ಮಹದಾಯಿ ವಿಷಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆಯೇ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ: ನೊಂದ ನಾಗರೀಕ…

0
737

ಉತ್ತರಕರ್ನಾಟಕ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಉದ್ದೇಶಿಸಿದ್ದ ಕಳಸಾ ಬಂಡೂರಿ ಯೋಜನೆಗೆ ಗೋವಾ ಸರ್ಕಾರ ಮಹದಾಯಿ ನದಿಯಿಂದ ನೀರು ಹರಿಸದಿರುವುದರಿಂದ ಈ ಜಿಲ್ಲೆಗಳ ಜನ ಇಂದು ಮಹದಾಯಿ ಕಳಸಾ ಬಂಡೂರಿ ನಾಲ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ಇಂದು ಉತ್ತರಕರ್ನಾಟಕ ಬಂದ್-ಗೆ ಕರೆ ನೀಡಿದೆ.

ಉತ್ತರಕರ್ನಾಟಕ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲೆಂದೇ ಗೋವಾದ ಮಹದಾಯಿ ನದಿಯಿಂದ ಕಳಸಾ ಬಂಡೂರಿ ಯೋಜನೆ ಮೂಲಕ ಮಲಪ್ರಭಾ ನದಿಗೆ ಸುಮಾರು 7.56 ಟಿಎಂಸಿ ನೀರನ್ನು ಹರಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆಗೆ ನೀರು ಹರಿಸುವಂತೆ ಕರ್ನಾಟಕ ಸರಕಾರ ಈ ಹಿಂದೆ ಹೈಕೋರ್ಟ್-ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಸರಕಾರದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕಳಸಾ ಬಂಡೂರಿ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಹೇಳಿ ಅರ್ಜಿಯನ್ನು ವಜಾಮಾಡಿತ್ತು. ಮಹದಾಯಿ ನದಿ ಸಮಸ್ಯೆಯನ್ನು ಕೋರ್ಟಿನ ಹೊರಗೆ ಗೋವಾ ಸಿಎಂ ಮತ್ತು ಪ್ರಧಾನಿಯವರ ಜೊತೆ ಮಾತನಾಡಿ ಬಗೆಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದೆ ತಿಂಗಳಲ್ಲಿ ಲಿಖಿತವಾಗಿ ಭರವಸೆ ನೀಡುವುದಾಗಿ ಹೇಳಿದ್ದರು, ಇದರ ಬಗ್ಗೆ ಗೋವಾ ಸಿಎಂ ಮನೋಹರ್ ಪರೀಕ್ಕರ್ ಅವರಿಗೂ ಪತ್ರ ಬರೆದ್ದಿದ್ದರು.

ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಹೋರಾಟ ಸಮಿತಿ, ಈಗ ಅವರು ತಮ್ಮ ಭರವಸೆ ಉಳಿಸಿಕೊಳ್ಳಲು ವಿಳಂಬ ಮಾಡುತ್ತಿರುವುದರಿಂದ, ಸಮಿತಿ ಬಂದ್-ಗೆ ಕರೆ ನೀಡಿದೆ. ಈ ಬಗ್ಗೆ ಪ್ರತಿಕ್ರಯಿಸಿದ ಯಡಿಯೂರಪ್ಪ ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಸಮಸ್ಯೆಯನ್ನು ಬಗೆಹರಿಸುವ ಬದಲಾಗಿ, ಬಾಹ್ಯವಾಗಿ ಬೆಂಬಲ ನೀಡುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ನಡೆಸಿದ ಅವರು, ಸಿಎಂ ಸಮಸ್ಯೆಯನ್ನು ಬಗೆಹರಿಸುವತ್ತ ಮನಸ್ಸು ಮಾಡುತ್ತಿಲ್ಲ ಅವರು ಕೇವಲ ಪಕ್ಷದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಜನರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದರು. ಉತ್ತರಕರ್ನಾಟಕ ಬಂದ್-ಗೆ ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ಬೈಲುಹೊಂಗಲ, ಗದಗ, ಬಾಗಲಕೋಟೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೋರಾಟ ಸಮಿತಿ ನೀಡಿದ ಬಂದ್ ಕರೆಗೆ ಕನ್ನಡ ಚಿತ್ರರಂಗವು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲು ರಕ್ಷಣಾ ಸಚಿವ ರಾಮಲಿಂಗ ರೆಡ್ಡಿ ಈ ಜಿಲ್ಲೆಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಿದ್ದಾರೆ. ಇನ್ನು ಈ ವಿಷಯವನ್ನು ಬಗೆಹರಿಸಲು ಪ್ರಯತ್ನ ಪಡುತ್ತಿರುವ ರಾಜ್ಯ ಬಿಜೆಪಿ ನಾಯಕರು ಪಕ್ಷದ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಚರ್ಚೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಮುಂಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷದ ಮೇಲೆ ಕಳಸಾ -ಬಂಡೂರಿ ಬಿಸಿ ತಟ್ಟುವುದಂತೂ ಖಚಿತ…!