ಪ್ರತಿಯೊಬ್ಬರೂ ಓದಲೇಬೇಕಾದ ಮಹಾಭಾರತದ ನೀತಿಕಥೆ!!

0
2267

ಒಂದು ದಿನ ಎಲ್ಲವನ್ನೂ ಬಿಟ್ಟುಹೋಗಬೇಕು….

ಪಾಂಡವರು ವನವಾಸದಲ್ಲಿದ್ದಾಗ ದೂರ್ವಾಸ ಮಹರ್ಷಿಗಳು ಒಮ್ಮೆ ದಿಢೀರೆಂದು ಬಂದು, ದ್ರೌಪದಿಗೆ ತನ್ನ 400 ಶಿಷ್ಯರೊಂದಿಗೆ ಊಟಕ್ಕೆ ಬರುವೆನೆಂದು ಹೇಳಿ ಸ್ನಾನಕ್ಕೆ ಹೊರಟರು. ಆಗ ತಾನೇ ಎಲ್ಲರೂ ಊಟ ಮಾಡಿಯಾಗಿತ್ತು ಮತ್ತು ಪಾತ್ರೆಗಳನ್ನು ತೊಳೆದಿಡಲಾಗಿತ್ತು. 400 ಜನರಿಗೆ ಬಡಿಸಲು ಆಹಾರವಿಲ್ಲದಿದ್ದರಿಂದ
ದ್ರೌಪದಿಯು ಕಂಗೆಟ್ಟು ಕೃಷ್ಣನಿಗೆ ಪ್ರಾರ್ಥಿಸಿದಳು. ಕೃಷ್ಣನು ತಕ್ಷಣವೇ ದ್ರೌಪದಿಯ ಎದುರು ಪ್ರತ್ಯಕ್ಷನಾಗಿ, ತನಗೆ ಬಹಳ ಹಸಿವಾಗುತ್ತಿದೆಯೆಂದೂ ತಿನ್ನಲು ದ್ರೌಪದಿಯು ತನಗೇನಾದರೂ ಕೊಡಬೇಕೆಂದು ತಗಾದೆ ಮಾಡಿ, ಒಂದು ಪಾತ್ರೆಯಲ್ಲಿ ಒಂದೇ ಒಂದು ಅನ್ನದ ಅಗುಳಿದ್ದುದನ್ನು ಕಂಡು ಅದನ್ನೇ ತಿಂದನು. ತಿಂದ ಪಾತ್ರೆಯನ್ನು ಕೃಷ್ಣನು “ಅಕ್ಷಯ ಪಾತ್ರೆ”ಯಾಗಿ ಮಾಡಿಬಿಟ್ಟನು.
ದೂರ್ವಾಸರು 400 ಋಷಿಗಳನ್ನು ಸ್ನಾನದ ನಂತರ ಊಟಕ್ಕೆಂದು ದ್ರೌಪದಿಯ ಬಳಿ ಕರೆತಂದಾಗ ಆ ಅಕ್ಷಯಪಾತ್ರೆಯಿಂದ ಎಷ್ಟು ಊಟ ಬಡಿಸಿದರೂ ಊಟ ಮುಗಿಯಲೇ ಇಲ್ಲ. ಆದ್ದರಿಂದ ಕೊಡುತ್ತಲೇ ಇರುವುದಕ್ಕೆ ಭಾರತದಲ್ಲಿ “ಅಕ್ಷಯ ಪಾತ್ರೆ” ಎನ್ನುತ್ತಾರೆ.

