ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 189 ದೇಶಗಳ ಪೈಕಿ ಭಾರತ 131ನೇ ಸ್ಥಾನ

0
497

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕೆ 131ನೇ ಸ್ಥಾನ

ನವದೆಹಲಿ: ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಿರುವ 2016ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್‌ಡಿಐ) 189 ದೇಶಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ.

ಮಾನವ ಅಭಿವೃದ್ಧಿಯಲ್ಲಿ ಭಾರತ ಮಧ್ಯಮ ಸ್ತರದಲ್ಲಿದೆ. ಅದೇ ವೇಳೆ 1990- 2015ರ ಅವಧಿಯಲ್ಲಿ ಎಚ್‌ಡಿಐ ದರದಲ್ಲಿ ಶೇ.46 ಏರಿಕೆಯಾಗಿದೆ.

ಸಾರ್ಕ್ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ) ಅಂಗವಾಗಿರುವ ಇತರ ದೇಶಗಳ ಪೈಕಿ ಭಾರತ ಹೆಚ್ಚಿನ ಪ್ರಗತಿ ಕಂಡಿದೆ.

ಎಚ್‌ಡಿಐನಲ್ಲಿ ಭೂತಾನ್ (132), ಬಾಂಗ್ಲಾದೇಶ (139), ನೇಪಾಳ (144), ಪಾಕಿಸ್ತಾನ (147) ಮತ್ತು ಅಫ್ಘಾನಿಸ್ತಾನ (169)ನೇ ಸ್ಥಾನ ಹೊಂದಿದೆ.

ಅದೇ ವೇಳೆ ಶ್ರೀಲಂಕಾ(73), ಮಾಲ್ಡೀವ್ಸ್ (105) ಮತ್ತು ಚೀನಾ (90)ನೇ ಸ್ಥಾನದಲ್ಲಿದೆ.

ನಾರ್ವೆ, ಆಸ್ಟ್ರೇಲಿಯಾ, ಸ್ವಿಜರ್‍‍ಲ್ಯಾಂಡ್, ಜರ್ಮನಿ ಮತ್ತು ಡೆನ್ಮಾರ್ಕ್ ಅಗ್ರಸ್ಥಾನದಲ್ಲಿವೆ. ಏತನ್ಮಧ್ಯೆ ಬುರುಂಡಿ, ಬರ್ಕಿನಾ ಫಾಸೊ, ಚಾಡ್, ನಿಗೇರ್ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಕಡಿಮೆ ರ‌್ಯಾಂಕ್  ಹೊಂದಿವೆ.

ವರದಿ ಪ್ರಕಾರ ಭಾರತೀಯರ ಆಯಸ್ಸು 68 ವರ್ಷಗಳಿಂದ ಸರಾಸರಿ 68.3 ಕ್ಕೆ ಏರಿಕೆಯಾಗಿದ್ದು, ಪುರುಷರ ಆಯಸ್ಸು  66.9 ಮತ್ತು ಮಹಿಳೆಯರ ಆಯಸ್ಸು 69.9 ವರ್ಷ ಆಗಿದೆ.

ಶಾಲಾ ಶಿಕ್ಷಣದ ಅವಧಿ 11.7 ವರ್ಷಗಳಿಷ್ಟಿದೆ. ಆದಾಗ್ಯೂ,  ಶಾಲಾ ಶಿಕ್ಷಣದ ಅವಧಿಯು 5.4 ವರ್ಷಗಳಿಂದ 6.3 ವರ್ಷಗಳವರೆಗೆ ಏರಿಕೆಯಾಗಿದೆ.

ಒಟ್ಟು ರಾಷ್ಟ್ರೀಯ ಆದಾಯ (ಜಿಎನ್‌ಐ) ಕೂಡಾ 5,497 ಡಾಲರ್‍‌ನಿಂದ 5,663 ಡಾಲರ್‌ಗೆ ಏರಿಕೆಯಾಗಿದೆ.