ಈ ಐದು ಆಪ್-ಗಳು ಉಪಯೋಗಿಸಿ ನಿಮ್ಮ ಜೀವನವನ್ನು ಸರಳಗೊಳಿಸಿಕೊಳ್ಳಿ ಹಾಗೂ ಮೋದಿಯವರ ಡಿಜಿಟಲ್ ಇಂಡಿಯಾ ಕನಸಿನ ಭಾಗವಾಗಿ…

0
980

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗು ತಿಳಿದುಕೊಳ್ಳಲು ಅನೇಕ ಆ್ಯಪ್‌ ಗಳು ಸಹಾಯಕವಾಗಿವೆ. ಈ ಆಪ್ ಗಳ ಮೂಲಕ ನೂರಾರು ಸರ್ಕಾರಿ ಸೇವೆಗಳನ್ನು ಪಡೆಯಬಹುದು. ಇಲ್ಲಿ ಪ್ರಮುಖ 5 ಮೊಬೈಲ್ ಆಪ್ ಗಳ ಮಾಹಿತಿ ನೀಡಲಾಗಿದೆ. ಭೀಮ್ ಆ್ಯಪ್ ಮೂಲಕ ಹಣ ವರ್ಗಾವಣೆ ಹೇಗೆ?

ಉಮಂಗ್:

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 100ಕ್ಕೂ ಹೆಚ್ಚು ಸೇವೆಗಳನ್ನು ಉಮಂಗ್ (UMANG –Unified Mobile Application for New-age Governance) ಒಂದೇ ಆ್ಯಪ್‌ನಲ್ಲಿ ಪಡೆಯಬಹುದಾಗಿದೆ. ಭಾರತದಲ್ಲಿ ಮೊಬೈಲ್‌ ಆಡಳಿತ ಹಾಗೂ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮ ಪ್ರಚುರ ಪಡಿಸುವ ಉದ್ದೇಶದೊಂದಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಇ–ಆಡಳಿತ ವಿಭಾಗದಿಂದ ಈ ಹೊಸ ಆ್ಯಪ್‌ ಅಭಿವೃದ್ಧಿಯಾಗಿದೆ.

ಬಿಲ್‌ ಪಾವತಿ, ಡಿಜಿ ಲಾಕರ್‌, ಆದಾಯ ತೆರಿಗೆ ಸಲ್ಲಿಕೆ, ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಲು, ಪಿಎಫ್‌ ಮಾಹಿತಿ ಹಾಗೂ ಆಧಾರ್‌ ಸಂಪರ್ಕಿತ ಸೇವೆಗಳು ಸೇರಿ ಸರ್ಕಾರದ ಬಹುತೇಕ ಎಲ್ಲ ಇ–ಸೇವೆಗಳನ್ನು ಇದೊಂದೇ ಆ್ಯಪ್‌ನಿಂದ ಪಡೆಯಬಹುದು.

ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೂ ಗ್ರಾಹಕರ ಅನುಮಾನಗಳನ್ನು ಬಗೆಹರಿಸಲು ಸಹಾಯವೂ ಸಿಗಲಿದೆ. ಪ್ಲೇ ಸ್ಟೋರ್ ಅಥವಾ ಆ್ಯಪ್‌ ಸ್ಟೋರ್‌ನಿಂದ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೊಬೈಲ್‌, ಟ್ಯಾಬ್‌ ಅಥವಾ ಕಂಪ್ಯೂಟರ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿದ ನಂತರ ಮೊಬೈಲ್‌ ಸಂಖ್ಯೆ ಮತ್ತು ಪಿನ್‌ ನೀಡಿ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಲಾಗಿನ್‌ ಆಗಬಹುದು.

