ಪ್ರಾಚ್ಯವಸ್ತು ಇಲಾಖೆಯಿಂದ ‘ಮಡಿಕೇರಿ ಅರಮನೆಯ’ ದಿವ್ಯ ನಿರ್ಲಕ್ಷ್ಯ !

0
1050

ಶಿಥಿಲಾವಸ್ಥೆಯತ್ತ ಮಡಿಕೇರಿ ಅರಮನೆ

ಮಂಜಿನ ನಗರಿ ಮಡಿಕೇರಿಯಲ್ಲಿ ಹಾಲೇರಿ ಅರಸರು ನಿರ್ಮಿಸಿದ, ಬ್ರಿಟಿಷ್ ಅಧಿಕಾರಿಗಳ ಆಶ್ರಯ ತಾಣವಾಗಿದ್ದ ಅರಮನೆ ಕಟ್ಟಡ ನಿಧಾನವಾಗಿ ಶಿಥಿಲಾವಸ್ಥೆಗೆ ಜಾರುತ್ತಿದೆ.

ಕೊಡಗು `ಸಿ’ರಾಜ್ಯವಾಗಿದ್ದಾಗ ವಿಧಾನ ಸಭಾಂಗಣವಾಗಿದ್ದ ಖ್ಯಾತಿಯನ್ನು ಹೊಂದಿರುವ ಮಡಿಕೇರಿಯ ಅರಮನೆಯನ್ನು ಪುನರುಜೀವನ ಪ್ರಯತ್ನ ನಡೆಯದಿರುವುದು ಅಚ್ಚರಿಯ ವಿಷಯವೇ ಸರಿ.

mercara_fort

ಕೊಡಗು ಜಿಲ್ಲೆ ಮೈಸೂರ ರಾಜ್ಯದೊಂದಿಗೆ ವಿಲೀನವಾದ ಬಳಿಕ ಅರಮನೆಯ ಕೊಠಡಿಗಳು ಸರ್ಕಾರದ ವಿವಿಧ ಇಲಾಖಾ ಕಚೇರಿಗಳಾಗಿ ಮಾರ್ಪಟ್ಟಿದ್ದವು. ಜನ ಸಂಚಾರ, ಸರ್ಕಾರಿ ಸಿಬ್ಬಂದಿಗಳ ಓಡಾಟ ಮತ್ತು ಪ್ರವಾಸಿಗರ ಭೇಟಿಯಿಂದಾಗಿ ಅರಮನೆ ಕಟ್ಟಡ ಒಂದಿಷ್ಟು ನಿರ್ವಹಣೆಯಾಗುತ್ತಿತ್ತು. ಆದರೆ, ಕಳೆದ ವರ್ಷ ಅರಮನೆಯಿಂದ ಡಿಸಿ ಕಚೇರಿ ಮತ್ತು ಜಿಲ್ಲಾಡಳಿತದ ಪ್ರಮುಖ ಇಲಾಖೆಗಳು ಹೊಸ ಕಟ್ಟಡಕ್ಕೆ ಸ್ಥಳಾಂತರವಾದವು.

ಈಗ ಇಲ್ಲಿ ಕೇವಲ ಜಿಲ್ಲಾ ಪಂಚಾಯ್ತಿ ಅಧೀನದ ಇಲಾಖೆಗಳು ಮಾತ್ರ ಇಲ್ಲಿ ಕಾರ್ಯಾಚರಿಸುತ್ತಿವೆ. ಇಷ್ಟರಲ್ಲೇ ಜಿಲ್ಲಾ ಪಂಚಾಯ್ತಿಯೂ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದ್ದು ಮಡಿಕೇರಿಯ ಅರಮನೆ ಕಟ್ಟಡ ಅತಂತ್ರವಾಗುತ್ತಿದೆ. ದುರಸ್ತಿಗೆ ಕ್ರಮ ವಹಿಸಬೇಕಾಗಿದ್ದ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ಈ ಸ್ಮಾರಕವನ್ನು ಮರೆತೇ ಬಿಟ್ಟಿದೆ.

ಪರಿಣಾಮವಾಗಿ ಹಳೇ ವಿಧಾನ ಸಭಾಂಗಣ ಮಳೆಗೆ ಸಿಕ್ಕಿ ಥರಗುಟ್ಟುತ್ತಿದೆ. ಹೆಂಚುಗಳು ಧರೆಗುರುಳುತ್ತಿವೆ. ಹೆಂಚಿನ ಕೆಳಭಾಗದಲ್ಲಿ ಅಳವಡಿಸಲಾಗಿದ್ದ ತಗಡುಗಳು ಗಾಳಿ, ಮಳೆಗೆ ಕಳಚಿಕೊಳ್ಳುತ್ತಿವೆ. ಛಾವಣಿಯಿಂದ ನಿರಂತರ ಮಳೆ ನೀರು ಸೋರುತ್ತಿರುವುದರಿಂದ ಸಿಮೆಂಟ್ ಕಟ್ಟಡ ಶಿಥಿಲವಾಗುತ್ತಿದೆ. ಪಾಚಿಗಟ್ಟಿದ ಅರಮನೆ ಕಟ್ಟಡದ ತುಂಬೆಲ್ಲ ಕಾಡು ಗಿಡಗಳು ಬೆಳೆಯಲಾರಂಭಿಸಿವೆ.

Nalkunadu aramane.Coorg. JITHENDRA M.

ಇಂದಿಗೂ ಜಿಲ್ಲಾ ಪಂಚಾಯ್ತಿ ಸಭೆಗಳು ಹಳೆ ವಿಧಾನ ಸಭಾಂಗಣದಲ್ಲೇ ನಡೆಯುತ್ತಿವೆ. ಆದರೆ, ಈ ವರ್ಷ ಸಭಾಂಗಣದೊಳಗೂ ನೀರೋ ನೀರು. ಸಭಾಂಗಣದ ಛಾವಣಿಗೆ ಅಳವಡಿಸಲಾಗಿರುವ ಮರಮುಟ್ಟುಗಳು ಶಿಥಿಲಗೊಳ್ಳುತ್ತಿವೆ.ಬೆಂಗಳೂರಿನಲ್ಲಿ ತಳವೂರಿರುವ ಪ್ರಾಚ್ಯವಸ್ತು ಇಲಾಖಾ ಅಧಿಕಾರಿಗಳು, ಹುಣ್ಣಿಮೆಗೋ ಅಮಾವಾಸ್ಯೆಗೋ ಇತ್ತ ಬರುತ್ತಾರೆ. ಬಂದವರೇ ಒಂದಿಷ್ಟು ದುರಸ್ತಿ ಮಾಡಿ ಹೋಗುತ್ತಾರೆ.

ಒಂದು ವೇಳೆ ಮಡಿಕೇರಿಯಲ್ಲಿ ಈ ಬಾರಿ ಮಳೆ ಇನ್ನಷ್ಟು ಬಿರುಸುಗೊಂಡರೆ ಮುಂದಿನ ವರ್ಷ ಅರಮನೆ ಕಟ್ಟಡ ನಾಮಾವಶೇಷವಾದರೂ ಅಚ್ಛರಿಯಿಲ್ಲ. ಗತ ಇತಿಹಾಸದ ಅಮೂಲ್ಯ ಸಾಕ್ಷಿಯಾಗಿ ಉಳಿದಿರುವ ಈ ಸ್ಮಾರಕದ ರಕ್ಷಣೆಗೆ ಇಲಾಖೆ ಆಸಕ್ತಿ ವಹಿಸಬೇಕಿದೆ.