ಮೋದಿ ವಿರುದ್ಧ ತಿರುಗಿದ ‘ಕಾವೇರಿ’ದ ವಿವಾದ : ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಬಿಜೆಪಿ?

0
929

ಕುಡಿಯಲೂ ನೀರಿಲ್ಲ ಎಂಬ ಕರ್ನಾಟಕದ ಅಳಲನ್ನೂ ಗಮನಿಸದೇ ಕಾವೇರಿ ನದಿ ಮೇಲುಸ್ತುವಾರಿ ಸಮಿತಿ ಹಾಗೂ ಸುಪ್ರೀಂಕೋರ್ಟ್ ಪದೆಪದೆ ನೀರು ಬಿಡುವಂತೆ ಸೂಚಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸದೇ ಮೌನ ತಾಳಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪ ಮಾಡುತ್ತಾ ಕುಳಿತುಕೊಳ್ಳದೇ ಬಿಜೆಪಿ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ರಾಜಕೀಯ ಭವಿಷ್ಯದಲ್ಲಿ ಕಂದಕ ತೋಡಿಕೊಳ್ಳೋದು ಬಹುತೇಕ ನಿಶ್ಚಿತ.
ಕಾವೇರಿ ವಿವಾದ ಭುಗಿಲೆದ್ದಾಗಿನಿಂದ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಲೇ ಬಂದಿದೆ. ಕಾವೇರಿ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಲವಾರು ಬಾರಿ ಪತ್ರ ಬರೆದಿದ್ದರೂ ಅದಕ್ಕೆ ಒಮ್ಮೆಯೂ ಉತ್ತರಿಸುವ ಸೌಜನ್ಯವನ್ನೂ ತೋರಿಲ್ಲ
ತಮಿಳುನಾಡಿಗೆ ೧೨ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಸೂಚಿಸಿದಾಗ ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ಮೋದಿ ಕಾನುನು ಕೈಗೆತ್ತಿರಕೊಳ್ಳದಂತಡ ಮನವಿ ಮಾಡಿದ್ದು ಬಿಟ್ಟರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇಂದಿರಾಗಾಂಧಿ ಕಾಲದಿಂದ ಈ ಹಿಂದಿನ ಮನಮೋಹನ್ ಸಿಂಗ್ ಕಾಲದವರೆಗೂ ಬಹುತೇಕ ಎಲ್ಲಾ ಪ್ರಧಾನಿಗಳು ಕಾವೇರಿ ವಿವಾದ ತಾರಕಕ್ಕೇರಿದಾಗ ಮಧ್ಯ ಪ್ರವೇಶಿಸಿದ್ದಾರೆ.
ಸಣ್ಣ ಮಕ್ಕಳಿಂದ ಹಿಡಿದು ಯಾರೂ ಬೇಕಾದರೂ ದೂರು ನೀಡಿದರೆ ಪ್ರತಿಕ್ರಿಯಿಸಿ ಮಾದರಿ ಪ್ರಧಾನಿ ಎನಿಸಿಕೊಳ್ಳಲು ಯತ್ನಿಸುತ್ತಿರುವ ಮೋದಿ ಜೀವಜಲಕ್ಕಾಗಿ ಜನರು ಜೀವ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದರೂ ಮೌನ ವಹಿಸಿರುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಸಿದ್ದರಾಮಯ್ಯ ಮನವಿಗೆ ಸ್ಪಂದಿಸದಿದ್ದರೂ ಮಾಜಿ ಪ್ರಧಾನಿಯಾದ ದೇವೇಗೌಡರು ಮನೆ ಬಾಗಿಲಿಗೆ ತೆರಳಿ ಮನವಿ ಮಾಡಿದರೂ ಪ್ರತಿಕ್ರಿಯಿಸದೇ ಇರುವುದು ಮೋದಿ ಅವರ ಮಲತಾಯಿ ಧೋರಣೆಗೆ ಸಾಕ್ಷಿ.
ಅದರಲ್ಲೂ ಮಧ್ಯಪ್ರವೇಶದ ಅಧಿಕಾರ ಇದ್ದರೂ ಬಳಸದೇ ಇರುವುದರ ಹಿಂದೆ ರಾಜಕೀಯ ವಾಸನೆ ಬಾರದೆ ಇರಲು ಸಾಧ್ಯವಿಲ್ಲ. ಇದೇ ವೇಳೆ ಕಾವೇರಿ ನೀರು ಹರಿಸಲು ಒಪ್ಪಿದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ. ಆದರೆ ಇವರೆಲ್ಲ ಮೋದಿ ಮಧ್ಯಸ್ಥಿಕೆ ಬಗ್ಗೆ ಚಕಾರ ಎತ್ತುತ್ತಿಲ್ಲ.
ಮೋದಿ ಮಧ್ಯಪ್ರವೇಶದ ಕೂಗು ಹೆಚ್ಚಾಗುತ್ತಿದ್ದಂತೆ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದರು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಸ್ಥಿಕೆ ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡುವ ಮೂಲಕ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಸಿದ್ಧರಾಮಯ್ಯ ಇದೀಗ ನೀರು ಬಿಡದೇ ಇರಲು ತೀರ್ಮಾನಿಸಿದ್ದು, ಈ ಸಂಬಂಧ ಚರ್ಚೆಗೆ ಕರೆದ ಸರ್ವಪಕ್ಷ ಸಭೆಯನ್ನೂ ಬಹಿಷ್ಕರಿಸಿ ಕಾವೇರಿ ಕೊಳ್ಳದ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಇದೇ ರೀತಿ ಮಹದಾಯಿ ಹೋರಾಟದಲ್ಲೂ ಎಡಬಿಡಂಗಿತನ ತೋರಿದ ಬಿಜೆಪಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು
ಆ ತಪ್ಪಿನಿಂದ ಬಿಜೆಪಿ ಇನ್ನೂ ಪಾಠ ಕಲಿತಂತೆ ಇಲ್ಲ.
ರಾಜ್ಯದ ನೆಲ ಜಲ ಭಾಷೆ ವಿಷಯದಲ್ಲಿ ನಾವೆಲ್ಲರೂ ಒಂದಾಗಿ ಇರುತ್ತೀವಿ ಎಂಬ ರಾಜಕೀಯ ಭರವಸೆ ಬಿಟ್ಟು ಎಲ್ಲರೂ ಒಂದಾಗಿ ಪಕ್ಷ-ಭೇದ ಮರೆತು ಹೋರಾಟ ನಡೆಸಬೇಕಾದ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ ಎಂಬುದನ್ನು ಬಿಜೆಪಿ ನಾಯಕರು ಮರೆಯಬಾರದು.