‘ನಮ್ಮ ಮೆಟ್ರೋ’ ಚಾಲಕ ಸಿಬ್ಬಂದಿಯಲ್ಲಿ ಮಹಿಳೆಯರದೇ ಮೇಲುಗೈ!

0
915

ಬೆಂಗಳೂರು: ನಮ್ಮ ಮೆಟ್ರೋ ನಗರದ ನಿವಾಸಿಗಳ ಮನ ಗೆದ್ದಿರುವುದು ಗೊತ್ತೇ ಇದೆ. ಬಿಎಂಟಿಸಿ ಬಸ್ಸು, ಆಟೋಗಳ ಕಿರಿ ಕಿರಿ ಬೇಡ, ಟ್ರಾಫಿಕ್ ನ ರಗಳೆಯಿಂದ ಪಾರಾಗೋಣ ಅಂತ ಅನೇಕ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಹೊಸ ಪ್ರಯಾಣ ಸೌಲಭ್ಯವಾದ ನಮ್ಮ ಮೆಟ್ರೋ ಈಗ ಮಹಿಳಾ ಶಕ್ತಿಯಿಂದ ಮತ್ತಷ್ಟು ಕಂಗೊಳಿಸುತ್ತಿದೆ.

ಇತ್ತೀಚೆಗೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು ಅದರಲ್ಲಿ ನಮ್ಮ ಮೆಟ್ರೋ ರೈಲು ಚಾಲಕರ ಹುದ್ದೆಗೆ 97 ಜನರನ್ನು ನೇಮಕಗೊಳಿಸಲಾಗಿದ್ದು, ಇವರಲ್ಲಿ 57 ಮಂದಿ ಮಹಿಳೆಯರಾಗಿದ್ದಾರೆಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ನಿಯಮಗಳ ಪ್ರಕಾರ, ಮೆಟ್ರೋ ನೇಮಕಾತಿಯಲ್ಲಿ ಮಹಿಳೆಯರಿಗಾಗಿ ಶೇ. 30ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಆದರೆ, ನಿರೀಕ್ಷೆಗೂ ಮೀರಿ ಮಹಿಳೆಯರು ನಮ್ಮ ಮೆಟ್ರೋದಲ್ಲಿ ಉದ್ಯೋಗಿಗಳಾಗಲು ಉತ್ಸುಕರಾಗಿದ್ದಾರೆಂದು ಹೇಳಲಾಗಿದೆ. ಇದರಿಂದಾಗಿ, ನಮ್ಮ ಮೆಟ್ರೋದಲ್ಲಿ ಈಗಿರುವ ಮಹಿಳಾ ಚಾಲಕರು ಮೊತ್ತ ಗಣನೀಯ ಮಟ್ಟಕ್ಕೇರಿದೆ ಎಂದು ಹೇಳಲಾಗಿದೆ.

ಇದಕ್ಕಿಂತ ಕುತೂಹಲಕಾರಿ ವಿಚಾರ ಮತ್ತೊಂದಿದೆ. ಮೆಟ್ರೋ ರೈಲು ಚಾಲಕರಾಗಲು ಕನಿಷ್ಠ ವಿದ್ಯಾರ್ಹತೆ ಡಿಪ್ಲೊಮಾ ಆಗಿರಬೇಕಿತ್ತು. ಆದರೆ, ಇತ್ತೀಚೆಗೆ ಹೊಸದಾಗಿ ನಮ್ಮ ಮೆಟ್ರೋಗೆ ಬಂದು ಸೇರಿಕೊಂಡಿರುವವರಲ್ಲಿ ಹಲವಾರು ಮಂದಿ ಇಂಜಿನಿಯರ್ ಪದವೀಧರರೇ ಆಗಿದ್ದಾರೆಂದು ಹೇಳಲಾಗಿದೆ.