ಮನೆಯವ್ರ ಜೊತೆ ಎಲ್ಲಾದ್ರೂ ಹೋಗ್ಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಒಮ್ಮೆ ಭೇಟಿ ಕೊಡಿ ಮಹಿಮಾ ರಂಗಸ್ವಾಮಿ ಬೆಟ್ಟಕ್ಕೆ..ಚಾರಣ ಪ್ರಿಯರಿಗೆ, ದೈವ ಭಕ್ತರಿಗೆ, ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ…

0
1774

ಭಾನುವಾರ ಮನೆಯವ್ರ ಜೊತೆ ಎಲ್ಲಾದ್ರೂ ಹೋಗ್ಬೇಕು ಅಂತ ಪ್ಲಾನ್ ಮಾಡ್ತಾ ಇದ್ರೆ ಒಮ್ಮೆ ಭೇಟಿ ಕೊಡಿ ಮಹಿಮಾ ರಂಗಸ್ವಾಮಿ ಬೆಟ್ಟಕ್ಕೆ..ಚಾರಣ ಪ್ರಿಯರಿಗೆ, ದೈವ ಭಕ್ತರಿಗೆ, ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಜಾಗ…

ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಯಣಿಸುವಲ್ಲಿ ನೆಲಮಂಗಲ ದಾಟಿದ ಮೇಲೆ ದೊಡ್ಡೇರಿ, ಕುಲುವನ ಹಳ್ಳಿಯ ನಂತರ ಸ್ವಲ್ಪ ಎಡಕ್ಕೆ ಕಣ್ಣು ಹಾಯಿಸಿದಲ್ಲಿ ಶಿವಗಂಗೆ ಬೆಟ್ಟದ ರಾಕೃತಿಕ ಹಿನ್ನಲೆಯಲ್ಲಿ ಹಚ್ಚ ಹಸುರಿನಿಂದ ಗೋಚರಿಸುವ ಪುಟ್ಟ ಬೆಟ್ಟವೊಂದು ಗೋಚರಿಸುತ್ತದೆ. ಬೆಟ್ಟದ ತುದಿಯಲ್ಲಿ ನೀಲಗಿರಿ ವೃಕ್ಷಗಳ ನಡುವೆ ದೇಗುಲದ ಚಿತ್ರಣವೂ ಕಾಣಿಸುತ್ತದೆ.

ಬೆಂಗಳೂರಿನಿಂದ ೪೫ ಕಿಮೀ ದೂರದಲ್ಲಿ ಹೆದ್ದಾರಿಯಲ್ಲಿರುವ ಕುಲವನಹಳ್ಳಿ ಎಂಬಲ್ಲಿ ಎಡಕ್ಕೆ ಶ್ರೀ ರಂಗನಾಥ ಸ್ವಾಮಿಯನ್ನೊಳಗೊಂಡ ಕಮಾನೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಸುಮಾರು ಎರಡು ಕಿಮೀ ಧಾವಿಸಿದ್ದಲ್ಲಿ ಮಹಿಮಾಪುರವೆಂಬಲ್ಲಿ ಬಹುತೇಕ ನೀಲಗಿರಿ, ಅರಳಿ ಹಾಗು ಆಲದ ಮರಗಳಿಂದಲೇ ಆವೃತವಾಗಿರುವ ಶ್ರೀ ಮಹಿಮಾ ರಂಗಸ್ವಾಮಿ ಬೆಟ್ಟವು ನಿಮ್ಮನ್ನು ಬರಮಾಡಿಕೊಳ್ಳುತ್ತದೆ.

ಸುಮಾರು ೩೦೦ ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟವು ತನ್ನ ಸುತ್ತಮುತ್ತಲಿನ ತಂಪಾದ ವಾತಾವರಣದಿಂದ ಮುದ ನೀಡುತ್ತದೆ.ಇನ್ನು ಬೆಟ್ಟವೇರಿದ್ದಲ್ಲಿ ಎದುರುಗೊಳ್ಳುತ್ತದೆ ಚೋಳರ ಕಾಲದಲ್ಲಿ ನಿರ್ಮಿತಗೊಂಡ ಶ್ರೀ ಮಹಿಮಾ ರಂಗಸ್ವಾಮಿ ದೇಗುಲ. ಈ ದೇಗುಲದ ಗೋಪುರದ ಮೇಲಿರುವ ಸಿಂಹದ ಲಾಂಛನವು ಈ ದೇಗುಲವು ಚೋಳರ ಕಾಲದಲ್ಲಿ ನಿರ್ಮಿತವಾಗಿದೆ ಎಂಬುದನ್ನು ಸೂಚಿಸುತ್ತದೆ.ಪುರಾತನ ಕಂಬಗಳಿಂದ ಆವೃತವಾಗಿರುವ ದೇಗುಲದ ಪ್ರಾಂಗಣದ ಕಂಬಗಳಲ್ಲಿ ವಿಷ್ಣು ಲಕ್ಷ್ಮಿಯರೊಳಗೊಂಡಂತೆ ಹಲವು ದೇವರುಗಳ ಕೆತ್ತನೆಯನ್ನು ಕಾಣಬಹುದು.

