‘ಮಾತು ಬಿಡ ಮಂಜುನಾಥ’ ಇಲ್ಲಿ ಮಾತಿಗೆ ಹೆಚ್ಚು ಮಹತ್ವ ಮತ್ತು ಮನ್ನಣೆ.

0
4239

Kannada News | Karnataka Temple History

ಧರ್ಮದ ನೆಲೆಯ ಧಾರ್ಮಿಕ ತಾಣವಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆ. ‘ಮಾತು ಬಿಡ ಮಂಜುನಾಥ’ ಎಂಬಂತೆ ಇಲ್ಲಿ ಮಾತಿಗೆ ಹೆಚ್ಚು ಮಹತ್ವ, ಮನ್ನಣೆ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣ.

dharmasthala1

ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ 8 ಶತಮಾನಗಳ ಇತಿಹಾಸವಿದ್ದು, ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿನ ದೇವಸ್ಥಾನದಲ್ಲಿರುವ ಆರಾಧ್ಯ ದೈವ ಮಂಜುನಾಧ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳ ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ – ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ.

ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಹಿರಂಗ ಶುದ್ಧಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನದೊಂದಿಗೆ ಅಂತರಂಗ ಶುದ್ಧಿಯನ್ನು ಮಾಡಿಕೊಂಡು ಮಾನಸಿಕ ಶಾಂತಿ, ನೆಮ್ಮದಿಯನ್ನು ಹೊಂದುತ್ತಾರೆ. ಮನದ ದುಃಖ, ನೋವನ್ನು ಮರೆಯುತ್ತಾರೆ.

ಪ್ರತೀತಿ

ಧರ್ಮಸ್ಥಳವು ರೋಚಕವಾದ ಹಿನ್ನೆಲೆಯನ್ನು ಹೊಂದಿದೆ. ಹಿಂದೆ ಧರ್ಮಸ್ಥಳವನ್ನು “ಕುಡುಮ” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಭೀಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ದಂಪತಿಗಳು ವಾಸಿಸುತ್ತಿದ್ದರು. ಇವರ ಮನೆಗೆ ಬಂದ ನಾಲ್ವರು ಅತಿಥಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ದಂಪತಿಗಳು ನೋಡಿಕೊಂಡಿದ್ದರು. ಅದೇ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ತಿಳಿಸಿದರು. ಆ ನಾಲ್ವರು ದೇವತೆಗಳಿಗೆ ಅಣತಿಯಂತೆ ಮನೆಯನ್ನು ಬಿಟ್ಟುಕೊಟ್ಟ ಭೀಮಣ್ಣ ಎಂಬುವರು ದೇವಾಲಯ ನಿರ್ಮಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದಂತೆ. ಆ ನಾಲ್ಕು ದೈವವೆಂದರೆ ಕಾಳರಾಹು – ಪುರುಷ ದೈವ, ಕಳರ್ಕಾಯಿ – ಸ್ತ್ರೀ ದೈವ, ಕುಮಾರಸ್ವಾಮಿ – ಪುರುಷ ದೈವ, ಹಾಗೂ ಕನ್ಯಾಕುಮಾರಿ – ಸ್ತ್ರೀ ದೈವ. ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣನವರಿಗೆ ಸಲಹೆಯಿತ್ತರು. ಇದರಂತೆ ಧರ್ಮದೇವತೆಗಳೂ ಕೂಡ ಕದ್ರಿಯಲ್ಲಿರುವ ಶ್ರೀಮಂಜುನಾಥನ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರು ಹಾಗೂ ಈ ಕಾರ್ಯ ಸಂಪನ್ನಗೊಳಿಸಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು. ಅಣ್ಣಪ್ಪಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀಮಂಜುನಾಥನ ದೇವಾಲಯ ನಿರ್ಮಾಣವಾಗಿತ್ತೆಂದು ಹೇಳುತ್ತದೆ ಇಲ್ಲಿನ ಪ್ರತೀತಿ.

