ಬೆಳ್ಳಿತೆರೆಯ ಅಜರಾಮರ ಅಭಿನೇತ್ರಿ ಎಮ್ ಜಯಶ್ರೀ

0
560

ಬಹುಪಾಲು ಕಲಾವಿದರ ಬದುಕು ದುಸ್ಥಿತಿಯಲ್ಲೇ ಕೊನೆಗೊಳ್ಳುತ್ತಿರುವುದಂತೂ ಸತ್ಯ! ಇಂತಹ ವಿಧಿಲೀಲೆಗೆ ಸಿಲುಕಿ ಲೀನವಾದವರ ಸಾಲಿಗೆ ಸೇರಿ ಹೋಗಿರುವ ಖ್ಯಾತ ಅಭಿನೇತ್ರಿ ಹಿರಿಯ ಚಲನಚಿತ್ರ ನಟಿ ಎಂ. ಜಯಶ್ರೀ ಅವರು ಹತ್ತಿರ ಹತ್ತಿರ ಅರ್ಧ ಸಾವಿರ ಸಿನಿಮಾಗಳನ್ನು ಕೊಟ್ಟು ಹೋಗಿದ್ದಾರೆ!

ಮೂಲತಃ ಮೈಸೂರಿನವರಾದ ಜಯಶ್ರೀ ಹಾಸಿ ಹೊದಿಯುವಷ್ಟು ಬಡತನವೇ ತುಂಬಿದ್ದ ಕುಟುಂಬದಲ್ಲಿ ಜನಿಸಿದ ಹಿರಿಯ ಮಗಳು. ತಂದೆಯ ಆಕಸ್ಮಿಕ ಮರಣ ಜಯಶ್ರೀಗೆ ಬರಸಿಡಿಲಿನಂತೆ ಬಂದೆರಗಿತ್ತು. ಜಯಶ್ರೀ ಕಷ್ಟಕ್ಕೆ ಅಂಜಲಿಲ್ಲ. ತಮಿಳುನಾಡಿನ ಪಕ್ಷಿರಾಜ ಸ್ಟುಡಿಯೋದ ಮಾಲೀಕರ ಸಹೋದರಿ ದೇವಿ ಎಂಬ ಹೆಣ್ಣು ಮಗಳು ಸ್ನೇಹಿತೆಯಾಗಿ ಜಯಶ್ರೀಗೆ ಸಿಕ್ಕಿದಳು. ಅದೇ ಇವರ ಮುಂದಿನ ಬದುಕಿಗೆ ದಾರಿದೀಪವಾಗಿತ್ತು. ಯಾವುದೋ ಕಾಯಿಲೆಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿಸಿಕೊಳ್ಳಲು ಮೈಸೂರಿಗೆ ಬಂದಿದ್ದ ದೇವಿಗೆ ಜಯಶ್ರೀಯ ಗುಣ ಬಹಳ ಹಿಡಿಸಿ ಅದು ಆತ್ಮೀಯ ಸ್ನೇಹಕ್ಕೆ ತಿರುಗಿತ್ತು. ಒಂದು ದಿನ ಜಯಶ್ರೀ ಕುಟುಂಬವನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿಯೇಬಿಟ್ಟಳು!

ಜಯಶ್ರೀ ಧೈರ್ಯದಿಂದ ಮದ್ರಾಸಿನ ಪಕ್ಷಿರಾಜ ಸ್ಟುಡಿಯೋದಲ್ಲಿ ಮೊಟ್ಟಮೊದಲಿಗೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲುವಂತಾಯ್ತು. ಹೀಗೆ ಜಯಶ್ರೀ ಅಭಿನಯಿಸಿದ ಪ್ರಥಮ ಚಿತ್ರ “ವಾಳವಿಲೊ ತಿರುನಾಳ್”. ಅಲ್ಲಿಂದ ಜಯಶ್ರೀ ಅವರ ಬಣ್ಣದ ಬದುಕು ಆರಂಭವಾಯ್ತು. ಒಂದರ ಹಿಂದೆ ಒಂದು ಸಿನಿಮಾ ಅವಕಾಶಗಳು ಅವರತ್ತ ಬರತೊಡಗಿದವು. ಅವರ ಅಭಿನಯದ ಚಿತ್ರಗಳು ಹೆಚ್ಚುತ್ತಾ ಹೋದಂತೆ ಜನಪ್ರಿಯತೆಯ ಪಟ್ಟ ತನ್ನಂತಾನೆ ಅವರಿಗೆ ಒಲಿಯಿತು. ತಿದ್ದಿತೀಡಿದಂತಹ ಹಸನಾದ ಅಂಧವನ್ನು ಹೊಂದಿದ್ದ ಜಯಶ್ರೀ ಆ ಕಾಲದಲ್ಲಿ ಅತ್ಯಂತ ಆಕರ್ಷಕ ಚೆಲುವೆಯಾಗಿ ಬಹುಬೇಗ ಚಿತ್ರಲೋಕದಲ್ಲಿ ಅನಾವರಣಗೊಂಡಿದ್ದರು. ಅಚ್ಚಕನ್ನಡದ ಮೈಸೂರು ಮಲ್ಲಿಗೆ ಜಯಶ್ರೀ ತಮಿಳು ಚಿತ್ರಗಳಲ್ಲಿ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಇತ್ತ ಕನ್ನಡ ಚಿತ್ರರಂಗ ತಾರೆ ಜಯಶ್ರೀಯತ್ತ ದೃಷ್ಟಿಹರಿಸಿತು. ಆಗ ಅಂದಿನ ಖ್ಯಾತನಟ ಹೊನ್ನಪ್ಪ ಭಾಗವತರು ತಾವು ನಾಯಕನಟರಾಗಿದ್ದ “ಭಕ್ತಕುಂಬಾರ” ಚಿತ್ರದ ನಾಯಕಿಯಾಗಿ 1942ರಲ್ಲಿ ಜಯಶ್ರೀ ಅವರನ್ನು ಮತ್ತೆ ಕನ್ನಡನಾಡಿಗೆ ಕರೆತಂದರು. ಆನಂತರ ಅವರು ತನ್ನ ತವರು ನೆಲದಲ್ಲೇ ಅಭಿನಯವನ್ನು ಮುಂದುವರಿಸಿದರು.