ಪೌರಾಣಿಕ ಹಿನ್ನಲೆ:

ಹಿಂದೆ ಗರುಡನ ತಾಯಿ ವಿನುತೆಯು ಮಕ್ಕಳಿಲ್ಲದ ಕಾರಣ ಸೂರ್ಯದೇವನನ್ನು ಕುರಿತು ತಪಸ್ಸು ಮಾಡುತ್ತಲೇ. ಆಕೆಯ ತಪಕ್ಕೆ ಮೆಚ್ಚಿದ ಸೂರ್ಯನು ಎರಡು ಮೊಟ್ಟೆಗಳನ್ನು ನೀಡಿ ಇದನ್ನು ಪೋಷಿಸು ಎನ್ನಲಾಗಿ ಕೂತುಹಲ ಹತ್ತಿಕ್ಕಲಾರದೆ ಸರ್ಪವೊಂದು ಹೊರಬರುತ್ತದೆ. ಕಂಗಾಲಾದ ತಾಯಿಯು ಇನ್ನೊಂದು ಮೊಟ್ಟೆಯನ್ನು ಒಡೆದಾಗ ಪಕ್ಷಿಯೊಂದು ಹೊರಬಂದು ಆಹಾರಕ್ಕಾಗಿ ಪರಿತಪಿಸಲಾಗಿ ವಿನುತೆಯು ಅಲ್ಲಿದ್ದ ಒಬ್ಬ ರಾಕ್ಷಸಿಯನ್ನು ಕೊಂದು ಹೊಟ್ಟೆ ತುಂಬಿಸಿಕೊ ಎಂದು ಆಜ್ಞಾಪಿಸುತ್ತಾಳೆ. ನಂತರ ಗರುಡನು ಸ್ತ್ರೀಹತ್ಯೆ ಮಾಡಿದ್ದಕ್ಕೆ ಪಾಪ ಪ್ರಾಯಶ್ಚಿತ್ತಕ್ಕಾಗಿ ಈ ಕ್ಷೇತ್ರಕ್ಕೆ ಬಂದು ವಿಷ್ಣುವನ್ನು ಕುರಿತು ತಪಸ್ಸಾನ್ನಾಚರಿಸಲಾಗಿ, ಅವನ ಭಕ್ತಿಗೆ ಮೆಚ್ಚಿದ ಶ್ರೀಮನ್ನಾರಾಯಣನು ಬೆಲ್ಲದ ಅಚ್ಚಿನ ರೂಪದಲ್ಲಿ ದರ್ಶನ ಕೊಟ್ಟು ಅವನ ಪಾಪವನ್ನು ಪರಿಹರಿಸುತ್ತಾನೆ. ಅಂದಿನಿಂದ ಈ ಕ್ಷೇತ್ರವು ಗರುಡ ಕ್ಷೇತ್ರವಾಗಿ ಸಹ ಕರೆಯುತ್ತಾರೆ.

ಏಕಾಂತವನ್ನು ಬಯಸುವವರಿಗೆ, ಕೆಲಕಾಲ ಧ್ಯಾನದಲ್ಲಿ ತಲ್ಲೀನರಾಗುವವರಿಗೆ ಇದು ಅತ್ಯಂತ ಪ್ರಶಸ್ತ ಸ್ಥಳ. ದೇಗುಲದ ಹಿಂಬಾಗದಿಂದ ಕಾಣಸಿಗುವ ಶಿವಗಂಗೆ ಬೆಟ್ಟದ ವಿಹಂಗಮ ನೋಟವನ್ನು ಮನಸಾರೆ ಸವಿಯಬಹುದು.

ಪ್ರತಿ ವರ್ಷ ಮಾಘ ಅಥವಾ ಫಾಲ್ಗುಣ ಮಾಸದಲ್ಲಿ ರಥೋತ್ಸವವು ಜರಗುತ್ತದೆ. ದೇಗುಲಗಳು ಭಾನುವಾರ ಬೆಳಿಗ್ಗೆ ೯ ರಿಂದ ೧೧ ರ ವರೆಗೆ, ಶನಿವಾರದಂದು ಮಧ್ಯಾಹ್ನ ೧ ರ ವರೆಗೆ ಮತ್ತು ಇತರೆ ದಿನಗಳಲ್ಲಿ ಬೆಳಿಗ್ಗೆ ೮.೩೦ ರಿಂದ ೯.೩೦ ರ ವರೆಗೆ ಮಾತ್ರವೇ ತೆರೆದಿರುತ್ತದೆ.

ಇಲ್ಲಿಂದ ಕೇವಲ ಎಂಟು ಕಿಮೀ ದೂರದಲ್ಲಿ ಶಿವಗಂಗೆ ಕ್ಷೇತ್ರವಿದ್ದು, ಅಲ್ಲಿಯ ಪಾತಾಳಗಂಗೆ, ಶ್ರೀಗಂಗಾಧರೇಶ್ವರ ಸ್ವಾಮೀ  ಮತ್ತು ಹೊನ್ನಾದೇವಿ ಸನ್ನಿಧಿ, ಒಳಕಲ್ಲು ತೀರ್ಥ, ಕುಂಬಾವತಿ ತೀರ್ಥ, ಸುತ್ತುವ ಬಸವ ಮತ್ತು ಶಾಂತಲಾ ಡ್ರಾಪ್ ಗಳನ್ನೂ ನೋಡಿಕೊಂಡು ಬರಬಹುದು.