9000 ಕೋಟಿ ರೂ. ಸಾಲ ವಸೂಲಿಗೆ ಸೂಚನೆ: ಮಲ್ಯಗೆ ಶುರುವಾಯ್ತು ನಿಜವಾದ ಸಂಕಟ

0
583

9,000 ಕೋಟಿ ರೂ. ಸಾಲ ವಸುಲಿಗೆ ಕ್ರಮ ಕೈಗೊಳ್ಳಬಹುದು ಎಂದು ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಮಂಡಳಿ ಬ್ಯಾಂಕ್‍ಗಳಿಗೆ ಹಸಿರು ನಿಶಾನೆ ತೋರಿದೆ. ಈ ಮೂಲಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್‍ ಮಲ್ಯಗೆ ನಿಜವಾದ ಸಂಕಷ್ಟ ಶುರುವಾಗಿದೆ.

ಸಾಲ ವಸೂಲಿಗೆ ಅವಕಾಶ ಕೋರಿ ಸ್ಟೇಟ್‍ ಬ್ಯಾಂಕ್‍ ಆಫ್‍ ಇಂಡಿಯಾ ಸೇರಿದಂತೆ 17 ಬ್ಯಾಂಕ್‍ಗಳು ನ್ಯಾಯಮಂಡಳಿಯ ಮೊರೆ ಹೋಗಿದ್ದವು. ಮಲ್ಯ ಒಡೆತನದ ಕಿಂಗ್‍ಫಿಷರ್‍ ಏರ್‍ ಲೈನ್ಸ್, ಯುನೈಟೆಡ್‍ ಬ್ರಿವರೇಜಸ್‍ ಹೋಲ್ಡಿಂಗ್‍ ಲಿಮಿಟೆಡ್‍ ಮತ್ತು ಕಿಂಗ್‍ಫಿಷರ್ ಫಿನ್‍ವೆಸ್ಟ್‍ ಸಂಸ್ಥೆಗಳಿಂದ ಸಾಲ ಬಾಕಿ ಇದೆ ಎಂದು ಬ್ಯಾಂಕ್‍ಗಳು ದೂರಿನಲ್ಲಿ ಆರೋಪಿಸಿದ್ದವು.

ಮಲ್ಯ ಮಾಡಿದ ನೈಜ ಸಾಲ 6,203 ಕೋಟಿ ಆಗಿದ್ದು, ಈ ಮೊತ್ತಕ್ಕೆ 2013ರಿಂದ ಅನ್ವಯ ಆಗುವಂತೆ ಶೇ. 11.ರಂತೆ ಬಡ್ಡಿ ಸೇರಿ ಸಾಲ ಮರುಪಾವತಿಗೆ ಕ್ರಮ ಕೈಗೊಳ್ಳುವಂತೆ ನ್ಯಾಯಮಂಡಳಿ ಸೂಚಿಸಿದೆ.

2013ರಿಂದ ಬಾಕಿ ಇರುವ ಸಾಲದ ವಸೂಲಿಗಾಗಿ ಬ್ಯಾಂಕ್‍ಗಳು ಮೊರೆ ಹೋಗಿದ್ದವು. ಇದೇ ವೇಳೆ ಸಿಬಿಐ ಸೇರಿದಂತೆ ಮೂರು ದೂರುಗಳು ಮಲ್ಯ ವಿರುದ್ಧ ದಾಖಲಾಗಿದ್ದು, ಇತ್ತೀಚೆಗಷ್ಟೇ ಬಂಧನ ವಾರೆಂಟ್‍ ಕೂಡ ಜಾರಿ ಮಾಡಲಾಗಿದೆ.

ಕಳೆದ ವರ್ಷ ಮಾರ್ಚ್ 2ರಂದು ಮಲ್ಯ ದೇಶ ತೊರೆದಿದ್ದು, ನಂತರ ಹಿಂತಿರುಗಿಲ್ಲ. ಅಲ್ಲದೇ ಅವರ ಆಸ್ತಿ ಮಾರಾಟಕ್ಕೂ ವಿಫಲ ಯತ್ನಗಳು ನಡೆದಿವೆ. ಪ್ರಸ್ತುತ ಮಲ್ಯ ಲಂಡನ್‍ನಲ್ಲಿ ನೆಲೆಸಿದ್ದಾರೆ.