ಬರಗಾಲಕ್ಕೆ ಪ್ರಸಿದ್ಧವಾಗಿದ್ದರೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯಾವಾಗಲೂ ಈ ಜಿಲ್ಲೆನೆ ಮುಂದೆ

0
609

ಮಹಿಪತಿದಾಸರು ಮಹಾಯೋಗಿಗಳು
ವಿಜಾಪೂರ ಜಿಲ್ಲೆ ಬರಗಾಲಕ್ಕೆ ಪ್ರಸಿದ್ಧವಾಗಿದ್ದರೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯಾವಾಗಲೂ ಸಂಪದ್ಭರಿತವಾಗಿದೆ. ಜಿಲ್ಲೆಯಲ್ಲಿ ಕಾಲಕಾಲಕ್ಕೆ ಅನೇಕ ದಾಸರು, ಶರಣರು, ಸಂತರು, ಜ್ಞಾನಿಗಳು, ತ್ಯಾಗಿಗಳು, ಯೋಗಿಗಳು ಅವತಾರವೆತ್ತಿ ನೆಲವನ್ನು ಪಾವನಗೊಳಿಸಿದ್ದಾರೆ. ಇಂಥವರಲ್ಲಿ ಕಾಖಂಡಕಿ ಶ್ರೀ ಮಹಿಪತಿದಾಸರು ಅಗ್ರಗಣ್ಯರು. ತಮ್ಮ ಭೌತಿಕ ದೇಹ ತ್ಯಜಿಸಿ ಮುನ್ನೂರು ವರ್ಷಗಳು ಸಂದಿದ್ದರು ಇನ್ನೂ ಕಾಖಂಡಕಿ ಗ್ರಾಮದ ವೃಂದಾವನದಲ್ಲಿ ಪೂರ್ತಿ ಸನ್ನಿಹಿತರಾಗಿದ್ದು ಭಕ್ತಕೋಟಿ ಅಭೀಷ್ಟ ಪೂರೈಸುತ್ತಿದ್ದಾರೆ.
ಮಹಿಪತಿದಾಸರು ಮೂಲತಃ ಬಾಗಲಕೋಟೆಯ ಕಾಥವಟೆ ಮನೆತನದವರು. ಮಹಿಪತಿದಾಸರ ಅಜ್ಜ ರಂಗಭಟ್ಟರು. ಅತ್ಯಂತ ಸಾತ್ವಿಕರು, ದಾನಧರ್ಮಗಳಲ್ಲಿ ನಿರತರಾಗಿರುತ್ತಿದ್ದರು. ರಂಗಭಟ್ರು. ಚಿಕ್ಕವಯಸ್ಸಿನಲ್ಲಿಯೇ ಕಾಶಿಯಾತ್ರೆ ಮಾಡಿ ವಿಜಾಪೂರದಲ್ಲಿಯೇ ನೆಲೆಸತೊಡಗಿದರು. ರಂಗಭಟ್ಟರಿಗೆ ಒಬ್ಬನೇ ಪುತ್ರ ಕೋನೇರಿರಾಯ.
ಕೋನೇರಿರಾಯರಿಗೆ ಇಬ್ಬರು ಪುತ್ರರು. ಹಿರಿಯವ ಗುರುರಾಯ, ಕಿರಿಯವನೇ ಮಹಿಪತಿರಾಯರು. ಮಹಿಪತಿರಾಯರ ಜನ್ಮ ವಿಜಾಪೂರದಲ್ಲಿ ಕ್ರಿ. ಶ. 1611ರಲ್ಲಿ ಆಯಿತು. ಬಾಲಕ ಮಹಿಪತಿಗೆ ಸಕಾಲದಲ್ಲಿ ಕುಲಗುರುಗಳಾದ ಕೊಲ್ಹಾರದ ಪ್ರಹ್ಲಾದ ಕೃಷ್ಣಾಚಾರ್ಯ ಉಮರ್ಜಿ ಆಚಾರ್ಯರಿಂದ ಉಪನಯನವಾಯಿತು. ಆ ಸಮಯದಲ್ಲಿ ಬಾಲಕ ಮಹಿಪತಿಯ ಜನ್ಮ ಕುಂಡಲಿ ನೋಡಿದ ಉಮರ್ಜಿ ಆಚಾರ್ಯರು, `ರಾಯರೇ ನಿಮ್ಮ ಮಗನ ಕುಂಡಲಿ ಶ್ರೇಷ್ಠವಾಗಿದೆ. ಗ್ರಹಗಳು ಉಚ್ಚಸ್ಥಾನದಲ್ಲಿವೆ ಇವನು ನಿಶ್ಚಿತವಾಗಿಯೂ ರಾಜಭೋಗ ಪಡೆಯುವನು ಹಾಗೂ ಮಹಾಯೋಗಿಯಾಗಿ ಪ್ರಸಿದ್ಧನಾಗುವನು’ ಎಂದು ಭವಿಷ್ಯ ನುಡಿದಿದ್ದರು. ಮಹಿಪತಿಯ ವಿದ್ಯಾಭ್ಯಾಸ ತಂದೆಯವರ ಬಳಿಯೇ ಸಾಗಿತು. ಕೋನೇರಿರಾಯರು ವೈದಿಕ ವಿದ್ವಾಂಸರಾಗಿದ್ದರು. ಬಾಲ ಮಹಿಪತಿ ಬೇರೆ ವಿದ್ವಾಂಸರಿಂದ ಸಕಲಶಾಸ್ತ್ರ ಕಲಿತು ಪಾರಂಗತನಾದನು.

ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಸಂಸ್ಕøತ, ಕನ್ನಡ, ಹಿಂದಿ, ಮರಾಠಿ, ಉರ್ದು, ಪರ್ಷಿಯನ್ ಭಾಷೆಗಳನ್ನು ಚೆನ್ನಾಗಿ ಕಲಿತು ಮಹಿಪತಿ ವಿದ್ವಾಂಸನಾದ. ಈಗ ತರುಣ ಮಹಿಪತಿ ಮಹಾನ್ ಪಂಡಿತನಾಗಿದ್ದನು. ಮಹಿಪತಿರಾಯರಿಗೆ ಪುರಾಣ, ಪ್ರವಚನ ಕಲೆಯು ಸಿದ್ಧಿಸಿತು. ಇವರ ಪುರಾಣ, ಪ್ರವಚನಗಳೆಂದರೆ ಆಗ ಅತ್ಯಂತ ಜನಪ್ರಿಯವಾಗಿದ್ದವು. ರಾಯರ ಪುರಾಣ ಪ್ರವಚನ ಕೇಳಲು ಸಾವಿರಾರು ಜನರು ಗಂಟೆಗಟ್ಟಲೆ ಚಳಿ, ಮಳೆ, ಬಿಸಿಲೆನ್ನದೆ ನೆರೆಯುತ್ತಿದ್ದರು.
ಮಹಿಪತಿರಾಯರು ವಿಜಾಪೂರದ ಆದಿಲ್ ಶಹಾ ಕಾಲದಲ್ಲಿ ಇದ್ದರು (17ನೇ ಶತಮಾನ). ಮಹಿಪತಿರಾಯರು ಸಾವಿರಾರು ಪದಗಳನ್ನು ರಚಿಸಿದ್ದಾರೆ. ಕನ್ನಡದ ಪದದಲ್ಲಿಯೇ ಮರಾಠಿ, ಹಿಂದಿ, ಪಾರ್ಶಿಭಾಷೆಗಳನ್ನು ಬಳಸಿ ತಮ್ಮ ಮಹಾನತೆ ಮೆರೆದಿದ್ದಾರೆ. ರಾಯರು ಕೆಲ ಅನಿವಾರ್ಯ ಪ್ರಸಂಗದಲ್ಲಿ ಪವಾಡವನ್ನು ತೋರಿಸಿದರು. ಕ್ರಿ.ಶ. 1681ನೇ ಕಾರ್ತೀಕ ಮಾಸ ಅಮವಾಸ್ಯೆ ದಿನ ಇಹಲೋಕ ತ್ಯಜಿಸಿ ಪರಂಧಾಮಕ್ಕೆ ಪಯಣಿಸಿದರು. ಮುಂದೆ ಮಹಿಪತಿದಾಸರ ಸ್ವಪ್ನ ಸೂಚನೆಯಂತೆ ಕಾಖಂಡಕಿಯಲ್ಲಿ ರಾಯರು ಹೇಳಿದ ಜಾಗದಲ್ಲಿ ವೃಂದಾವನ ಸ್ಥಾಪಿಸಲಾಯಿತು.

ಈಗಲೂ ಕಾಖಂಡಕಿಯಲ್ಲಿ ಪ್ರತಿವರ್ಷ ಕಾರ್ತಿಕ ಅಮವಾಸ್ಯೆ ಬಹಳ ಸಂಭ್ರಮದಿಂದ ಮಹಿಪತಿದಾಸರ ಆರಾಧನೆ ಜರುಗುವದು. ದೂರ ದೂರದ ನಗರಗಳಿಂದ ಸಾವಿರಾರು ಭಕ್ತರು, ರಾಯರ ವಂಶಜರು ಕಾಖಂಡಕಿಗೆ ಆಗಮಿಸಿ ಉತ್ಸವದಲ್ಲಿ ಭಾಗವಹಿಸಿ ಅನುಗ್ರಹಿತರಾಗುತ್ತಿದ್ದಾರೆ. ದಿನಾಲೂ ರಾಯರ ವೃಂದಾವನಕ್ಕೆ ಪೂಜೆ ಪುನಸ್ಕಾರ, ನೈವೇದ್ಯ ತಪ್ಪದೇ ನಡೆಯುತ್ತಿದೆ. ರಾಯರ ವೃಂದಾವನದ ಸಮೀಪವೇ ಅವರ ಮಗ ಕೃಷ್ಣರಾಯರ ವೃಂದಾವನವೂ ಇದೆ. ಕೃಷ್ಣರಾಯರೂ ತಂದೆಯಂತೆಯೇ ನೂರಾರು ಪದಗಳನ್ನು ರಚಿಸಿದ್ದಾರೆ. ಹೀಗೆ ದಿವಾನ ಮಹಿಪತಿರಾಯರು ಮಹಾನ್ ಯೋಗಿಯಾಗಿ ಅನೇಕ ಭಕ್ತರನ್ನು ಈಗಲೂ ಉದ್ಧರಿ ಸುತ್ತಿದ್ದಾರೆ.