ಮೋದಿ ಸರ್ಕಾರದಲ್ಲಿ 24 ಮಂದಿ ಕ್ರಿಮಿನಲ್ಸ್….

0
844

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರು 78 ಸಚಿವರುಗಳ ಪೈಕಿ 72 ಮಂದಿ ಕೋಟ್ಯಾಧಿಪತಿಗಳಾಗಿದ್ದು, 24 ಮಂದಿ ಕ್ರಿಮಿನಲ್ ಆರೋಪ ಹೊಂದಿದವರು ಎಂದು ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ.

ದೆಹಲಿ ಮೂಲದ ಚಿಂತಕರ ಚಾವಡಿ(ಥಿಂಕ್ ಟ್ಯಾಂಕ್) ಅಸೋಸಿಯೇಷನ್ ಪಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ಅಧ್ಯಯನ ವರದಿಯಲ್ಲಿ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಕಳೆದ ವಾರ ಸಂಫುಟವನ್ನು ವಿಸ್ತರಿಸಿದ ಮೋದಿ ಅವರು ಸಂಪುಟಕ್ಕೆ ಸೇರಿಸಿಕೊಂಡಿರುವ 19 ಮಂದಿ ಹೊಸ ಸಚಿವರ ಸರಾಸರಿ ಆಸ್ತಿ 8.73 ಕೋಟಿ ಯಾಗಿರುವುದಾಗಿ ವರದಿ ತಿಳಿಸಿದೆ.

ನೂತನ ಸಚಿವರುಗಳ ಪೈಕಿ ಮಧ್ಯ ಪ್ರದೇಶದ ರಾಜ್ಯಸಭಾ ಸದಸ್ಯ ಎಂ.ಜೆ.ಅಕ್ಬರ್ ಅವರು 44.90 ಕೋಟಿ ಮೌಲ್ಯದ ಗರಿಷ್ಠ ಆಸ್ತಿ ಹೊಂದಿದ್ದು ,ಬಳಿಕ ಪಿ.ಪಿ ಚೌಧರಿ (35.35 ಕೋಟಿ ) ಮತ್ತು ವಿಜಯ್ ಗೋಯಲ್ ಅವರು 29.97 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಎಡಿಆರ್ನ ವರದಿಯ ಪ್ರಕಾರ 30 ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಸಚಿವರುಗಳೆಂದರೆ ಹಣಕಾಸು ಸಚಿವ ಅರುಣ್ ಜೇಟ್ಲಿ (113 ಕೋಟಿ) ,ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ (108 ಕೋಟಿ) ಮತ್ತು ಪಿಯೂಷ್ ಗೋಯಲ್ (95 ಕೋಟಿ ) ಆಸ್ತಿ ಹೊಂದಿದ್ದಾರೆ.

ಹೊಸದಾಗಿ ಮಂತ್ರಿಗಳಾದ ಸಚಿವರಲ್ಲಿ ಒಂದು ಕೋಟಿಗೂ ಅಧಿಕ ಆಸ್ತಿ ಹೊಂದಿದ ಸಚಿವರಲ್ಲಿ ಕರ್ನಾಟಕದ ರಮೇಶ್ ಜಿಗಜಿಣಗಿ, ಪುರುಷೋತ್ತಮ್ ರೂಪಾಲಾ, ಅನುಪ್ರಿಯಾ ಸಿಂಗ್ ಪಟೇಲ್, ಮಹೇಂದ್ರನಾಥ್, ಫಗ್ಗಾನ್ ಸಿಂಗ್ ಕುಲಸ್ತೆ, ರಾಜೇನ್ ಗೋಹೆನ್, ಎಸ್‌ಎಸ್ ಅಹ್ಲುವಾಲಿಯಾ, ಅರ್ಜುನ್ ಮೆಘ್ವಾಲ್, ಸಿಆರ್ ಚೌಧರಿ, ಮನ್ ಸುಖ್ ಭಾಯಿ ಮತ್ತು ಕೃಷ್ಣ ರಾಜ್ ಸೇರಿರುವುದಾಗಿ ಎನ್ ಡಿಟಿವಿ ವರದಿ ತಿಳಿಸಿದೆ.

6 ಮಂದಿ ಸಚಿವರು ಮಾತ್ರ ಕೋಟಿಗಿಂತ ಕಡಿಮೆ ಮೌಲ್ಯದ ಆಸ್ತಿ ಹೊಂದಿದ್ದು ಆ ಪೈಕಿ ಮಧ್ಯ ಪ್ರದೇಶದ ರಾಜ್ಯಸಭಾ ಸದಸ್ಯ ಅನಿಲ್ ಮಾಧವ್ ದವೆ ಅವರು 60.75 ಲಕ್ಷದ ಆಸ್ತಿಯೊಂದಿಗೆ ಕೊನೆಯವರಾಗಿದ್ದಾರೆ.

ನೂತನವಾಗಿ ಆಯ್ಕೆಯಾಗಿರುವ ಸಚಿವರುಗಳ ಪೈಕಿ 7 ಮಂದಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದು ,ಸಂಪುಟದಲ್ಲಿ ಒಟ್ಟು 24 ಮಂದಿ ಕ್ರಿಮಿನಲ್ ಪ್ರಕರಣ ಗಳನ್ನು ಎದುರಿಸುತ್ತಿದ್ದಾರೆ.

ವಯಸ್ಸಿನ ಪ್ರಕಾರ 31 ರಿಂದ 40 ವರ್ಷಗಳೊಳಗಿನ ಮೂವರು ಸಚಿವರುಗಳು ಸಂಪುಟದಲ್ಲಿದ್ದರೆ, 41 ರಿಂದ 60 ವರ್ಷಗಳ ಒಳಗಿನವರು 44 ಮಂದಿ ಮತ್ತು 61 ರಿಂದ 80 ವರ್ಷದ ಒಳಗಿನವರು 31 ಮಂದಿ ಸಚಿವರುಗಳಿದ್ದಾರೆ. 78 ಸಚಿವರಲ್ಲಿ 9 ಮಂದಿ ಮಾತ್ರ ಮಹಿಳೆಯರಿದ್ದಾರೆ.

14 ಮಂದಿ ಪಿಯುಸಿ ಮತ್ತು ಅದಕ್ಕಿಂತ ಕಡಿಮೆ ಶಿಕ್ಷಣ ಹೊಂದಿದವರಿದ್ದು, 63 ಮಂದಿ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಾಗಿದ್ದಾರೆ.

ಈ ವರದಿಗಳನ್ನು ಎಲ್ಲಾ ಸಚಿವರುಗಳು ಲೋಕಸಭೆ ಮತ್ತು ರಾಜ್ಯ ಸಭಾ ಚುನಾವಣೆಗಳ ವೇಳೆ ಘೋಷಿಸಿರುವ ಆಸ್ತಿ ವಿವರವನ್ನು ಅನ್ವಯಿಸಿ ಸಿದ್ದಪಡಿಸಲಾಗಿದೆ ಎಂದು ಎಡಿಆರ್ ತಿಳಿಸಿದೆ.

S dailyhunt