ಮಹದಾಯಿ ಹೋರಾಟಕ್ಕೆ ಬಲ ನೀಡಲು ಅಣ್ಣಾ ಹಜಾರೆ ಬಂದಿದ್ದಾರೆ, ರೈತರ ವಿಷಯದಲ್ಲಿ ಆಟವಾಡಬೇಡಿ ಎಂದು ರಾಜಕಾರಣಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ..

0
502

ಮಹದಾಯಿ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಾನು ಜೈಲಿಗೆ ಹೋದರು ಪರವಾಗಿಲ್ಲ, ರೈತರಿಗೆ ಮೋಸವಾಗಲು ಬಿಡುವುದಿಲ್ಲ. ರೈತರು ದೇಶದ ಬೆನ್ನೆಲುಬು, ಸರ್ಕಾರದ ಕಿವಿ ಹಿಡಿದು ಕೆಲಸ ಮಾಡಿಸೋಣ ಎಂದು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗುಡುಗಿದರು.

ಭಾರತ ಕೃಷಿ ಪ್ರಧಾನವಾದ ದೇಶ ಇಲ್ಲಿ ರೈತರ ಪರಿಸ್ಥಿತಿ ದಯನೀಯವಾಗಿದೆ, ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಜನ್ ಲೋಕಪಾಲ್ ಮಸೂದೆ ತರಲು‌ ಹೋರಾಡಿದ್ದೆ, ನಾನು ಯಾವುದೇ ವ್ಯಕ್ತಿ, ಪಕ್ಷದ ಪರವಾಗಿಲ್ಲ, ದೇಶ ಸೇವೆಯೆ ನನ್ನ ಗುರಿ ಎಂದರು.

ಇನ್ನು ಈ ಸಮಸ್ಯೆ ಬಗ್ಗೆ ಹೇಳುವುದಾದರೆ ಉತ್ತರಕರ್ನಾಟಕ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲೆಂದೇ ಗೋವಾದ ಮಹದಾಯಿ ನದಿಯಿಂದ ಕಳಸಾ ಬಂಡೂರಿ ಯೋಜನೆ ಮೂಲಕ ಮಲಪ್ರಭಾ ನದಿಗೆ ಸುಮಾರು 7.56 ಟಿಎಂಸಿ ನೀರನ್ನು ಹರಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆಗೆ ನೀರು ಹರಿಸುವಂತೆ ಕರ್ನಾಟಕ ಸರಕಾರ ಈ ಹಿಂದೆ ಹೈಕೋರ್ಟ್-ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಸರಕಾರದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕಳಸಾ ಬಂಡೂರಿ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಹೇಳಿ ಅರ್ಜಿಯನ್ನು ವಜಾಮಾಡಿತ್ತು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೀಗೆ ಹಲವು ದೊಡ್ಡ-ದೊಡ್ಡ ನಾಯಕರಿಂದಲು ಕೂಡ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ.

ನನಗೆ ನಿಮ್ಮ ಮತ ಬೇಡ, ನಾನು ರಾಜಕೀಯ ವ್ಯಕ್ತಿ ಅಲ್ಲ ನನಗೆ ಅದರ ಅವಶ್ಯಕತೆಯೂ ಇಲ್ಲ. ಜನರ ಸೇವೆ ಮಾಡವುದೇ ನನ್ನ ಗುರಿ. ನಾನು ಗಾಂಧಿ ತತ್ವ ಪಾಲಿಸುವವನು, ಮಹತ್ಮಾ ಗಾಂಧೀಜಿಯವರ ಅಭಿಮಾನಿ ,ನನಗೆ ಎಲ್ಲಿಯೂ ಕೂಡ ಬ್ಯಾಂಕ್ ಅಕೌಂಟ್ ಇಲ್ಲ, ಕೆಲಸದಿಂದ ಬಂದ ಪಿಂಚಣಿ, ಕೋಟ್ಯಾಂತರ ರೂಪಾಯಿ ಪ್ರಶಸ್ತಿ ಹಣ ಎಲ್ಲವನ್ನು ಜನರ ಕಲ್ಯಾಣಕ್ಕೆ ನೀಡಿದ್ದೇನೆ, ನನ್ನ ಬಳಿ ಇರುವ ಅಸ್ಥಿ ಎಂದರೆ ಅದು 1 ಹಾಸಿಗೆ ಮತ್ತು 1 ಊಟದ ತಟ್ಟೆ ಮಾತ್ರ. ನನ್ನ ಜೊತೆ ಕೈ ಜೋಡಿಸಿ ಉತ್ತಮ‌ ಸಮಾಜ‌ ನಿರ್ಮಾಣ ಮಾಡೋಣ ಎಂದರು.