ಮತ್ತೊಂದು ದಂತಕಥೆಯ ಪ್ರಕಾರ, 16 ನೇಯ ಶತಮಾನದಲ್ಲಿ ದೇವಾರಜ ಹೆಗ್ಗಡೆಯವರು ಉಡುಪಿಯ ವಾದಿರಾಜರಿಗೆ ಇಲ್ಲಿಗೆ ಭೇಟಿ ನೀಡಲು ಅಹ್ವಾನಿಸಿದ್ದರು. ಮೊದಲೆ ದಾನ ಧರ್ಮಗಳಿಗೆ ಹೆಸರಾಗಿದ್ದ ಕುಡುಮ ಕ್ಷೇತ್ರಕ್ಕೆ ವಾದಿರಾಜರು ಭೇಟಿ ನೀಡಲು ಸಂತೋಷದಿಂದ ಒಪ್ಪಿದರು ಹಾಗೂ ಭೇಟಿಯೂ ನೀಡಿದರು. ನಂತರ ಧರ್ಮದೂಟ ಸ್ವೀಕರಿಸಲು ಒಪ್ಪಲಿಲ್ಲ. ಕಾರಣವೆಂದರೆ ಅಲ್ಲಿರುವ ಶಿವಲಿಂಗವು ವೈದಿಕ ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಗಿರಲಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ದೇವರಾಜ ಹೆಗ್ಗಡೆಯವರೆ ವಾದಿರಾಜರನ್ನು ಕುರಿತು ನಿಯಮಗಳಿಗನುಸಾರವಾಗಿ ಲಿಂಗವನ್ನು ತಾವೆ ಮರುಪ್ರತಿಷ್ಠಾಪಿಸಬೇಕೆಂದು ವಿನಂತಿಸಿಕೊಂಡರು. ಅವರ ವಿನಯತೆ, ದಾನ ಧಾರ್ಮಗಳ ಮನೋಭಾವದಿಂದ ಪ್ರಸನ್ನರಾದ ಯತಿಗಳು ಸ್ವತಃ ತಾವೆ ದೈವಿಕ ವಿಧಿ ವಿಧಾನಗಳ ಮೂಲಕ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು ಹಾಗೂ ನೈತಿಕತೆ, ಸರಳತೆ, ಧರ್ಮ ನೆಲೆಯೂರಿರುವ ಈ ಕ್ಷೇತ್ರಕ್ಕೆ ಧರ್ಮಸ್ಥಳ ಎಂಬ ನಾಮಕರಣ ಮಾಡಿದರು. ಅಂದಿನಿಂದ ಈ ಕ್ಷೇತ್ರವು ಶ್ರೀಕ್ಷೇತ್ರ ಧರ್ಮಸ್ಥಳವಾಗಿ ಜನಪ್ರಿಯವಾಗಿದೆ.

ವಿಶೇಷವೆಂದರೆ ಈ ದೇವಸ್ಥಾನವು ಮೊದಲಿನಿಂದಲೂ ಜೈನ ಸಮುದಾಯದವರಿಂದ ನಡೆಸಲ್ಪಡುತ್ತಿದೆ. ಆಡಳಿತ ಮಂಡಳಿಯು ಜೈನ ಸಮುದಾಯವಾಗಿದ್ದರೂ ಸಹ ಇಲ್ಲಿನ ಪೂಜೆ ವಿಧಿ ವಿಧಾನಗಳು ಬ್ರಾಹ್ಮಣ ಸಮುದಾಯದಂತೆ ಬ್ರಹ್ಮಣ ಅರ್ಚಕರಿಂದ ನಡೆಯುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಹಳೆಯ ಕಾಲದಿಂದಲೂ ಹೆಗ್ಗಡೆ ಮನೆತನದವರು ಇಲ್ಲಿ ಧರ್ಮದರ್ಶಿಗಳಾಗಿ ತಮ್ಮ ಅಮೂಲ್ಯ ಸೇವೆಯನ್ನು ದೇವಾಲಯಕ್ಕೆ ನೀಡುತ್ತ ಬಂದಿದ್ದಾರೆ. ಇನ್ನುಳಿದಂತೆ ಧರ್ಮಸ್ಥಳದಲ್ಲಿ ಚಂದ್ರನಾಥ ಬಸದಿ, ಬಾಹುಬಲಿ ಪ್ರತಿಮೆ, ಜಮಾ ಉಗ್ರಾಣ, ವಿಮಾನ ವೀಕ್ಷಣಾ ಸ್ಥಳ, ಅನ್ನಪೂರ್ಣ ಭೋಜನಾಲಯ, ಮಂಜೂಷ ಸಂಗ್ರಹಾಲಯ, ಲಲಿತೋದ್ಯಾನ ಹೀಗೆ ಹಲವು ಆಕರ್ಷಣೆಗಳಿಗೆ ಭೇಟಿ ನೀಡಬಹುದಾಗಿದೆ.

