ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್; ಮಹಾಬಲಿಪುರಂ ನಗರವನ್ನೇ ಚೀನಾದ ಅಧ್ಯಕ್ಷ ಆಯ್ಕೆ ಮಾಡಿಕೊಂಡಿದ್ದು ಯಾಕೆ?

0
199

ಮಹಾಬಲಿಪುರಂನಲ್ಲಿ ಅಂತಹ ವಿಶೇಷತೆ ಏನು?

ಸದಾ ಪಾಕಿಸ್ತಾನದ ಜೊತೆಗೆ ಭಾರತಕ್ಕೆ ಸಂಚು ರೂಪಿಸುತ್ತಿದ್ದ ಚೀನಾ ಈಗ ಭಾರತ ಒಳ್ಳೆತನಕ್ಕೆ ಕರಗಿದೆ. ಇದರಿಂದ ಪಾಕಿಸ್ತಾನ ಅಂಡು ಸುಟ್ಟ ಬೆಕ್ಕಿನಂತಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ 2 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರಿಗೆ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೇಲ್ವಂ ಅವರು ಅದ್ಧೂರಿ ಸ್ವಾಗತ ನೀಡಿದ್ದಾರೆ.

ಹೌದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್​ಪಿಂಗ್ ಮೊದಲ ಬಾರಿಗೆ ಭೇಟಿಯಾಗುತ್ತಿದ್ದು, ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಜಾಗತಿಕ ನಾಯಕರಾಗಲು ಪೈಪೋಟಿ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್’ಪಿಂಗ್ ಉಭಯ ದೇಶಗಳ ನಡುವೆ ಇರುವ ಹಲವು ವಿವಾದಗಳಿಂದ ಜಾಗತಿಕ ವೇದಿಕೆಯಲ್ಲಿ ಅಖಂಡ ವೈರಿಗಳೆಂದೇ ಪರಿಗಣಿಸಲ್ಪಡುತ್ತಾರೆ. ಆದರೆ, ಅನೌಪಚಾರಿಕ ಭೇಟಿಯ ವಿಚಾರಕ್ಕೆ ಬಂದಾಗ ಇಬ್ಬರೂ ಇನ್ನಿಲ್ಲದ ಸ್ನೇಹಿತರಂತೆ ಬಿಂಬಿಸಿಕೊಳ್ಳುತ್ತಾ ಬಂದಿದ್ದಾರೆ.

ಭಾರತ – ಚೀನಾ ಮುಖ್ಯಸ್ಥರ ನಡುವೆ ಮತ್ತೊಂದು ಅನೌಪಚಾರಿಕ ಸಭೆ ಇಂದು ಸಂಜೆ ಮಹಾಬಲಿಪುರಂನಲ್ಲಿ ನಡೆಯುಲಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಭಾರತ ಮತ್ತು ಚೀನಾ ನಡುವಿನ ವ್ಯಾಪರ ವಹಿವಾಟನ್ನು ಸುಧಾರಿಸುವ ಹಾಗೂ ಎರಡೂ ರಾಷ್ಟ್ರಗಳ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಚೀನಾದ ವುಹಾನ್ ಎಂಬಲ್ಲಿ ಉಭಯ ನಾಯಕರು ಮೊದಲ ಬಾರಿಗೆ ಅನೌಪಚಾರಿಕ ಶೃಂಗಸಭೆ ನಡೆಸಿದ್ದರು. ಈ ವೇಳೆ ಅನೇಕ ಪ್ರಮುಖ ವಿಚಾರಗಳ ಕುರಿತು ಚರ್ಚೆ ಮಾಡಿದ್ದರು. ಅದರಂತೆ ಮಹಾಬಲಿಪುರಂ ದೇವಾಲಯ, 4 ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲಿದ್ದಾರೆ. ಅದರಂತೆ ಜಾಗತಿಕ, ಪ್ರಾದೇಶಿಕ ಮಹತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಚೀನಾ ನಡುವೆ ಯಾವುದೇ ಒಪ್ಪಂದ ನಡೆಯುವುದಿಲ್ಲ.

ಮಹಾಬಲಿಪುರಂ ಯಾಕೆ?

