ನಗದು ರಹಿತ ದೇಶವಾಗಿಸುವುದು ಪ್ರಧಾನಿ ಮೋದಿ ಕನಸು

0
1245

ನವದೆಹಲಿ: ನೋಟು ನಿಷೇಧದ ಬಳಿಕ ಇದೇ ಪ್ರಥಮ ಬಾರಿಗೆ ಮನ್ -ಕಿ – ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾನುವಾರ ಮಾತನಾಡಿದರು. ನಗದು ರಹಿತ ಆರ್ಥಿಕ ವ್ಯವಸ್ಥೆ ನಮ್ಮದಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು..

‘ಮನದ ಮಾತು’ (ಮನ್ಕಿ ಬಾತ್) ಕಾರ್ಯಕ್ರಮದ 26ನೇ ಆವೃತ್ತಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಸಂಪೂರ್ಣ ನಗದು ರಹಿತ ಅರ್ಥ ವ್ಯವಸ್ಥೆ ನಮ್ಮ ಕನಸು. ಈ ಕನಸನ್ನು ನನಸು ಮಾಡಲು ವರ್ತಕರು ಹಾಗೂ ಯುವಜನತೆ ಮುಂದಾಗಬೇಕು’ ಎಂದರು.

ಕರ್ನಾಟಕದಿಂದ ಕರೆ ಮಾಡಿದ್ದ ಯಲ್ಲಪ್ಪ ವೆಲಂಕರ್ ಮತ್ತು ಮಧ್ಯಪ್ರದೇಶದಿಂದ ಕರೆ ಮಾಡಿದ್ದ ಆಶಿಷ್ ಪರೆ ಅವರ ಕರೆಗಳನ್ನು ಸ್ವೀಕರಿಸಿ ಅವರು ಪ್ರತಿಕ್ರಿಯೆ ನೀಡಿದರು.

‘ನೋಟು ರದ್ದತಿಯಿಂದಾಗಿ ರುಪೇ ಕಾರ್ಡ್ ಬಳಕೆ ಶೇಕಡ 300ರಷ್ಟು ಹೆಚ್ಚಾಗಿದೆ. ನಗದು ರಹಿತ ವಹಿವಾಟಿಗೆ ಇದು ಮೊದಲ ಹೆಜ್ಜೆ’ ಎಂದು ಹೇಳಿದರು.

ನೋಟ್ ಬ್ಯಾನ್ ರದ್ದುಪಡಿಸುವ ನಿರ್ಧಾರವನ್ನು ಜನ ಬೆಂಬಲಿಸಿದ್ದಾರೆ. ನೋಟ್ ಬ್ಯಾನ್ ನಂತರ ಆದ ಅವ್ಯವಸ್ಥೆ ಬಗ್ಗೆ ನನಗೆ ಅರಿವಿದೆ. ಈ ಸಮಸ್ಯೆ ಪರಿಹರಿಸಲು ಬ್ಯಾಂಕ್, ಅಂಚೆ ಕಚೇರಿಯ ಸಾವಿರಾರು ಮಂದಿ ಕೆಲಸ ನಿರ್ವಹಿಸಿದ್ದಾರೆ. ಇದು ಪರಿವರ್ತನೆಯ ಆರಂಭ ಎಂದು ತಿಳಿದು ದಿನಗಟ್ಟಲೆ ದುಡಿದಿದ್ದಾರೆ. ದೇಶದ ಸುಧಾರಣೆಯತ್ತ ಮೊದಲ ಹೆಜ್ಜೆ ಎಂದು ತಿಳಿದು ಕೆಲಸ ಮಾಡಿದ್ದಾರೆ. ಅವರೆಲ್ಲರ ನಿರಂತರ ಶ್ರಮದಿಂದಾಗಿ ಈಗ ಪರಿಸ್ಥಿತಿ ತಿಳಿಯಾಗುತ್ತಿದೆ.

ದೇಶದಲ್ಲಿರುವ ಕಪ್ಪು ಹಣ ನಿಗ್ರಹಿಸಲು ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಕೆಲವರೂ ಇನ್ನೂ ಕಪ್ಪುಹಣವನ್ನು ಬೆಂಬಲಿಸುತ್ತಿರುವುದು ದುರಂತ. ಯಾವುದೇ ಕಾರಣಕ್ಕೂ ಬೇರೆಯವರ ಬ್ಯಾಂಕ್ ಖಾತೆ ರುಪಯೋಗಪಡಿಸಿಕೊಳ್ಳಬೇಡಿ, ಖಾತೆ ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ, ಇದಕ್ಕೆ ತಕ್ಕ ಶಿಕ್ಷೆ ಸಿಗುತ್ತದೆ.

‘ಏನಾದರೂ ಮಾಡಿ, ಆದರೆ ಬಡ ಜನರೊಂದಿಗೆ ಚೆಲ್ಲಾಟವಾಡಬೇಡಿ’ ಕಪ್ಪುಹಣ ನಿರ್ಮೂಲನೆಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಳಧನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು.

‘ವಹಿವಾಟಿನಲ್ಲಿ ಡಿಜಿಟಲೀಕರಣದಿಂದ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ಡಿಜಿಟಲ್ ಅರ್ಥವ್ಯವಸ್ಥೆ ಎಂದರೆ ಏನು, ಅದರ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಜನ ಸಾಮಾನ್ಯರು ತಿಳಿದುಕೊಳ್ಳಬೇಕು’ ಎಂದರು.