ಮೋದಿ ಗಂಗೆಯಷ್ಟೇ ಪವಿತ್ರರು, ರಾಹುಲ್ ಗಾಂಧಿ ಅವರನ್ನು ಯಾರೂ ಗಂಭೀರವಾಗಿ ಸ್ವೀಕರಿಸಬೇಡಿ: ಬಿಜೆಪಿ

0
582

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವೈಯಕ್ತಿಕ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಸಹಾರಾ ಗ್ರೂಪ್ ಮತ್ತು ಬಿರ್ಲಾ ಕಂಪನಿಯಿಂದ ಕಿಕ್’ಬ್ಯಾಕ್ ಪಡೆದಿದ್ದು, 6 ತಿಂಗಳ ಅವಧಿಯಲ್ಲಿ 9 ಬಾರಿ ಲಂಚದ ಮೊತ್ತ ಮೋದಿಯವರಿಗೆ ಹೋಗಿದೆ ಎಂದೂ ರಾಹುಲ್ ಹೇಳಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದ್ದು, ಇಂಥ ಆಧಾರ ರಹಿತ ಆರೋಪ ಮಾಡಿರುವ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಡಿ.21 ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್’ನ ಮೆಹ್ಸಾನಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ”ಅಕ್ಟೋಬರ್ 2013ರಿಂದ ಫೆಬ್ರವರಿ 2014ರವರೆಗಿನ ಅವಧಿಯಲ್ಲಿ ಸಹಾರಾ ಕಂಪನಿಯು ಮೋದಿಯವರಿಗೆ 40 ಕೋಟಿ ರೂಪಾಯಿ ಕಿಕ್’ಬ್ಯಾಕ್ ನೀಡಿದೆ.” ಎಂದು ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಮೋದಿಗೆ ಕಿಕ್’ಬ್ಯಾಕ್ ಬಂದಿದೆ ಎನ್ನಲಾದ ದಿನಾಂಕಗಳನ್ನು ಮತ್ತು ಮೊತ್ತವನ್ನು ರಾಹುಲ್ ಓದಿ ಹೇಳಿದ್ದಾರೆ. ಜತೆಗೆ, ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ರಾಹುಲ್ ಆರೋಪವನ್ನು ಬಿಜೆಪಿ ನಾಯಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ”ಪ್ರಧಾನಿ ಮೋದಿ ಅವರು ಗಂಗೆಯಷ್ಟೇ ಪವಿತ್ರರು. ರಾಹುಲ್ ಅವರ ಬೇಜವಾಬ್ದಾರಿಯುತ, ನಾಚಿಕೆಗೇಡಿನ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದನ್ನು ಜನ ನಂಬುವುದಿಲ್ಲ. ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ಕಾಂಗ್ರೆಸ್ ಮತ್ತು ‘ಕುಟುಂಬ’ದ ಹೆಸರು ಕೇಳಿಬಂದಿದೆ. ಅದರಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂಥ ಆರೋಪ ಮಾಡಲಾಗುತ್ತಿದೆ,” ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಇದೇ ವೇಳೆ, ‘ತನ್ನನ್ನು ಕಂಡರೆ ಮೋದಿ ಅವರು ಭಯ ಬೀಳುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆ ವರ್ಷದ ಅತಿ ದೊಡ್ಡ ಜೋಕ್ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಲೇವಡಿ ಮಾಡಿದ್ದಾರೆ. ಸಂಸತ್ನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಿಜಿಜು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿರುವ ವೈಯಕ್ತಿಕ ಭ್ರಷ್ಟಾಚಾರದ ಮಾಹಿತಿಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ಬಹಿರಂಗಪಡಿಸಬೇಕು ಎಂದು ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.