ನೀತಿಕತೆ: ದೇವರಿಗೆ ಮಾಡುವ ಸೇವೆ ಎಂದೂ ವ್ಯರ್ಥವಾಗುವುದಿಲ್ಲ!!

0
2508

ಮುನಿಗಳ ಮಾತು

ಒಂದು ಊರಿನಲ್ಲಿ ಒಬ್ಬ ಜೈನ ಮುನಿಗಳು ಪಾದಯಾತ್ರೆ ಮಾಡುವ ಸಮಯದಲ್ಲಿ ಒಂದು ದೊಡ್ಡ ಗ್ರಾಮಕ್ಕೆ ಬಂದರು. ಅಲ್ಲಿ ಜೈನ ಶ್ರಾವಕರು ಅವರನ್ನು ಉಪಚರಿಸಿದರು. ನಂತರ ಆ ಗ್ರಾಮದ ಜನರ ಒತ್ತಾಯದ ಮೇರೆಗೆ ಅವರು ಪ್ರವಚನ ನೀಡಿದರು. ಪ್ರವಚನದಲ್ಲಿ ಜೈನ ಮುನಿಯು `ದಿನಾಲೂ ಬಸದಿಗೆ ಹೋಗಿ ಅಕ್ಷತೆಗಳನ್ನು ಇಟ್ಟು ಭಗವಂತನನ್ನು ಸ್ಮರಿಸಬೇಕು’ ಎಂದು ಹೇಳಿದರು.

ಆಗ ಅಲ್ಲಿ ಜನರ ಮಧ್ಯೆ ಕುಳಿತಿದ್ದ ಒಬ್ಬ ವ್ಯಕ್ತಿ ಎದ್ದು ನಿಂತು `ದಿನಾಲೂ ಒಂದು ಮುಷ್ಟಿ ಅಕ್ಷತೆ ಎಲ್ಲಿಂದ ತರೋದ್ರಿ? ಬೇಕಾದ್ರೆ ಹಂಗೆ ಹೋಗಿ ಕೈ ಮುಗಿತೀವಿ’ ಎಂದ. ಆಗ ಜೈನ ಮುನಿಗಳು `ಅಕ್ಷತೆ ಇಲ್ಲದೆ ಇದ್ರೆ ಒಂದು ಮುಷ್ಟಿ ಮಣ್ಣನ್ನಾದರೂ ತೆಗೆದುಕೊಂಡು ಹೋಗಿ ಬಸದಿಯ ಹಿಂದೆ ಹಾಕು’ ಎಂದರು. ಆಗ ಆತ `ಓಹೋ, ಇದನ್ನು ಬೇಕಾದರೆ ಮಾಡುತ್ತೇವೆ’ ಎಂದು ನುಡಿದ. ಆಗ ಜೈನ ಮುನಿಗಳು `ನಾವು ಪಾದಯಾತ್ರೆ ಮುಗಿಸಿಕೊಂಡು ಇದೇ ಮಾರ್ಗವಾಗಿ ಬರುತ್ತೇವೆ.

source: i.ytimg.com

ಆಗ ನೀನು ನಿನ್ನ ಮಣ್ಣಿನ ರಾಶಿಯನ್ನು ನಮಗೆ ತೋರಿಸು’ ಎಂದರು. ಈ ಮಾತಿಗೆ ಒಪ್ಪಿಕೊಂಡ ವ್ಯಕ್ತಿಯು ದಿನಾಲು ಒಂದು ಮುಷ್ಟಿ ಮಣ್ಣನ್ನು ತೆಗೆದುಕೊಂಡು ಹೋಗಿ ಬಸದಿಯ ಹಿಂದೆ ಹಾಕಿ ಭಗವಂತನಿಗೆ ನಮಸ್ಕರಿಸಿ ಹೋಗುತ್ತಿದ್ದ. ಹಲವಾರು ದಿನಗಳ ನಂತರ ಆ ಜೈನ ಮುನಿಗಳು ಪುನಃ ಆ ಗ್ರಾಮಕ್ಕೆ ಬಂದರು. ಆಗ ಆ ವ್ಯಕ್ತಿಯನ್ನು ಕರೆಸಿ `ನಿನ್ನ ಮಣ್ಣಿನ ರಾಶಿಯನ್ನು ತೋರಿಸು’ ಎಂದರು. ಆಗ ಆ ವ್ಯಕ್ತಿ `ನೋಡಿ ಅದೇ ನನ್ನ ಮಣ್ಣಿನ ರಾಶಿ’ ಎಂದು ಕೈಮಾಡಿ ತೋರಿಸಿದ. ನಂತರ ಮುನಿಗಳು `ನೀನು ಆ ಮಣ್ಣನ್ನು ಎಲ್ಲಿಂದ ತಂದಿರುವೆ?’ ಆ ಜಾಗ ತೋರಿಸು’ ಎಂದು ಹೇಳಿದರು. ಅದಕ್ಕೆ ಆ ವ್ಯಕ್ತಿ ಮುನಿಗಳನ್ನು ಕರೆದುಕೊಂಡು ಹೋಗಿ ಮಣ್ಣು ತಂದ ಸ್ಥಳ ತೋರಿಸಿದ.

source: i1.wp.com

ಅಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಆಗ ಮುನಿಗಳು ಹೇಳಿದರು. `ಬಸದಿಯಲ್ಲಿ ಭಾರೀ ಗಾತ್ರದ ಮಣ್ಣಿನ ರಾಶಿ ಇದೆ. ಆದರೆ ಈ ಸ್ಥಳದಲ್ಲಿ ಅದರ ಹೊಂಡ ಕಾಣುತ್ತಿಲ್ಲ’ ಎಂದರು. ಆಗ ಆ ವ್ಯಕ್ತಿ `ಅದು ಗಾಳಿ-ಮಳೆಯಿಂದ ತುಂಬಿ ಮೊದಲಿನಂತಾಗಿದೆ’ ಎಂದು ನುಡಿದ. ಅದಕ್ಕೆ ಮುನಿಗಳು ಹೇಳುತ್ತಾರೆ. `ನೀನು ದಿನಾಲೂ ಮಣ್ಣು ಇಡುವ ಬದಲಾಗಿ ಅಕ್ಕಿ ಇಟ್ಟಿದ್ದರೆ ಆ ಹೊಂಡದ ರೀತಿ ನಿನ್ನ ಮನೆ ತುಂಬಿಹೋಗುತ್ತಿತ್ತು. ಆದರೆ ನೀನು ಅದನ್ನು ಕಳೆದುಕೊಂಡೆ’ ಎಂದರು. ಆಗ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ತಪ್ಪನ್ನು ತಿದ್ದಿಕೊಂಡು ಮಡಿವಸ್ತ್ರ ಧರಿಸಿ ದಿನಾಲೂ ಬಸದಿಗೆ ಹೋಗಲಾರಂಭಿಸಿದ.

Representational Image jain basadi