ವಿಜಯಪುರದಲ್ಲಿ 1 ರುಪಾಯಿಗೆ ಫುಲ್ ಊಟ

0
2097

ಈಗಿನ ಕಾಲದಲ್ಲಿ ಒಂದು ರೂಪಾಯಿಗೆ ಏನು ಸಿಗುತ್ತೆ ಹೇಳಿ. ಒಂದು ಪುಟ್ಟ ಚಾಕಲೇಟ್ ಸಿಗಬೋಹುದು ಅಷ್ಟೇ. ಒಂದು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಒಂದು ಊಟ ಸಿಕ್ಕರೆ.. ನಂಬಲು ಸಾಧ್ಯವಿಲ್ಲ ಅಲ್ಲವೇ ?

ಒಂದು ಚಹ ಕುಡಿದರೂ ಕನಿಷ್ಠ ರೂ 5 ನೀಡಬೇಕು. ಅಂಥದ್ದರಲ್ಲಿ ಎರಡು ರೊಟ್ಟಿ, ಪಲ್ಯ, ಬೂಂದಿ ಕೇವಲ 1 ರೂಪಾಯಿಗೆ ನೀಡುತ್ತಿರುವುದು ವಿಜಯಪುರದ ಜೈನ ಸಂಘ.

ಊಟ ಮಾಡುವವರಿಗೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ಒಂದು ರೂಪಾಯಿ ದರ ನಿಗದಿ ಮಾಡಲಾಗಿದೆ. ಸರದಿಯಲ್ಲಿ ನಿಂತರೆ ಸಾಕು. ತಟ್ಟೆಯಲ್ಲಿ ರೊಟ್ಟಿ, ಪಲ್ಯೆ, ಅನ್ನ ಸಾರು ಹಾಕಿಯೇ ಬಿಡುತ್ತಾರೆ. ಇಲ್ಲಿ ಮೂರು ಜನ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ನೇಮಿಸಲಾಗಿದೆ. ಅವರು ಈರುಳ್ಳಿ, ಬೆಳ್ಳುಳ್ಳಿ ಹಾಕದೇ ಸಿದ್ಧ ಪಡಿಸುವ ಬಿಸಿಬಿಸಿ ರೊಟ್ಟಿ, ಪಲ್ಯ, ಅನ್ನ ಸಾರನ್ನು ಸರದಿಯಲ್ಲಿ ಬರುವ ಜನತೆಗೆ ವಿತರಿಸುತ್ತಾರೆ.

ಸ್ವಲ್ಪ ತಡವಾಗಿ ಬಂದರೂ ಊಟ ಖಾಲಿಯಾಗಿದೆ ಎಂದು ಹೇಳದೇ ಸ್ವಲ್ಪ ಇದ್ದರೂ ಅವರಿಗೆ ಊಟ ಕೊಡುತ್ತೇವೆ. ಯಾರಿಗೂ ಭೇದಭಾವ ಮಾಡುವುದಿಲ್ಲ ಎಂದು ಉಸ್ತುವಾರಿ ಮ್ಯಾನೇಜರ್ ಬಸವರಾಜ ಮೆಣಸಿನಕಾಯಿ ಹೇಳುತ್ತಾರೆ.