ಶತಮಾನ ಕಂಡ ಅದ್ಭುತ ಮಹಿಳಾ ವಿಜ್ಞಾನಿ: ಮೇಡಂ ಕ್ಯೂರಿ

0
1520

ಮೇಡಂ ಕ್ಯೂರಿ

ಜನನ: 1867, ಮರಣ: 1934

ವೈಜ್ಞಾನಿಕ ಸಂಶೋಧನೆಯ ವಿಷಯ ಬಂದಾಕ್ಷಣ ಮೇಡಂ ಕ್ಯೂರಿ ಅವರ ಹೆಸರು ನೆನಪಾಗದೆ ಇರದು. ಜಗತ್ತಿನಲ್ಲಿ ಎರಡು ಬಾರಿ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಮಹಿಳೆ ಮೇಡಂ ಕ್ಯೂರಿ. ಪೋಲೆಂಡ್ ದೇಶದ ಕ್ಯೂರಿ ಭೌತಶಾಸ್ತ್ರಜ್ಞೆ ಹಾಗೂ ರಸಾಯನಿಕ ಶಾಸ್ತ್ರಜ್ಞೆ. ರೇಡಿಯೋ ವಿಕರಣಗಳ ಕುರಿತು ಈಕೆ ಕೈಗೊಂಡ ಸಂಶೋಧನೆ ಜಗದ್ವಿಖ್ಯಾತವಾದುದು. ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಳಾಗಿ ಕಾರ್ಯನಿರ್ವಹಿಸಿದ ಮೊಟ್ಟಮೊದಲ ಮಹಿಳೆ ಈಕೆ. ಈಕೆಯ ಕುಟುಂಬವೇ ಸಾಧಕರ ಗೂಡು. ಐವರು ನೊಬೆಲ್ ಪ್ರಶಸ್ತಿ ಪಡೆದದ್ದು ಈಕೆಯ ಕುಟುಂಬದ ವೈಶಿಷ್ಟ್ಯ. ಬಾಲ್ಯದಿಂದಲೂ ವೈಜ್ಞಾನಿಕ ವಿಷಯಗಳಲ್ಲಿ ಅಪಾರ ಆಸಕ್ತಿ ಮತ್ತು ಕುತೂಹಲವನ್ನು ಹೊಂದಿದ್ದ ಕ್ಯೂರಿ ಓದಿನಲ್ಲಿ ಸದಾ ಮುಂದು. ಅಪಾರ ಬುದ್ಧಿವಂತೆ. ಪ್ಯಾರಿಸ್‍ನಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಅಲ್ಲಿಯೇ ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕ್ಯೂರಿ ರೇಡಿಯಂ ಮತ್ತು ಪೋಲೋನಿಯಂ ಅನ್ನು ಸಂಶೋಧಿಸಿ ವಿಕರಣ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದರು. 1903ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದ ಕ್ಯೂರಿ 1911ರಲ್ಲಿ ರಾಸಾಯನಿಕಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದರು.

ಹೋರಾಟಗಾರ್ತಿ

ಕ್ಯೂರಿ ಅವರಲ್ಲಿ ಒಬ್ಬ ವಿಜ್ಞಾನಿಯಷ್ಟೇ ಅಲ್ಲ , ಅವರಲ್ಲಿ ಒಬ್ಬ ಚಳವಳಿಗಾರ್ತಿಯೂ ಸಮಾನಾಂತರವಾಗಿ ಬೆಳೆಯುತ್ತಿದ್ದರು. ಅದಾಗಿಯೇ ಪೆÇಲೆಂಡಿನ ಝಾರ್ ಆಡಳಿತದ ವಿರುದ್ಧ ಬೇಸತ್ತು ಸಕ್ರಿಯವಾಗಿದ್ದ `ಪಾಸಿಟಿವ್ ಐಡಿಯಲಿಸ್ಟ್’ ಸಂಘಟನೆಯ ಜತೆ ಗುರುತಿಸಿಕೊಂಡಿದ್ದರು. ಮೊದಲ ಮಹಾ ಯುದ್ಧದಲ್ಲಿ ಫ್ರಾನ್ಸ್ ಮೇಲೆ ದಾಳಿಯಾದಾಗ ತಮ್ಮ ಪ್ರಿಯ ಕೆಲಸ ಸಂಶೋಧನೆಯನ್ನು ಪಕ್ಕಕ್ಕಿಟ್ಟು ಅವರು ಗಾಯಾಳುಗಳ ಚಿಕಿತ್ಸೆಗೆ ಧುಮುಕಿದರು. ಕಾರುಗಳಲ್ಲಿ ಎಕ್ಸ್ ರೇ ಅಳವಡಿಸಿಕೊಂಡು ಗಾಯಾಳು ಸೆನಿಕರ ಸೇವೆಗೆದರು.