ನಲವತ್ತರ ದಶಕದಲ್ಲಿ ತಾರೆ ಜಯಶ್ರೀ ಕನ್ನಡ ಚಿತ್ರಪ್ರೇಮಿಗಳ ಕನಸಿನ ತಾರೆಯಾಗಿ ಮಿನುಗಿದ್ದರು. 1949ರಲ್ಲಿ ಬಿಡುಗಡೆಯಾದ ಅವರ “ನಾಗಕನ್ನಿಕಾ” ಚಿತ್ರವಂತೂ ಕನ್ನಡ ಚಿತ್ರಂಗದಲ್ಲೊಂದು ಹೊಸಕ್ರಾಂತಿಯನ್ನೇ ಮಾಡಿತ್ತು. ನಿರ್ಮಾಪಕರಿಗಂತೂ ಹಣದ ಮಳೆಯನ್ನೇ ಸುರಿಸಿತ್ತು. ಬಹಳ ಬೋಲ್ಡಾಗಿ ಈ ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿದ್ದ ಜಯಶ್ರೀ ಆ ಕಾಲದ ಚಿತ್ರರಸಿಕರ ಕನಸಿನ ರಾಣಿಯಾಗಿದ್ದರು. ನಂತರ ಕಲ್ಯಾಣ್‍ಕುಮಾರ್‍ಗೆ ನಾಯಕಿಯಾಗಿ “ಮುತ್ತೈದೆಭಾಗ್ಯ” ಚಿತ್ರದಲ್ಲಿ ಅಭಿನಯಿಸಿದ ಜಯಶ್ರೀ ಈ ಚಿತ್ರದ ಯಶಸ್ಸಿಗೂ ಬಹುಪಾಲು ಅವರೇ ಕಾರಣರಾಗಿದ್ದರು. ನಟಿ ಜಯಶ್ರೀ ಇದ್ದರೆ ಸಾಕು ಚಿತ್ರಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಮಾತು ನಲವತ್ತು, ಐವತ್ತರ ದಶಕದಲ್ಲಿ ಚಾಲ್ತಿಯಲ್ಲಿತ್ತು. ಹೀಗೆ ಜಯದ ಮೆಟ್ಟಿಲುಗಳೊಡನೆ ಸಾಗಿಬಂದ ಜಯಶ್ರೀ ಕ್ರಮೇಣ ವಯೋಮಾನಕ್ಕೆ ತಕ್ಕ ಹಾಗೆ ಅಮ್ಮನ ಪಾತ್ರಕ್ಕೆ ಬಡ್ತಿ ಪಡೆದರು.

ಮಂಗಳಗೌರಿ, ಮಿಸ್ ಲೀಲಾವತಿ, ಶಿವಶರಣೆ ನಂಬಿಯಕ್ಕ, ಅಮರಭಾರತಿ, ತಿಲೋತ್ತಮೆ, ಜಗನ್ಮೋಹಿನಿ, ಚಂದವಳ್ಳಿಯ ತೋಟ, ಶಿವಗಂಗೆ, ಜಗಜ್ಯೋತಿ ಬಸವೇಶ್ವರ, ನಾಗರಹಾವು, ಸಾವಿರಮೆಟ್ಟಿಲು…… ಸೇರಿದಂತೆ ಸುಮಾರು ಐನೂರು ಚಿತ್ರಗಳಲ್ಲಿ ಜಯಶ್ರೀ ಅಭಿನಯಿಸಿದ್ದರು! ಇದರಲ್ಲಿ ಸುಮಾರು ಐವತ್ತು ಚಿತ್ರಗಳಲ್ಲಿ ವರನಟ ಡಾ. ರಾಜ್‍ಕುಮಾರ್ ಅವರಿಗೆ ಅಮ್ಮನಾಗಿ ಅವರು ನಟಿಸಿರುವುದೂ ಒಂದು ದಾಖಲೆಯೆ. 2006ರ ಅಕ್ಟೋಬರ್ 29ರ ಮುಂಜಾನೆ 8 ಗಂಟೆಯಲ್ಲಿ ಆಶ್ರಮದ ಕೊಠಡಿಯಲ್ಲಿ ತಿಂಡಿ-ತಿನ್ನುತ್ತಾ ಕುಳಿತಿದ್ದ ಹೃದಯವಂತೆ ಕಲಾವಿದೆಯ ಹೃದಯ ಬಡಿತ ಥಟ್ಟನೆ ನಿಂತುಹೋಗಿತ್ತು.