ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಮನೆಯ ಸ್ವಿಮ್ಮಿಂಗ್‌ ಪೂಲ್‌ನ ತಳಭಾಗದಲ್ಲಿ ಅಡಗಿಸಿಟ್ಟ 303 ಕೆಜಿ ನಕಲಿ ಚಿನ್ನ ಪತ್ತೆ..

0
269

ನಕಲಿ ಚಿನ್ನ ತೋರಿಸಿ ವಂಚನೆ;

ಸಾವಿರಾರು ಜನರಿಗೆ ವಂಚನೆ ಮಾಡಿ ದೇಶಬಿಟ್ಟು ಪರಾರಿಯಾದ ಐಎಂಎ ಮಾಲೀಕ ಮನ್ಸೂರ್ ಖಾನ್ ಮನೆಯಲ್ಲಿ ಬರೋಬ್ಬರಿ 303 ಕೆಜಿ ತೂಕದ 5,880 ನಕಲಿ ಚಿನ್ನದ ಬಿಸ್ಕೆಟ್ ‌ಗಳು ಪತ್ತೆಯಾಗಿವೆ, ಇವನು ಬರಿ ಜನರಿಂದ ವಂಚನೆ ಮಾಡುವುದಲ್ಲದೆ ನಕಲಿ ಬಂಗಾರದ ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ತಿಳಿದಿದೆ. ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಂದ ಖರೀದಿಸಿದ್ದ ಎನ್ನಲಾದ ಫ್ಲ್ಯಾಟ್‌ಗಳ ಮೇಲೆ ಸಿಟ್ ತನಿಖಾಧಿಕಾರಿಗಳು ದಾಳಿ ನಡೆಸಿದಾಗ, ಇಷ್ಟೊಂದು ಪ್ರಮಾಣದ ನಕಲಿ ಬಂಗಾರ ಪತ್ತೆಯಾಗಿದೆ.

ಬಾಡಿ ವಾರಂಟ್‌ ಆಧಾರದಲ್ಲಿ ಮನ್ಸೂರ್‌ಖಾನ್‌ನನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಮನ್ಸೂರ್‌ ಖಾನ್‌ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ದಾಳಿ ನಡೆಸಿದಾಗ ನಕಲಿ ಚಿನ್ನ ಪತ್ತೆಯಾಯಿತು. ಮನ್ಸೂರ್‌ ಖಾನ್‌ ಇದನ್ನೇ ಅಸಲಿ ಎಂದು ನಂಬಿಸಿ ಸಾರ್ವಜನಿಕರಿಂದ ಸಾವಿರಾರು ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ. ಚಿನ್ನದ ಗಂಟು ನೋಡಿಕೊಂಡೇ ಸಾರ್ವಜನಿಕರು ಹಣಕ್ಕ ಮೋಷ ಇಲ್ಲ ಎಂದು ಹೂಡಿಕೆ ಮಾಡುತ್ತಿದ್ದರು ಎಂದು ಎಸ್‌ಐಟಿ ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ ಬೆಂಗಳೂರಿನ ರಿಚ್‌ಮಂಡ್‌ ಟೌನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಮಹಡಿಯಲ್ಲಿ ಈಜು ಕೊಳದಲ್ಲಿ ಇಡಲಾಗಿದ್ದ ನಕಲಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಬಳಿಕ ಎಸ್‌ಐಟಿ ಅಧಿಕಾರಿಗಳಿಗೆ ಅದು ನಕಲಿ ಎಂದು ತಿಳಿದು ಬಂದಿದೆ. 1 ಕೋಟಿ ರೂ. ಮೊತ್ತದ ಮೇಲೆ ಹೂಡಿಕೆ ಮಾಡಲು ಮುಂದಾಗುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದು ಮನ್ಸೂರ್, ಅವರಿಗೆ ನಂಬಿಕೆ ಮೂಡಿಸಲು ಈ ಫ್ಲ್ಯಾಟ್‌ಗೆ ಕರೆದುಕೊಂಡು ಹೋಗಿ, ನಿಮ್ಮ ಹಣ ನಷ್ಟ ಆಗುವುದಿಲ್ಲ. ಇಷ್ಟು ಮೊತ್ತದ ಚಿನ್ನ ಇದೆ ಎಂದೆಲ್ಲಾ ಹೇಳುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಭಾರಿ ಹೈ ಟೆಕ್‌ ಅಪಾರ್ಟ್‌ಮೆಂಟ್‌

