ನಿಮ್ಮ ಮನಸ್ಸು ಚಂಚಲವಾಗಿದ್ಯಾ?? ದೇವರ ಧ್ಯಾನದಿಂದ ಮಾತ್ರ ನಿಮ್ಮ ಮನಸ್ಸು ಅಚಲವಾಗಿರಲು ಸಾಧ್ಯ!!

0
1127

ಮನುಷ್ಯ ಬದುಕಿನುದ್ದಕ್ಕೂ `ಎಲ್ಲವೂ ಬೇಕು’ ಎನ್ನುತ್ತಾನೆ. ಕೊನೆಗೊಂದು ದಿನ `ಯಾವುದೂ ಬೇಡ’ ಎಂದು ಎಲ್ಲವನ್ನೂ ಬಿಟ್ಟುಹೋಗುತ್ತಾನೆ. ಶಾಶ್ವತವಾಗಿ ಇಲ್ಲಿಯೇ ಇದ್ದುಬಿಡುತ್ತಾನೇನೋ ಎಂಬ ಹಾಗೆ ಯಾರನ್ನೂ ಬಿಡದೆ, ಯಾವುದನ್ನೂ ಬಿಡದೆ ಹಗಲಿರುಳು ದುಡಿದು ಎಲ್ಲವನ್ನೂ ಸಂಪಾದಿಸುತ್ತಾನೆ. ಆದರೆ ಅದೊಂದು ದಿನ `ಯಾವುದೂ ತನ್ನದಲ್ಲ’ ಎಂಬ ಹಾಗೆ ನಿಶ್ಚಿಂತನಾಗಿ ಎಲ್ಲವನ್ನೂ ಬಿಟ್ಟುಹೋಗುತ್ತಾನೆ. ಸಂಪಾದಿಸುವವರೆಗೆ ಒಂದು ತರ. ಸಂಪಾದಿಸಿಯಾದ ಮೇಲೇ ಈತ ಇನ್ನೊಂದು ತರ. ಸಾಮ್ರಾಟ್ ಅಶೋಕನ ಹಾಗೆ! ಕಳಿಂಗಯುದ್ಧ ಗೆಲ್ಲುವ ತನಕ ಒಂದು ತರ. ಗೆದ್ದಾದ ಮೇಲೆ ಇನ್ನೊಂದು ತರ!`ತಾನು ಅಂದುಕೊಂಡದ್ದು ಆಯಿತು, ಸಾಧನೆ ಪೂರ್ತಿಯಾಯಿತು’ ಎಂದು ಅನಿಸುತ್ತಲೇ ಮನುಷ್ಯನಿಗೆ ಏನೂ ಬೇಡ ಮತ್ತು ಯಾವುದೂ ಬೇಡ ಎನಿಸತೊಡಗುತ್ತದೆ. ಈ ಮೊದಲು ಕಾಣದ `ರಿಕ್ತತೆ’ ಆವರಿಸಿಕೊಳ್ಳುತ್ತದೆ.

Image result for Mind

ಹೂವಿನಹಾಸಿಗೆ ಕೂಡ ಮುಳ್ಳಾಗಿ ಚುಚ್ಚತೊಡಗುತ್ತದೆ. ಮನುಷ್ಯನ ಮನಸ್ಸೇ ವಿಚಿತ್ರ. ಖಗೋಲದಿಂದ ಭೂಗೋಲದವರೆಗೆ ಪ್ರಪಂಚದಲ್ಲಿರುವ ಪ್ರತಿಯೊಂದನ್ನೂ ಅಧ್ಯಯನಕ್ಕೊಳಪಡಿಸಬಹುದು. ಆದರೆ ಮನಸ್ಸನ್ನು ಅಧ್ಯಯನಕ್ಕೊಳಪಡಿಸುವುದು ತುಂಬ ಕಷ್ಟದ ಕೆಲಸ. ಅದು ತುಪ್ಪದಂತಲ್ಲ. ಎಣ್ಣೆಯಂತೆ. ಎಣ್ಣೆ ನೀರಿನಲ್ಲಿ ಬಿದ್ದರೆ ನೀರಿನ ತುಂಬೆಲ್ಲ ತನ್ನನ್ನು ತಾನು ಹರಡಿಕೊಂಡಿರುತ್ತದೆ. ಮನಸ್ಸನ್ನು ನಿಗ್ರಹಿಸಿಕೊಂಡಿರಲು ಅನಾದಿಕಾಲದಿಂದ ಇದುವರೆಗೆ ಅಸಂಖ್ಯಾತ ಜನಗಳು ಪಾಠಮಾಡುತ್ತಲೇ ಬಂದಿದ್ದಾರೆ. ಮನಸ್ಸನ್ನು ಹಿಡಿದಿಟ್ಟುಕೊಂಡಿರುವುದು ಅಷ್ಟೊಂದು ಸುಲಭದ ಕೆಲಸವಲ್ಲವೆಂದು ಮನೋವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ.

