ಮಾವಿನ ಹಣ್ಣಿನಿಂದ ದೋಸೆ, ಶರಬತ್, ಗೊಜ್ಜು, ಸಾಂಬಾರ್ ಮತ್ತು ಪಾಯಸವನ್ನು ಮಾಡುವುದನ್ನು ಕಲಿಯಿರಿ!!

0
783

ಮಾವಿನಹಣ್ಣಿನ ದೋಸೆ
ಸಾಮಗ್ರಿ: ಮಾವಿನಹಣ್ಣಿನ ತಿರುಳು-2 ಕಪ್, ಅಕ್ಕಿ-3 ಕಪ್, ತೆಂಗಿನತುರಿ-1 ಕಪ್, ಬೆಲ್ಲದಪುಡಿ-1/2 ಕಪ್, ಎಣ್ಣೆ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಏಲಕ್ಕಿ ಪುಡಿ-1/2 ಟೀ ಚಮಚ.
ವಿಧಾನ: ಅಕ್ಕಿಯನ್ನು ತೊಳೆದು 2 ಗಂಟೆ ನೆನೆಸಿ ಬಸಿದು, ತೆಂಗಿನಕಾಯಿತುರಿ, ಮಾವಿನಹಣ್ಣಿನ ತಿರುಳು, ಬೆಲ್ಲದ ಪುಡಿ, ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ಅರೆದಿಡಿ. ಅರೆದ ಮಿಶ್ರಣಕ್ಕೆ, ಉಪ್ಪು, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಕಾಯಿಸಿದ ಕಾವಲಿಯ ಮೇಲೆ, ಎಣ್ಣೆ ಸವರಿ, ದೋಸೆಯ ಹಿಟ್ಟು ಹರಡಿ ಎರಡೂ ಬದಿ ಬೇಯಿಸಿ ತೆಗೆಯಿರಿ. ರುಚಿಯಾದ ಮಾವಿನಹಣ್ಣಿನ ದೋಸೆ, ಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.

ಮಾವಿನಹಣ್ಣಿನ ಪಾಯಸ
ಸಾಮಗ್ರಿ: ಮಾವಿನಹಣ್ಣಿನ ರಸ-2 ಕಪ್, ಸಬ್ಬಕ್ಕಿ-1 ಕಪ್, ಸಕ್ಕರೆ-3/4 ಕಪ್, ಹಾಲು-2 ಕಪ್,
ಏಲಕ್ಕಿ ಪುಡಿ-1/2 ಟೀ ಚಮಚ, ಜಾಕಾಯಿ ಪುಡಿ-1/4 ಟೀ ಚಮಚ, ತುಪ್ಪ-3 ಟೀ ಚಮಚ
ದ್ರಾಕ್ಷಿ-10, ಗೋಡಂಬಿ ತುಂಡುಗಳು-10, ಪಚ್ಚ ಕರ್ಪೂರ-1/4 ಟೀ ಚಮಚ.
ವಿಧಾನ: ಸಬ್ಬಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ ಬಸಿದುಕೊಳ್ಳಿ. ದ್ರಾಕ್ಷಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಸಬ್ಬಕ್ಕಿಗೆ ಹಾಲು ಬೆರೆಸಿ ಕುದಿಸಿ, ಬೇಯಿಸಿ. ಬೆಂದ ಸಬ್ಬಕ್ಕಿಗೆ ಸಕ್ಕರೆ, ತುಪ್ಪ, ಹುರಿದ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ಜಾಕಾಯಿ ಪುಡಿ, ಪಚ್ಚ ಕರ್ಪೂರ ಸೇರಿಸಿ ಕಲಕಿ ಒಲೆಯಿಂದ ಕೆಳಗಿಳಿಸಿ. ತಣಿದ ಮೇಲೆ, ಮಾವಿನಹಣ್ಣಿನ ರಸ ಸೇರಿಸಿ ಕಲಕಿದರೆ ರುಚಿಯಾದ, ಸವಿಯಾದ ಮಾವಿನಹಣ್ಣಿನ ಪಾಯಸ ಸವಿಯಲು ಸಿದ್ಧ.
ಮಾವಿನಹಣ್ಣಿನ ಸಾಂಬಾರ್
ಸಾಮಗ್ರಿ: ಮಾವಿನಹಣ್ಣಿನ ತಿರುಳು-2 ಕಪ್, ತೊಗರಿಬೇಳೆ-1 ಕಪ್, ಹುಣಸೆಹಣ್ಣಿನ ರಸ-1 ಟೀ ಚಮಚ, ತೆಂಗಿನಕಾಯಿ ತುರಿ-1/2 ಕಪ್, ಒಣಮೆಣಸಿನಕಾಯಿ-7, ಉದ್ದಿನಬೇಳೆ-1 ಟೀ ಚಮಚ,
ಮೆಂತ್ಯ-1/2 ಟೀ ಚಮಚ, ದಾಲ್ಚಿನ್ನಿ ತುಂಡು-1, ತುಪ್ಪ-3 ಟೀ ಚಮಚ, ಸಾಸಿವೆ-1 ಟೀ ಚಮಚ, ಇಂಗು-1/4 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ವಿಧಾನ: ತೊಗರಿಬೇಳೆಯನ್ನು ಬೇಯಿಸಿಕೊಳ್ಳಿ. ಒಣಮೆಣಸಿನಕಾಯಿ, ಉದ್ದಿನಬೇಳೆ, ಮೆಂತ್ಯ, ದಾಲ್ಚಿನ್ನಿ ತುಂಡುಗಳನ್ನು ಎಣ್ಣೆಯಲ್ಲಿ ಹುರಿದು, ತೆಂಗಿನಕಾಯಿಯೊಂದಿಗೆ ಅರೆದು ಮಸಾಲೆ ತಯಾರಿಸಿಡಿ. ಬಾಣಲೆಯಲ್ಲಿ ತುಪ್ಪ ಕಾಯಿಸಿ ಸಾಸಿವೆ-ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ, ಬೇಯಿಸಿದ ತೊಗರೀಬೇಳೆ, ಅರೆದ ಮಸಾಲೆ, ಮಾವಿನ ತಿರುಳು, ಹುಣಸೆಹಣ್ಣಿನ ರಸ, ಉಪ್ಪು ಬೆರೆಸಿ ಚೆನ್ನಾಗಿ ಕುದಿಸಿ. ಒಲೆಯಿಂದ ಕೆಳಗಿಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಯಾದ ಮಾವಿನಹಣ್ಣಿನ ಸಾಂಬಾರ್ ರೆಡಿ.
ಮಾವಿನಹಣ್ಣಿನ ಗೊಜ್ಜು
ಸಾಮಗ್ರಿ: ಮಾವಿನಹಣ್ಣಿನ ತಿರುಳು-2 ಕಪ್, ತೆಂಗಿನಕಾಯಿತುರಿ-1 ಕಪ್, ತುರಿದ ಬೆಲ್ಲ-2 ಟೀ ಚಮಚ, ಒಣಮೆಣಸಿನಕಾಯಿ-5, ಸಾಸಿವೆ-1/4 ಟೀ ಚಮಚ, ಅರಿಶಿನ-1/4 ಟೀ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-2 ಟೀ ಚಮಚ, ಒಗ್ಗರಣೆಗೆ ಸಾಸಿವೆ-1/2 ಟೀ ಚಮಚ, ಇಂಗು-ಸ್ವಲ್ಪ.
ವಿಧಾನ: ಒಣಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹುರಿದು, ಕಾಯಿತುರಿ, ಅರಿಶಿನ, ಸಾಸಿವೆಗಳೊಂದಿಗೆ ಸೇರಿಸಿ ನುಣ್ಣಗೆ ಅರೆದಿಡಿ. ಅರೆದ ಮಿಶ್ರಣಕ್ಕೆ ಬೆಲ್ಲ, ಮಾವಿನ ತಿರುಳು, ಉಪ್ಪು ಸೇರಿಸಿ ಕುದಿಸಿ. ಕುದಿಸಿದ ಮಿಶ್ರಣಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಹಾಕಿ ಒಲೆಯಿಂದ ಕೆಳಗಿಳಿಸಿ.ರುಚಿಯಾದ ಮಾವಿನಹಣ್ಣಿನ ಸಾಸಿವೆ ಚಪಾತಿ ಇಲ್ಲವೇ ಅನ್ನದೊಂದಿಗೆ ತಿನ್ನಲು ಬಲು ರುಚಿ.

ಮಾವಿನಹಣ್ಣಿನ ಶರಬತ್
ಸಾಮಗ್ರಿ: ಮಾವಿನಹಣ್ಣಿನ ರಸ-2 ಕಪ್, ಸಕ್ಕರೆ-1 ಕಪ್, ಸಿಟ್ರಿಕ್ ಆ್ಯಸಿಡ್-1/2 ಟೀ ಚಮಚ,
ಏಲಕ್ಕಿ ಪುಡಿ-1/2 ಟೀ ಚಮಚ.
ವಿಧಾನ: 2 ಕಪ್ ನೀರಿನಲ್ಲಿ ಸಕ್ಕರೆ ಬೆರೆಸಿ ಕುದಿಸಿ. ಕುದಿಯುವಾಗ, ಸಿಟ್ರಿಕ್ ಆ್ಯಸಿಡ್ ಸೇರಿಸಿ ಒಲೆಯಿಂದ ಕೆಳಗಿಳಿಸಿ. ತಣಿದ ಮೇಲೆ, ಮಾವಿನಹಣ್ಣಿನ ರಸ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಕಿ.
ಬಿಸಿಲಿನಲ್ಲಿ ಬಸವಳಿದಾಗ ಕುಡಿಯಲು ಚೇತೋಹಾರಿ.