ಅನ್ನದಾಸೋಹ

shri-kshetra-dharmasthala

ಧರ್ಮಸ್ಥಳಕ್ಕೆ ಆಗಮಿಸಿದ ಯಾವುದೇ ಯಾತ್ರಿಕ ಅನ್ನಾಹಾರ ದೊರಕದೇ ಹಸಿದು ಮರಳಿ ಹೋಗಬಾರದು ಎಂಬುದು ಇಲ್ಲಿ ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. “ಅನ್ನದಾನಕ್ಕಿಂತ ಇನ್ನು ದಾನವು ಇಲ್ಲ’ ಎಂಬಂತಿದೆ ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆ. ಧರ್ಮಸ್ಥಳದಲ್ಲಿ ಅನ್ನದಾಸೋಹಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಸುಸೂತ್ರವಾಗಿ ಸಹಸ್ರಾರು ಮಂದಿಗೆ ಏಕಕಾಲದಲ್ಲಿ ದಾಸೋಹ ಕಲ್ಪಿಸಲಾಗುತ್ತದೆ.

ಧರ್ಮಸ್ಥಳಕ್ಕೆ ತೆರಳುವ ಮಾರ್ಗ

ಮಂಜುನಾಥನ ಕ್ಷೇತ್ರ ಬೆಂಗಳೂರಿನಿಂದ ಸುಮಾರು 300 ಕಿ.ಮೀ ಹಾಗೂ ಮಂಗಳೂರಿನಿಂದ 76 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರು ಹಾಗೂ ಮಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಲು ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ದೊರೆಯುತ್ತವೆ. ರೈಲಿನ ಸೇವೆ ಇದೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಂಗಳೂರಿನಲ್ಲಿ ನಿಲ್ದಾಣ. ರೈಲಿನಲ್ಲಿ ಹೋಗುವ ಮಜವೇ ಬೇರೆ. ದಟ್ಟ ಕಾನನದ ನಡುವೆ ಪ್ರಯಾಣಿಸುವಾಗ ಹೊಸದೊಂದು ನವೋಲ್ಲಾಸ ಮೂಡುತ್ತದೆ.

ವಸತಿ ಗೃಹಗಳು

deepak0387

ನಿಗಧಿತ ಸಮಯವನ್ನು ಹೊರತುಪಡಿಸಿ ದಿನಂಪ್ರತಿ ಧರ್ಮಸ್ಥಳ ಮಂಜುನಾಥನ ದರ್ಶನವನ್ನು ಪಡೆಯಬಹುದು. ಇಲ್ಲಿ ತಂಗಲು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಕೋಣೆಗಳು ದೊರೆಯುತ್ತವೆ. ರಜತಾದ್ರಿ, ನೇತ್ರಾವತಿ, ವೈಶಾಲಿ, ಶ್ರೀ ಸನ್ನಿಧಿ, ಗಾಯತ್ರಿ, ಸಾಕೇತ, ಶರಾವತಿ, ಗಂಗೋತ್ರಿ ವಸತಿ ಗೃಹಗಳಾಗಿದ್ದು ಮುಂಗಡವಾಗಿ ಕಾಯ್ದಿರಿಸುವುದು ಒಳಿತು. ಅಲ್ಲದೆ ಖಾಸಗಿ ವಸತಿ ಗೃಹಗಳೂ ಕೂಡ ದೊರೆಯುತ್ತವೆ.

Also Read: ತಿರುಪತಿ ತಿಮ್ಮಪ್ಪನ ಮೂರ್ತಿಯ 9 ವಿಸ್ಮಯಗಳು