ಟೀಕೆಗಳು ಕ್ಯೂರಿ ಬಗ್ಗೆ ಸಾಕಷ್ಟಿದ್ದವು. `ತಮ್ಮ ಗಂಡನ ಸಾಧನೆಯನ್ನು ಮುಂದಿಟ್ಟುಕೊಂಡು ಕ್ಯೂರಿ ನೊಬೆಲ್ ಪಡೆದರು’ ಎಂದು ಅನೇಕರು ಕ್ಯೂರಿ ಅವರನ್ನು ಹೀಗಳೆದಿದ್ದರು. ಇದಕ್ಕೆ ಅಂದಿನ ಪುರುಷ ಪ್ರಧಾನ ಧೋರಣೆಯಲ್ಲದೇ ಮತ್ತೇನೂ ಕಾರಣವಿರಲಿಲ್ಲ. ಆದರೆ, ಈ ಜನ ಬಾಯಿ ಮುಚ್ಚಿಕೊಳ್ಳಬೇಕಾದ ದಿನ ಬಂದೇ ಬಿಟ್ಟಿತು. ಪತಿ ಫಿಯರಿ ಸಾವಿನ ನಂತರವೂ ಅವರ ಶೋಧ ನಿಂತಿರಲಿಲ್ಲ. ಕ್ಯೂರಿಗೆ ಎರಡನೇ ಬಾರಿಗೆ ಇವರಿಗೆ ರೇಡಿಯಂ ಶೋಧಕ್ಕಾಗಿ ರಸಾಯನಶಾಸ್ತ್ರದ ನೊಬೆಲ್ ಬಂತು. ಇಷ್ಟಾದರೂ ಫ್ರಾನ್ಸ್ ತನ್ನ ವಿಜ್ಞಾನ ಅಕಾಡೆಮಿಯಲ್ಲಿ ಇವರನ್ನು ನೇಮಿಸಿಕೊಳ್ಳಲು ಹಿಂಜರಿದಿತ್ತು!

ರೇಡಿಯಂ ಕಂಡುಹಿಡಿದ ಆರಂಭದಲ್ಲಿ ಒಂದು ಗ್ರಾಂ ಶುದ್ಧ ರೇಡಿಯಂ ಬೆಲೆ 7 ಲಕ್ಷದ 50 ಸಾವಿರ ಫ್ರಾಂಕುಗಳಾಗಿದ್ದವು. ಅದರ ಉತ್ಪಾದನೆ ತಮ್ಮದೆಂದು ಪೇಟೆಂಟ್ ಪಡೆದಿದ್ದರೆ ಕ್ಯೂರಿ, ಶ್ರೀಮಂತರಾಗಬಹುದಿತ್ತು. ಇದೇ ವೇಳೆ ಅಮೆರಿಕ ರೇಡಿಯಂ ತಯಾರಿಸುವ ಬಗ್ಗೆ ಮಾಹಿತಿ ಕೋರಿತು. ಆದರೆ ಹಣಕ್ಕಾಗಿ ಅವರು ಆಸೆ ಪಡಲಿಲ್ಲ. ಇನ್ನು ನೊಬೆಲ್‍ನಿಂದ ಬಂದ ಬಹುಪಾಲು ಹಣವನ್ನು ಅವರು ಕ್ಷಯರೋಗ ಚಿಕಿತ್ಸಾ ಕೇಂದ್ರಕ್ಕೆ ನೀಡಿದರು. 1911ರಲ್ಲಿ ಗಳಿಸಿದ 2ನೇ ನೊಬೆಲ್ ಬಹುಮಾನದ ಹಣವನ್ನೂ ಅವರು ಯುದ್ಧನಿಧಿಗೆ ಅರ್ಪಿಸಿದರು.

ಕ್ಯೂರಿ ಬದುಕಿನಲ್ಲೊಂದು ವಿಪರ್ಯಾಸವೂ ಇದೆ. ರೇಡಿಯಂ ಅನ್ನು ಕಂಡುಹಿಡಿದ ಅವರಿಗೇ ಕಡೆಯಲ್ಲಿ ಸಂಶೋಧನೆಗಾಗಿ ಒಂದು ಗ್ರಾಂ ರೇಡಿಯಂ ಬೇಕಾಯಿತು. ಅದಕ್ಕಾಗಿ ಅವರು ಪರದಾಡಬೇಕಾಯಿತು. ಕಡೆಗೆ ಅಮೆರಿಕದ ಪತ್ರಕರ್ತೆ ಮೆಲೋನಿ ಅವರು `ಮೇಡಂ ಕ್ಯೂರಿ ರೇಡಿಯಂ ಫಂಡ್’ ಸ್ಥಾಪಿಸಿ ಜನರಿಂದ ದೇಣಿಗೆ ಸಂಗ್ರಹಿಸಿದರು. ಆಗಿನ ಅಮೆರಿಕ ಅಧ್ಯಕ್ಷ ಹಾರ್ಡಿಂಗ್ ಅವರೇ ರೇಡಿಯಂ ನೀಡಿ ಕ್ಯೂರಿ ಅವರನ್ನು ಅಭಿನಂದಿಸಿದ್ದರು. ತಮ್ಮ ಸಾವಿನ ನಂತರವೂ ಅದರ ಮೇಲಿನ ಒಡೆತನವನ್ನು ತಮ್ಮ ಮಕ್ಕಳಿಗೆ ಹೋಗಲು ಬಿಡಲಿಲ್ಲ.

ಇಚ್ಛಾಶಕ್ತಿ, ಛಲ ಮತ್ತು ಬದ್ಧತೆಯಿದ್ದರೆ ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆಯಬಹುದೆಂಬುದಕ್ಕೆ ಮೇರು ಉದಾಹರಣೆಯಾಗಿರುವ ಕ್ಯೂರಿ ಮಹಿಳೆಯರಿಗೆ ಸಾರ್ವಕಾಲಿಕ ಮಾದರಿಯೆಂದರೆ ಉತ್ಪ್ರೇಕ್ಷೆಯಲ್ಲ…