ಅವಧಿಯಲ್ಲಿ ಚಾನೆಲ್‌ ಆಯ್ಕೆ ಮಾಡಿ ತಿಳಿಸುವಂತೆ ಸೂಚಿಸಿದ್ದರು. ಆದರೆ ಇದುವರೆಗೂ ರಾಜ್ಯದಲ್ಲಿ ಶೇ.2ರಷ್ಟುಗ್ರಾಹಕರು ಮಾತ್ರ ಉಚಿತ ಚಾನೆಲ್‌ಗಳ ಆಯ್ಕೆ ಮಾಡಿದ್ದಾರೆ. ಟ್ರಾಯ್‌ ಸೂಚನೆ ಪ್ರಕಾರ ಗುರುವಾರದ ನಂತರ ಪೇ ಚಾನೆಲ್‌ಗಳ ಪ್ರಸಾರ ಕಡಿತಗೊಳ್ಳಲಿದೆ. ಎಂದು ರಾಜ್ಯ ಕೇಬಲ್‌ ಆಪರೇಟರ್‌ಗಳ ಸಂಘದ ತಿಳಿಸಿದೆ.

ಎಷ್ಟಿದೆ ಚಾನೆಲ್ ದರ?

ಕನ್ನಡದ ಪೇಯ್ಡ್ ಚಾನೆಲ್ ಗಳ ದರ ಇಂತಿದೆ: ಉದಯ ಮೂವೀಸ್ 16 ರೂ. NEWS 18 ಕನ್ನಡ 25 ಪೈಸೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ 19 ರೂ., ಚಿಂಟು ಟಿವಿ ಕನ್ನಡ 6 ರೂ., ಉದಯ ಕಾಮಿಡಿ 6 ರೂ., ಉದಯ ಮ್ಯೂಸಿಕ್ 6 ರೂ., ಉದಯ ಟಿವಿ 17 ರೂ., ಕಲರ್ಸ್ ಕನ್ನಡ 19 ರೂ., ಸ್ಟಾರ್ ಸುವರ್ಣ 19 ರೂ., ಜೀ ಕನ್ನಡ 19 ರೂ., ಸುವರ್ಣ ಪ್ಲಸ್ ಚಾನಲ್ ಗೆ 5 ರೂ. ಡಿಸ್ಕವರಿ ಚಾನೆಲ್ ಗೆ 4 ರೂ., ಡಿಸ್ಕವರಿ ಕಿಡ್ಸ್ ಚಾನೆಲ್ ಗೆ 3 ರೂ., ಅನಿಮಲ್ ಪ್ಲಾನೆಟ್ ಗೆ 24 ರೂ. ದರ ನಿಗದಿ ಮಾಡಲಾಗಿದೆ. ಸ್ಪೋರ್ಟ್ಸ್ ಚಾನೆಲ್ ಗಳಾದ ಸೋನಿ ಇ.ಎಸ್.ಪಿ.ಎನ್. ಹೆಚ್ ಡಿಗೆ 7 ರೂ., ಸೋನಿ ಇ.ಎಸ್.ಪಿ.ಎನ್. ಗೆ 5 ರೂ., ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗೆ 4 ರೂ. ದರ ನಿಗದಿ ಮಾಡಲಾಗಿದೆ.

ಪೇ ಚಾನೆಲ್‌ ಕಡಿತ?

ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಕೆಲವು ಪೇ ಚಾನೆಲ್‌ ಪ್ರಸಾರ ಕಡಿತವಾಗಿದ್ದು, ಗ್ರಾಹಕರಿಗೆ ಅಡಚಣೆಯಾಗಿದೆ. ಗುರುವಾರದ ಬಳಿಕ ಎಲ್ಲೆಡೆ ಈ ಪೇ ಚಾನೆಲ್‌ ಪ್ರಸಾರದಲ್ಲಿ ವ್ಯತ್ಯಯವಾಗಲಿದೆ. ಟ್ರಾಯ್‌ ನೂತನ ನೀತಿಯ ಅನ್ವಯ ಗ್ರಾಹಕರು ಶೇ.18ರಷ್ಟುಜಿಎಸ್‌ಟಿ ಸೇರಿ 153 ರು.ಗಳಿಗೆ ನೂರು ಉಚಿತ ಚಾನೆಲ್‌ಗಳನ್ನು ವೀಕ್ಷಿಸಬಹುದು. ನಂತರ ತಮ್ಮಿಷ್ಟದ ಚಾನೆಲ್‌ಗಳನ್ನು ವೀಕ್ಷಿಸಲು ನಿಗದಿತ ಮೊತ್ತ ಪಾವತಿಸಬೇಕು. ಇದೀಗ ಉಚಿತ ಚಾನೆಲ್‌ಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಆದಾಯ ಹಂಚಿಕೆ ಗೊಂದಲ:

ಆದಾಯ ಹಂಚಿಕೆ ವಿಚಾರದಲ್ಲಿ ಕೇಬಲ್‌ ಆಪರೇಟರ್‌ಗಳು ಹಾಗೂ ಮಲ್ಟಿಸಿಸ್ಟಂ ಆಪರೇಟರ್‌(ಎಂಎಸ್‌ಓ) ನಡುವೆ ಗೊಂದಲ ಮೂಡಿದೆ. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ಟ್ರಾಯ್‌’, ಕೇಬಲ್‌ ಆಪರೇಟರ್‌ಗಳಿಗೆ ಶೇ.45ರಷ್ಟುಮತ್ತು ಎಂಎಸ್‌ಓ ಗಳಿಗೆ ಶೇ.55ರಷ್ಟುಆದಾಯದ ಪಾಲು ಪಡೆಯುವಂತೆ ಸೂಚಿಸಿದೆ. ‘ಆದರೆ, ಈ ಪ್ರಕಾರ ಆದಾಯ ಪಡೆದು ಕೇಬಲ್‌ ಸೇವೆ ನೀಡಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೇಬಲ್‌ ಆಪರೇಟರ್‌ಗಳು ಹಾಗೂ ಈ ಉದ್ದಮ ನಂಬಿರುವ ಸಿಬ್ಬಂದಿ ಬೀದಿಗೆ ಬೀಳುತ್ತೇವೆ. ಆದರಿಂದ ಆದಾಯ ಹಂಚಿಕೆ ಅವೈಜ್ಞಾನಿಕವಾಗಿದ್ದು, ಈ ಆದಾಯ ಪಡೆದು ಬದುಕು ದೂಡುವುದು ಕಷ್ಟವಾಗುತ್ತದೆ. ಆದಾಯದ ಪಾಲು ಹೆಚ್ಚಿಸಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎನ್ನುತ್ತಾರೆ ಕೇಬಲ್‌ ಆಪರೇಟರ್‌ಗಳು.

Also read: SSC ನೇಮಕಾತಿ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ..