ಸಣ್ಣ ಕತೆ : ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಎಂದಿಗೂ ದೇವರು ಇರುತ್ತಾನೆಯೇ??

0
5329

ಭಕ್ತನೊಬ್ಬನಿದ್ದ. ಅವನು ದೇವರನ್ನು ಬಹುವಾಗಿ ನಂಬುತ್ತಿದ್ದ. ಅತ್ಯಂತ ಪ್ರೀತಿಯಿಂದ ಮತ್ತು ಭಕ್ತಿಯಿಂದ ಪರಮಾತ್ಮನ ಸೇವೆ ಮಾಡುತ್ತಿದ್ದ. ಅದೊಂದು ದಿನ ಭಗವಂತನಲ್ಲಿ `ನಾನು ನಿನ್ನನ್ನು ಅತ್ಯಂತ ಭಕ್ತಿಯಿಂದ ಆರಾಧಿಸುತ್ತೇನೆ. ಆದರೂ ಇದುವರೆಗೂ ನನಗೆ ನಿನ್ನ ಅನುಭೂತಿ ಆಗಿಲ್ಲ. ನೀನು ಪ್ರತ್ಯಕ್ಷ ದರ್ಶನ ಕೊಡದಿದ್ದರೂ ಪರವಾಗಿಲ್ಲ, ನೀನು ಇದ್ದೀಯ ಎಂಬುದು ನನ್ನ ಅನುಭವಕ್ಕೆ ಬರುವಂತೆ ಮಾಡು’ ಎಂದು ಬೇಡಿಕೊಂಡ.ಆಗ ಪರಮಾತ್ಮ ಇವನ ಮನದೊಳಗೆ ಪ್ರವೇಶಿಸಿ `ಸರಿ ನಿನಗೆ ನನ್ನ ಇರುವು ದೊರೆಯಬೇಕಲ್ಲವೇ ಸಮುದ್ರದ ಬಳಿಗೆ ಹೋಗಿ ಕಡಲ ಕಿನಾರೆಯಲ್ಲಿನ ಮರಳಿನ ಮೇಲೆ ನಡೆದುಕೊಂಡು ಹೋಗುತ್ತಿರು.

ನೀನು ಮರಳಿನ ಮೇಲೆ ನಡೆಯುತ್ತಿರುವಾಗ ನಿನಗೆ ಎರಡು ಹೆಜ್ಜೆಗುರುತುಗಳ ಜಾಗದಲ್ಲಿ ನಾಲ್ಕು ಕಾಣಿಸುತ್ತವೇ. ಎರಡು ಹೆಜ್ಜೆ ಗುರುತು ನನ್ನವಾದರೆ ಉಳಿದೆರಡು ಹೆಜ್ಜೆ ಗುರುತು ನಿನ್ನವೆಂದು ತಿಳಿ. ಹೀಗೆ ನಿನಗೆ ನಾನು ನನ್ನ ಇರುವಿಕೆಯನ್ನು ತೋರಿಸುತ್ತೇನೆ’ ಎಂದು ಹೇಳಿದ.ಮರುದಿನವೇ ಭಕ್ತ ಸಮುದ್ರ ತೀರದ ಮರಳಿನಲ್ಲಿ ನಡೆದು ಹೋದ. ಇವನು ಮರಳಿನ ಮೇಲೆ ನಡೆಯುತ್ತಿರುವಾಗ ಇವನ ಎರಡು ಹೆಜ್ಜೆ ಗುರುತು ಗಳೊಡನೆ ಮತ್ತೆರಡು ಹೆಜ್ಜೆ ಗುರುತುಗಳು ಕಾಣಸಿಕ್ಕವು. ಎರಡೂ ಹೆಜ್ಜೆಗುರುತುಗಳು ಜೊತೆಜೊತೆಯಾಗೇ ನಡೆಯುತ್ತಿರುವಂತೆ ಇದ್ದವು. ಪ್ರತಿದಿನವೂ ಇದೇ ರೀತಿ ನಡೆಯುತ್ತಿತ್ತು. ಒಂದು ಬಾರಿ ಭಕ್ತನಿಗೆ ವ್ಯವಹಾರದಲ್ಲಿ ನಷ್ಟವಾಯಿತು. ಇವನ ನೆಂಟ-ರಿಷ್ಟರೇ ಇವನಿಂದ ದೂರ ಸರಿಯತೊಡಗಿದರು.ಈಗ ಭಕ್ತ ಎಂದಿನಂತೆ ಸಮುದ್ರ ತೀರದಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದರೂ ಎರಡು ಹೆಜ್ಜೆ ಗುರುತುಗಳು ಮಾತ್ರ ಕಾಣಸಿಕ್ಕುತ್ತಿದ್ದವು. ಮತ್ತೆರಡು ಹೆಜ್ಜೆ ಗುರುತುಗಳು ಕಾಣಿಸುತ್ತಲೇ ಇರಲಿಲ್ಲ.