ದೆಹಲಿ, ಮುಂಬೈ, ಬೆಂಗಳೂರು ಕೊನೇ ಪಕ್ಷ ಚೆನ್ನೈ ನಗರದಲ್ಲಾದರೂ ಭೇಟಿಯಾಗಬಹುದಿತ್ತಲ್ಲ. ಅದನ್ನು ಬಿಟ್ಟು ಮಹಾಬಲಿಪುರಂ ನಗರವನ್ನೇ ಚೀನಾದ ಅಧ್ಯಕ್ಷ ಷಿ ಜಿನ್‍ಪಿಂಗ್ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಇತಿಹಾಸ ಉತ್ತರ ನೀಡುತ್ತದೆ. ಚೀನಾ- ಭಾರತದ ನಡುವೆ 2 ಸಾವಿರ ವರ್ಷಗಳ ಸಂಬಂಧ ಇದ್ದು ಚೀನಾ, ಆಗ್ನೇಯ ಏಷ್ಯಾದ ದೇಶಗಳ ರಫ್ತು-ಆಮದು ಹೆಬ್ಬಾಗಿಲು ಮಹಾಬಲಿಪುರಂ. ಪಲ್ಲವರ ಕಾಲದಲ್ಲಿ ಚೀನಾ ಜೊತೆ ರಕ್ಷಣೆ, ವ್ಯಾಪಾರದ ನಂಟು ಉತ್ತಮವಾಗಿತ್ತು. ಚೀನಾ ಜೊತೆ ಸಂಪರ್ಕ ಸಾಧಿಸಿದ್ದಕ್ಕೆ ಚೀನಾ ಲಿಪಿಯ ನಾಣ್ಯ, ಶಾಸನಗಳು ಪತ್ತೆಯಾಗಿವೆ.

ಮಹಾಬಲಿಪುರಂ ಚೀನಾಕ್ಕೂ ಸಂಬಂಧ ವೇನು?

ಮಹಾಬಲಿಪುರಂನ ಪ್ರಾಚೀನ ಹೆಸರು ಮಾಮಲ್ಲಪುರಂ ಆಗಿದ್ದು 7-9ನೇ ಶತಮಾನದಲ್ಲಿ ಪಲ್ಲವರ ಕಾಲದ ಪ್ರಮುಖ ಬಂದರು ನಗರಿ ಇದಾಗಿದೆ. ಚೆನ್ನೈನಿಂದ 50 ಕಿ.ಮೀ. ದೂರದಲ್ಲಿ ಬಂಗಾಳಕೊಲ್ಲಿ ಅಭಿಮುಖವಾಗಿರುವ ಮಾಮಲ್ಲಪುರಂ ಬಂದರು ಜೊತೆಗೆ ವಾಸ್ತುಶಿಲ್ಪ ಶ್ರೀಮಂತಿಕೆ ಹೊಂದಿದೆ. ಪಂಚರಥ, ಕೃಷ್ಣನ ಬೆಣ್ಣೆಮುದ್ದೆ ಬಂಡೆ, ಅರ್ಜುನ ತಪಸ್ಸಿನ ಶಿಲಾಕೆತ್ತನೆ, ತೀರ ಪ್ರದೇಶದಲ್ಲಿ ದೇವಾಲಯವಿದೆ. ಈ ಐತಿಹಾಸಿಕ ತಾಣ, ದೇವಾಲಯಗಳನ್ನು ಜಿನ್‍ಪಿಂಗ್-ಮೋದಿ ವೀಕ್ಷಿಸಲಿದ್ದಾರೆ. ಅದರಲ್ಲೂ ತೀರ ಪ್ರದೇಶದ ದೇವಾಲಯ ದಕ್ಷಿಣ ಭಾರತದ ಪುರಾತನ ದೇವಾಲಯವಾಗಿದ್ದು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಯೂರೋಪ್‍ನ ಪ್ರವಾಸಿಗ ಮಾರ್ಕೋಪೋಲೋ ಇಲ್ಲಿಗೆ ಭೇಟಿ ನೀಡಿದ್ದ.

Also read: ವಾಹನ ಮಾಲೀಕರೆ ಎಚ್ಚರ; ಬೆಂಗಳೂರಿಗೆ ಬಂದಿದ್ದೆ ಯೂಟ್ಯೂಬ್ ಕಾರು ಕಳ್ಳರ ಗ್ಯಾಂಗ್, ಐದೇ ನಿಮಿಷದಲ್ಲಿ ನಿಮ್ಮ ಕಾರ್ ಕದಿಯುತ್ತಾರೆ ಎಚ್ಚರ.!