ಸಿಬೆಕ್ ಜಿಎಸ್ಟಿ:

ಸರಕು ಮತ್ತು ಸೇವಾ ತೆರಿಗೆಯನ್ನು ತೆರಿಗೆದಾರರು ತಿಳಿದುಕೊಳ್ಳಲು ಮತ್ತು ಇ-ಪಾವತಿಗಳು ಸುಲಭವಾಗಿ ಹಾಗೂ ಸುಲಲಿತವಾಗಿ ಈ ಆಪ್ ಮೂಲಕ ವ್ಯವಹರಿಸಬಹುದಾಗಿದೆ. ತೆರಿಗೆಯನ್ನು ಪಾವತಿಸಲು ಹಾಗೂ ಜಿಎಸ್ಟಿ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಸುಲಭವಾಗಿ ಪಡೆಯಲು, ಈಗಿನ ವ್ಯವಸ್ಥೆಯಿಂದ ಜಿಎಸ್ಟಿಗೆ ಬದಲಾವಣೆಗೊಳಿಸಲು, ಈ ಬಗ್ಗೆ ಇರುವ ಕಾನೂನು ಹಾಗೂ ಇತರ ಮಾಹಿತಿಗಳನ್ನು ಪಡೆಯಲು, ಪ್ರಸ್ತುತ ಆಗಿರುವ ಪರಿಷ್ಕರಣೆಗಳು, ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಮೊದಲಾದವುಗಳನ್ನು ಆಪ್ ನೆರವಾಗುತ್ತದೆ. ಅಲ್ಲದೇ ಸಿಬೆಕ್ ಸಹಾಯವಾಣಿಯ ಮೂಲಕ ಹೆಚ್ಚಿನ ಸಹಾಯವನ್ನೂ ಪಡೆಯಬಹುದು.

ಆಯಕರ್ ಸೇತು:

ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ನಾನಾ ವಿಷಯಗಳ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ‘ಆಯಕರ್ ಸೇತು’ ಹೆಸರಿನ ಮೊಬೈಲ್‌ ಆ್ಯಪ್ ಅನ್ನು ಬಳಸಬಹುದು. ಪಾನ್ ಜತೆ ಆಧಾರ್‌ ಜೋಡಣೆ ಸೌಲಭ್ಯವನ್ನೂ ಇದು ಒಳಗೊಂಡಿದೆ.

ಪರಿಣಾಮಕಾರಿ ತೆರಿಗೆ ಸಂಗ್ರಹಣೆ ವಿಷಯದಲ್ಲಿ ಸಿಬಿಡಿಟಿ ಇಟ್ಟಿರುವ ಅತ್ಯಂತ ಪ್ರಮುಖ ಹೆಜ್ಜೆ ಇದಾಗಿದ್ದು, ತೆರಿಗೆದಾರರಿಗೆ ಅನುಕೂಲಕರವಾಗಿದೆ. ಈ ಆ್ಯಪ್ ಮೂಲಕ ತೆರಿಗೆದಾರರು ತಮ್ಮ ಮನೆಯಲ್ಲೇ ಕುಳಿತು ಬೇರೆಯವರಿಂದ ಹೆಚ್ಚಿನ ನೆರವಿನ ಅಗತ್ಯವಿಲ್ಲದೆ ತಮ್ಮ ತೆರಿಗೆ ಸಂಬಂಧಿತ ಕೆಲಸಗಳನ್ನು ತಾವೇ ಮಾಡಿಕೊಳ್ಳಬಹುದು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, 7306525252 ಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡುವ ಮೂಲಕವೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದು ತೆರಿಗೆ ವಿವರ ಸಲ್ಲಿಕೆಯ ಸಮಯವಾದ್ದರಿಂದ, ಸಕಾಲಿಕವಾಗಿ ಆ್ಯಪ್ ಬಿಡುಗಡೆ ಮಾಡಲಾಗಿದೆ. ತೆರಿಗೆ ಪಾವತಿ, ತೆರಿಗೆ ರೀಫಂಡ್‌, ದೂರುಗಳ ಸಲ್ಲಿಕೆ, ಪಾನ್‌ಗೆ ಅರ್ಜಿ ಸಲ್ಲಿಕೆ ಇತ್ಯಾದಿ ಸೇವೆಗಳನ್ನು ಈ ಆ್ಯಪ್‌ನಲ್ಲಿ ಪಡೆಯಬಹುದು.ಪಾನ್‌, ಟ್ಯಾನ್, ಟಿಡಿಎಸ್‌, ರಿಟರ್ನ್ಸ್‌ ಸಲ್ಲಿಕೆ, ರೀಫಂಡ್‌ ಸ್ಥಿತಿಗತಿ ಮತ್ತು ತೆರಿಗೆ ಪಾವತಿಯಂತಹ ನಾನಾ ವಿಷಯಗಳಿಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಿಸಿಕೊಳ್ಳಲು ಅಧಿಕಾರಿಗಳ ಜತೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಚಾಟಿಂಗ್‌ ನಡೆಸುವುದಕ್ಕೂ ‘ಚಾಟ್‌ಬೋಟ್‌’ ಎಂಬ ಸೌಲಭ್ಯವನ್ನು ಇದರಲ್ಲಿ ನೀಡಲಾಗಿದೆ.

ಎಂ ಕವಚ್:

ಮೊಬೈಲ್ ಸುರಕ್ಷತೆಯ ಪರಿಪೂರ್ಣ ಆ್ಯಪ್‌ ಇದಾದಗಿದ್ದು, ಮೊಬೈಲಿನಲ್ಲಿರುವ ಖಾಸಗಿ ವಿವರಗಳನ್ನು ಕದಿಯಲು ರಕ್ಷಿಸಬಹುದಾಗಿದೆ. ಅಲ್ಲದೇ ವೈ-ಫೈ, ಬ್ಲೂಟೂಥ್, ಕ್ಯಾಮೆರಾ ಹಾಗೂ ಮೊಬೈಲ್ ಡೇಟಾಗಳಿಗೆ ಅನಧಿಕೃತವಾಗಿ ದಾಖಲು ಪಡೆಯುವ ಪ್ರಯತ್ನಗಳನ್ನೂ ತಡೆಯಬಹುದು. ಮೊಬೈಲ್ ಕಳೆದು ಹೋದರೆ ಈ ಆಪ್ ಮೂಲಕ ಸಿಮ್ ನಲ್ಲಿರುವ ಎಲ್ಲಾ ಸಂಪರ್ಕ ವಿವರಗಳು ಹಾಗೂ ಇತರ ಅಮೂಲ್ಯ ದಾಖಲೆಗಳನ್ನು ರಿಮೂವ್ ಮಾಡಿ ಫಾಕ್ಟರಿ ಸೆಟ್ಟಿಂಗ್ ಗೆ ಮರಳುವಂತೆಯೂ ಮಾಡಬಹುದು.

ಭೀಮ್:

ಭೀಮ್ ಆಪ್ ನಲ್ಲಿ ಹಣವನ್ನು ಕಳುಹಿಸಬಹುದು ಮತ್ತು ಹಣವನ್ನು ಪಡೆಯಲುಬಹುದಾಗಿದೆ. ಇದು ನಿಮ್ಮ ಬ್ಯಾಂಕಿನ ಆಪ್ ರೀತಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಮೊಬೈಲ್ ವಾಲೆಟ್ ಗಳ ಮಾದರಿಯಲ್ಲಿ ಮೊದಲೇ ಹಣ ತುಂಬಿ ನಂತರ ಬಳಸುವ ಅವಶ್ಯಕತೆ ಇಲ್ಲ. ಅಲ್ಲದೇ ವಾಲೆಟ್ ನಿಂದ ಮತ್ತೆ ನಿಮ್ಮ ಖಾತೆಗೆ ಹಣವನ್ನು ವರ್ಗಹಿಸುವ ತಲೆ ನೋವು ಇದರಲ್ಲಿಲ್ಲ. ಪಡೆದ ಮತ್ತು ನೀಡಿದ ಎರಡು ವ್ಯವಹಾರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದಲೇ ನಡೆಯಲಿದೆ.