ಇದ-ರಿಂದ ಭಕ್ತನಿಗೆ ಅಚ್ಚರಿಯಾಯಿತು. ಕೆಟ್ಟ ಸಮಯದಲ್ಲಿ ನೆಂಟರಿಷ್ಟರು ದೂರ ಹೋಗುವುದು ಸಹಜ, ಆದರೆ ಭಗವಂತನೂ ದೂರಾಗುವುದು ಎಂದರೇನು ಎಂಬುದಾಗಿ ಪ್ರಶ್ನಿಸಿಕೊಂಡ. ನಿಧಾನ ವಾಗಿ ಇವನ ವ್ಯಾವಹಾರಿಕ ಬದುಕಿನಲ್ಲಿ ಸುಧಾರಣೆ ಕಂಡುಬರತೊಡಗಿತು. ಕಷ್ಟಕಾಲದಲ್ಲಿ ಇವನಿಂದ ದೂರ ಹೋಗಿದ್ದವರೆಲ್ಲರೂ ಒಬ್ಬೊಬ್ಬರಾಗಿ ಮತ್ತೆ ಹತ್ತಿರ ವಾಪಸು ಬರತೊಡಗಿದರು. ಎಂದಿನಂತೆ ಕಡಲ ಕಿನಾರೆಯ ಮರಳಿನ ಮೇಲೆ ನಡೆಯುವುದನ್ನು ಭಕ್ತ ಮುಂದುವರಿಸಿದ್ದ. ಆಗ ಒಂದು ದಿನ ಇವನ ಎರಡು ಹೆಜ್ಜೆಗಳ ಜೊತೆಗೆ ಮತ್ತೆರಡು ಹೆಜ್ಜೆಗಳು ಮತ್ತೆ ಕಾಣಿಸಕೊಳ್ಳತೊಡಗಿದವು. ಇದ-ರಿಂದ ಭಕ್ತ ಸಹಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.

ಭಕ್ತ `ಹೇ ದೇವ, ನಾನು ಸಂಕಷ್ಟದಲ್ಲಿದ್ದಾಗ ಎಲ್ಲರೂ ನನ್ನಿಂದ ದೂರ ಹೋಗಿದ್ದರು. ಇದರಿಂದ ನನಗೆ ಹೆಚ್ಚಿನ ನೋವೇನೂ ಆಗಿರಲಿಲ್ಲ, ಆದರೆ ಆ ಸಮಯದಲ್ಲಿ ನನ್ನನ್ನು ನೀನೂ ಬಿಟ್ಟು ಹೋಗಿದ್ದೆ ಯಲ್ಲ. ಇದಕ್ಕೆ ಏನೆನ್ನಬೇಕು. ನೀನು ಹೀಗೆ ಮಾಡಬಹುದಾ?’ ಎಂದು ಪ್ರಶ್ನಿಸಿದ. ಆಗ ಪರ ಮಾತ್ಮ `ನಿನ್ನ ಕಷ್ಟಕಾಲದಲ್ಲಿ ನಾನು ನಿನ್ನನ್ನು ಬಿಟ್ಟು ಹೋಗಿದ್ದೆ ಎಂದು ಯೋಚಿಸಲು ಹೇಗೆ ಸಾಧ್ಯ. ನಿನ್ನ ಕೆಟ್ಟ ಕಾಲದಲ್ಲಿ ಮರಳಿನಲ್ಲಿ ಕಾಣಿಸುತ್ತಿದ್ದ ಎರಡು ಹೆಜ್ಜೆ ಗುರುತುಗಳು ಯಾರವು ಎಂದುಕೊಂಡಿದ್ದೆ. ಅವು ನನ್ನವು. ಆ ಸಮಯದಲ್ಲಿ ನಾನು ನಿನ್ನನ್ನು ಮಡಿಲಲ್ಲಿ ಇಟ್ಟುಕೊಂಡು ಸಾಗುತ್ತಿದ್ದೆ. ಆಗ ಕಾಣುತ್ತಿದ್ದ ಹೆಜ್ಜೆ ಗುರುತುಗಳು ನನ್ನವು. ಯಾವಾಗ ನೀನು ಸ್ವಸಮರ್ಥ ಎಂದು ನನಗೆ ಎನ್ನಿಸಿತೋ ಆಗ ನಾನು ನಿನ್ನನ್ನು ಕೆಳಕ್ಕೆ ಇಳಿಸಿದೆ. ಹಾಗಾಗಿ ನಿನ್ನ ಹೆಜ್ಜೆಗುರುತುಗಳು ಈಗ ಕಾಣಿಸುತ್ತಿವೆ’ ಎಂದು ಹೇಳಿದ.