ಸಾರ್ವಜನಿಕರಿಗೆ ಸಾವಿರಾರು ಕೋಟಿ ವಂಚನೆ ಮಾಡಿರುವ ಆರೋಪ ಹೊತ್ತಿರುವ ಮನ್ಸೂರ್‌ ಖಾನ್‌ಗೆ ಸೇರಿರುವ ಆರು ಅಂತಸ್ತಿನ ಕಟ್ಟಡ ಹೈಟೆಕ್‌ ವ್ಯವಸ್ಥೆ ಹೊಂದಿದೆ. ನೆಲ ಮಹಡಿಯಲ್ಲಿ ಕಾವಲು ಸಿಬ್ಬಂದಿಗಾಗಿ ಎರಡು ಮನೆಗಳಿವೆ. ಉಳಿದ ಐದು ಮಹಡಿಗಳಲ್ಲಿ ತಲಾ ಎರೆಡೆರಡು ಮನೆಗಳಿವೆ. ಎಲ್ಲ ಮನೆಗಳೂ ನಾಲ್ಕರಿಂದ ಐದು ಬೆಡ್‌ರೂಂ ಹೊಂದಿವೆ. ಆರನೇ ಮಹಡಿಯ ಟೆರೇಸ್‌ನಲ್ಲಿ ಈಜುಕೊಳವಿದೆ. ಈ ಅಪಾರ್ಟ್‌ಮೆಂಟ್‌ನ ಎಲ್ಲ ಮನೆಗಳಿಗೂ ಕ್ಯಾಮೆರಾ ಒಳಗೊಂಡ ಸೆನ್ಸರ್‌ ಸೌಲಭ್ಯ ಅಳವಡಿಸಲಾಗಿದೆ. ಮನೆ ಬಾಗಿಲಿನಲ್ಲಿ ನಿಲ್ಲುತ್ತಿದ್ದಂತೆಯೇ ಅಲ್ಲಿನ ಕ್ಯಾಮೆರಾದಲ್ಲಿ ಸೆರೆಯಾಗುವ ವ್ಯಕ್ತಿಯ ಚಹರೆ ಒಳಭಾಗದಲ್ಲಿರುವ ಪರದೆ ಮೇಲೆ ಬರುತ್ತದೆ. ಇದರ ಆಧಾರದ ಮೇಲೆ ಮನೆಯೊಳಗಿದ್ದವರಿಗೆ ಬಂದು ಬಾಗಿಲು ತೆರೆಯುತ್ತಾರೆ.

ದೇಶ ಬಿಡುವಾಗ ಬಚ್ಚಿಟ್ಟ ನಕಲಿ ಚಿನ್ನ

ಮನ್ಸೂರ್‌ ಖಾನ್‌ ವಿದೇಶಕ್ಕೆ ಪರಾರಿ ಆಗುವ ವೇಳೆಯಲ್ಲಿ ತನ್ನ ಆಪ್ತ ವಸೀಂ ಎನ್ನುವವನಿಗೆ ಚಿನ್ನದ ಗಟ್ಟಿಗಳನ್ನು ಬಚ್ಚಿಡಲು ಹೇಳಿದ್ದ. ಈತನ ಸೂಚನೆಯಂತೆ ವಸೀಂ ಎಲ್ಲಾ ಗಟ್ಟಿಗಳನ್ನೂ ಸ್ವಿಮ್ಮಿಂಗ್‌ಪೂಲ್‌ನ ತಳಭಾಗದಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ. ಮನ್ಸೂರ್‌ ಖಾನ್‌ನ ಆಭರಣ ಮಳಿಗೆ ಮತ್ತು ಕಚೇರಿಗಳ ಮೇಲೆ ಜೂನ್‌ ತಿಂಗಳಿನಲ್ಲಿ ನಡೆದಿದ್ದ ದಾಳಿ ವೇಳೆ ಎಸ್‌ಐಟಿ ವಶಕ್ಕೆ ಸಿಕ್ಕಿದ್ದ ಚಿನ್ನಾಭರಣ ಮತ್ತು ವಜ್ರ ಅಸಲಿಯದ್ದಾಗಿತ್ತು. ಅಸಲಿ ಒಡವೆಗಳನ್ನು ಕಚೇರಿಯಲ್ಲೇ ಇಟ್ಟು ನಕಲಿ ಚಿನ್ನದ ಗಟ್ಟಿಗಳನ್ನು ಗುಪ್ತ ಜಾಗದಲ್ಲಿ ಬಚ್ಚಿಟ್ಟಿದ್ದು ಏಕೆ ಎನ್ನುವ ಅನುಮಾನ ಈಗ ಪೊಲೀಸರನ್ನು ಕಾಡುತ್ತಿದೆ.