ಕೃಷ್ಣ – ಸುಧಾಮರ ಕಥೆಯೂ ಹೀಗೆಯೆ. ಸುಧಾಮನ ಪತ್ನಿಯು ಬಡತನವನ್ನು ತಾಳಲಾರದೆ ಸುಧಾಮನು ಕೃಷ್ಣನ ಬಳಿಗೆ ಹೋಗಿ ಏನಾದರೊಂದನ್ನು ಯಾಚಿಸಬೇಕೆಂದು ಕೋರಿದಳು. ಕೃಷ್ಣನ ಬಳಿ ಬರಿಗೈಯಲ್ಲಿ ಹೋಗಲು ಸಾಧ್ಯವಿಲ್ಲವೆಂದು ಸುಧಾಮನು ಹೇಳಿದಾಗ ಆತನ ಪತ್ನಿಯು ಮೂರು ಹಿಡಿಯಷ್ಟು ಅವಲಕ್ಕಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಟ್ಟಳು. ಸುಧಾಮನು ಕೃಷ್ಣನ ಬಳಿ ತಲುಪಿದಾಗ ಕೃಷ್ಣನು ಓಡಿ ಬಂದು ಸುಧಾಮನನ್ನು ಕರೆದೊಯ್ದು ಅವನ ಪಾದಗಳನ್ನು ತೊಳೆದು ಅಷ್ಟೊಂದು ಪ್ರೇಮವನ್ನು ತೋರಿಸಿದನು. “ಸುಧಾಮ” ಎಂದರೆ “ಉತ್ತಮವಾದ ಸ್ಥಳ ಅಥವಾ ಮಂಗಳಮಯವಾದ ಸ್ಥಳ.” ಅವರಿಬ್ಬರ ಪ್ರೇಮವು ಎಷ್ಟು ಗಾಢವಾಗಿತ್ತೆಂದರೆ ಸುಧಾಮನು ಸಂಪತ್ತನ್ನು ಕೇಳಲೂ ಮರೆತುಹೋದ ಮತ್ತು ಸುಧಾಮನಿಗೇನು ಬೇಕೆಂದು ಕೃಷ್ಣನೂ ಕೇಳದೆ, “ನನಗೆಂದು ಏನು ತಂದಿದ್ದೀಯ? ನನಗೆ ಕೊಡು. ನಿನ್ನ ಪತ್ನಿಯು ನನಗೆಂದು ಏನೋ ಕಳುಹಿಸಿದ್ದಾಳೆ. ನನಗೇಕೆ ಅದನ್ನು ಕೊಡುತ್ತಿಲ್ಲ? ಕೊಡು, ಕೊಡು” ಎಂದು ಸುಧಾಮನಿಂದ ಕಿತ್ತುಕೊಂಡು ಎರಡು ಹಿಡಿ ಅವಲಕ್ಕಿಯನ್ನು ತಿಂದು, ಮೂರನೆಯ ಹಿಡಿಯನ್ನು ತಿನ್ನುವಷ್ಟರಲ್ಲೇ ರುಕ್ಮಿಣಿಯು ಓಡಿ ಬಂದು, ಆ ಮೂರನೆಯ ಹಿಡಿಯು ತನಗೆ ಕೊಡಬೇಕೆಂದು ಕೇಳಿ ತಿಂದಳು.

ಸುಧಾಮನು ಮನೆ ತಲುಪಿದಾಗ ಅವನ ಮನೆಯ ತುಂಬಾ ಬಂಗಾರ ಮತ್ತಿನ್ನಿತರ ಸಂಪತ್ತನ್ನು ಕಂಡು ಬೆರಗಾದನು. ಇದರ ಸ್ಮರಣೆಗಾಗಿ “ಅಕ್ಷಯ ತೃತೀಯ”ವನ್ನು ಆಚರಿಸುತ್ತಾರೆ ಮತ್ತು ಆ ದಿನ ಏನೇ ಪಡೆದರೂ ಅದು ಬೆಳೆಯುತ್ತದೆಂಬ ನಂಬಿಕೆಯಿದೆ. ಬಂಗಾರವನ್ನು ಕೊಂಡು ಕೊಡುಗೆಯಾಗಿ ಕೊಡುತ್ತಾರೆ. ಅಕ್ಷಯ ತೃತೀಯದಂದು ಗಂಗಾ ನದಿಯು ಮಾನವತೆಯನ್ನು ಪವಿತ್ರಗೊಳಿಸುವ ಸಲುವಾಗಿ ಭೂಮಿಯ ಮೇಲೆ ಇಳಿದು ಬಂದ ದಿನವೆಂದೂ ಹೇಳುತ್ತಾರೆ.

ಏನೇ ಇರಲಿ, ಪ್ರತಿನಿತ್ಯವೂ ಉತ್ಸವವನ್ನು ಆಚರಿಸಿ. ನಾವಿರುವ ಈ ಜಗತ್ತು ಮತ್ತು ಎಲ್ಲವೂ ಏನೇನೂ ಅಲ್ಲ ಎಂದು ತಿಳಿಯಿರಿ! ಎಲ್ಲವನ್ನೂ ಒಂದು ದಿನ ಇಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ. ಈ ದೇಹವೂ ಭೂಮಿಗೆ ಮರಳುತ್ತದೆ. ಆದರೆ ಆತ್ಮವಾಗಿರುವ ನಾವು ಮಾತ್ರ ಜೀವಂತವಾಗಿರುತ್ತೇವೆ. ನಾವು ಅನಂತವಾಗಿರುವುದರಿಂದ ಮತ್ತೆ ಎದ್ದು ಬರುತ್ತೇವೆ. ಯಾವುದೂ ಅಸಾಧ್ಯವಲ್ಲ. ಭಕ್ತಿಯು ಬಹಳ ಘನವಾಗಿದ್ದಾಗ ಕೇವಲ ಆಧ್ಯಾತ್ಮಿಕ ಉನ್ನತಿ ಮಾತ್ರವಲ್ಲ, ಸಂಪತ್ತೂ ಹರಿದು ಬರುತ್ತದೆಂದು ತಿಳಿಯಿರಿ. ಮೇಲಿನ ಕಥೆಗಳ ಸಾರವೇ ಅದು.