Image result for Mind

ಆದರೆ ಒಂದು ಮಾತು ಮಾತ್ರ ಸತ್ಯ. ಎಲ್ಲಿಯವರೆಗೆ ಮನೋನಿಗ್ರಹವಾಗುವುದಿಲ್ಲವೋ ಅಲ್ಲಿಯವರೆಗೆ ಭಗವದನುಗ್ರಹವಾಗುವುದಿಲ್ಲ. ಮನೋನಿಗ್ರಹವಿದು ಸಾಮಾನ್ಯದ್ದಲ್ಲ. ಇದು ಪ್ರಪಂಚದಲ್ಲಿರುವ ಅತಿರಥ-ಮಹಾರಥರೆಲ್ಲ ಮೂಗು ತಿಕ್ಕುವ ಹಾಗೆ ಮಾಡಿದೆ. ತಾವು ಬಲ್ಲಿದ, ಬಲ್ಲವ, ಬಲವಂತರೆಂದು ಉಬ್ಬಿ ಕೊಬ್ಬಿ ಹೇಳುವ ಬಲ್ಲವರನ್ನು ಇದು ಬುಡಮೇಲು ಮಾಡಿದೆ. ಅವರುಗಳನ್ನು ಅತಂತ್ರ ಮಾಡಿಬಿಟ್ಟು ಅವರುಗಳ ಯೋಜನೆ, ಯೋಚನೆಗಳನ್ನು `ಉಲ್ಟಾಪುಲ್ಟಾ’ ಮಾಡಿಬಿಟ್ಟಿದೆ. ವಿಶ್ವಾಮಿತ್ರ, ಪರಾಶರರಂಥ ದಿಗ್ಗಜ ಋಷಿಗಳು ಕೂಡ ಮನೋಆಗ್ರಹಕ್ಕೆ ಮಣೆಹಾಕಿ ತಮ್ಮ `ತಥಾಕಥಿತ’ ರೆಪುಟೇಶನ್‍ನನ್ನು ಕೆಡಿಸಿಕೊಂಡುಬಿಟ್ಟರು.

Related image

ಇತ್ತೀಚಿನ ದಿನಗಳಲ್ಲಿ ಮನೋನಿಗ್ರಹದ ಕುರಿತು ಪಾಠಮಾಡುವ ಶಾಲೆ ಮತ್ತು ಯೋಗಶಾಲೆಗಳು ಅಣಬೆಗಳಂತೆ ಹುಟ್ಟಿಕೊಂಡಿವೆ. ಯೋಗಶಾಲೆಗಳಲ್ಲಿದ್ದಾಗಲೇನೋ `ಓಕೆ’! ಹೊರಬರುತ್ತಲೇ ಮುಂಚಿನ ಹಾಗೆ ಆಗಿಬಿಡುತ್ತಾರೆ. ಬರೀ ಕಣ್ಮುಚ್ಚಿ ಕುಳಿತುಕೊಳ್ಳುವುದು ಧ್ಯಾನವಲ್ಲ. ಮನಸ್ಸಿನ ಓಟ-ನೋಟಗಳನ್ನು ನಿಯಂತ್ರಿಸಿಕೊಂಡಿರುವುದು ಯೋಗ. ಧ್ಯಾನಸ್ಥಿತಿ ಮತ್ತು ಧ್ಯಾನದ ಉತ್ತುಂಗಾವಸ್ಥೆಯಲ್ಲಿ ಹಸಿದ ಪುಟ್ಟ ಕಂದಮ್ಮನಿಗೆ ಎದೆಹಾಲು ಕೊಡಲು ಧಾವಿಸುವ ತಾಯಿಯಂಥ ಉತ್ಕಟ ಮನಸ್ಥಿತಿ ಹೊಂದಿರಬೇಕು. ಹಾಗಿದ್ದರೆ ಮಾತ್ರ ಅದು `ಧ್ಯಾನ’. ಅನ್ಯರು ತನ್ನನ್ನೇ ನೋಡುವ ಹಾಗೆ ಮಾಡುವ `ಧ್ಯಾನಭಂಗಿ’ ಮಾತ್ರ! ಮನಸ್ಸನ್ನು ತಮ್ಮ ಪೊಜಿಶನ್‍ನಲ್ಲಿ ಇಟ್ಟುಕೊಂಡವರು ಹಾಗೆಲ್ಲ ಸುಖಾಸುಮ್ಮನೇ ಪೋಜು ಕೊಡಲು ಹೋಗುವುದಿಲ್ಲ.

Image result for Mind

ಮನಸ್ಸನ್ನು ಉನ್ಮುಖಿಯಾಗಿಸಲು ಸ್ವಪ್ರಯತ್ನದೊಂದಿಗೆ ದೈವೀಕೃಪೆ ಮತ್ತು ದೈವೀಸಹಾಯ ಕೂಡ ಬೇಕು. ಕೊರಡು ಕೊನರಬೇಕು. ಬರಡು ಹಯನಬೇಕು. ವಿಷವು ಅಮೃತವಾಗಬೇಕು. ಹಾಗಾಗಬೇಕು ಎಂದರೆ ಸ್ವಪ್ರಯತ್ನದೊಂದಿಗೆ ದೈವವದು `ಸಾಥ್’ ಕೊಡಬೇಕು. ಸ್ವಪ್ರಯತ್ನವೆಂಬ ಹಾಲಿನೊಂದಿಗೆ ದೈವೀಸಹಾಯವೆಂಬ ಸಕ್ಕರೆ ಸೇರಿಕೊಳ್ಳಲೇಬೇಕು. ಆಗ ಮಾತ್ರ ಅದೆಂಥ ಆಯಾಸ- ಪ್ರಯಾಸದ ಕೆಲಸವಾಗಿದ್ದರೂ ಸರಿ, ಅದು ಕುಸುಮಕೋಮಲವಾಗುತ್ತದೆ ಮತ್ತು ಅದು ಹೂವೆತ್ತಿದಷ್ಟು ಸುಲಭವಾಗಿಬಿಡುತ್ತದೆ.