ನೈಸರ್ಗಿಕವಾಗಿ ತಾಯಿಯ ಹಾಲು ಮಗುವಿಗೆ ಶ್ರೇಷ್ಠ

0
894

ತಾಯಿಹಾಲು ಪರಿಶುದ್ಧವಾಗಿರುತ್ತದೆ. ಮಗುವಿಗೆ ಬೇಕಾದಂತೆ ಸಮಶೀತೋಷ್ಣವಾಗಿರುತ್ತದೆ. ಬೇಕೆಂದಾಗ ಸಿಗುತ್ತದೆ. ಹಾಲು ಕುಡಿಸುವಿಕೆ ತಾಯಿ–ಮಗುವಿನ ಮಧುರ ಬಾಂಧವ್ಯ ಹೆಚ್ಚಿಸುತ್ತದೆ. ಮೊಲೆಹಾಲು ಮಗುವಿನ ವಯಸ್ಸಿಗೆ ತಕ್ಕಂತೆ ಒದಗುವುದರಿಂದ ಅದು ಆದರ್ಶವಾದ ಆಹಾರವಾಗಿದೆ. ಈ ಹಾಲು ಎಳೆಯ ಕಂದನಿಗೆ ಸೂಕ್ತ ಆಹಾರವಾಗಿದ್ದು ಅಗತ್ಯವಾದ ಪೌಷ್ಟಿಕತೆಯನ್ನು ಪೂರೈಸುತ್ತದೆ. ಅದರಲ್ಲಿನ ಖನಿಜ ಲವಣಗಳು (ಕ್ಯಾಲ್ಸಿಯಂ, ಕಬ್ಬಿಣ ಇತ್ಯಾದಿ) ಶಿಶುವಿನ ಬೆಳವಣಿಗೆಯ ಆವಶ್ಯಕತೆಗಳನ್ನು ಪೂರೈಸಬಲ್ಲವು.

*ಲ್ಯಾಕ್ಟಿಕ್ ಆಮ್ಲದ ಸಹಾಯದಿಂದ ಮಗು, ಮೂಳೆಗಳ ಬೆಳವಣಿಗೆಗೆ ಬೇಕಾದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಲವಣಗಳನ್ನು ಹೀರಿಕೊಳ್ಳುತ್ತದೆ. ತಾಯಿ ಹಾಲಿನಲ್ಲಿ ಅಲರ್ಜಿ ನಿರೋಧಕ ಶಕ್ತಿ ಸಹ ಇರುತ್ತದೆ. ಇದು ಹಸುಗೂಸುಗಳ ಗಜಕರ್ಣ ಆಹಾರದ ಅಲರ್ಜಿಗಳ ಹಾವಳಿಯನ್ನು ಹತ್ತಿಕ್ಕುವುದು.

*ಮೊಲೆಹಾಲು ಸಿಹಿಯಾಗಿರಲು ಅದರಲ್ಲಿರುವ ಲ್ಯಾಕ್ಟೋಸ್ ಕಾರಣ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಬೇಕಾಗುವ ಗ್ಯಾಲಕ್ಟೋಸನ್ನು ಹೇರಳವಾಗಿ ಪೂರೈಸುವುದು.

*ಎದೆಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಲವಣಾಂಶಗಳು ಹಸು, ಎಮ್ಮೆ ಮತ್ತು ಡಬ್ಬಿಹಾಲು ಅಥವಾ ರಾಸಾಯನಿಕಸೂತ್ರದ ಹಾಲಿಗಿಂತ ಕಡಿಮೆ ಇದ್ದರೂ ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ.

*ಮೊಲೆಹಾಲು ಕುಡಿಸುವುದರಿಂದ ತಾಯಿಯ ಗರ್ಭಕೋಶ ಬೇಗ ಸಂಕುಚಿತವಾಗುತ್ತದೆ. ಮುಂದಿನ ಗರ್ಭಧಾರಣೆ ನಿಧಾನವಾಗುತ್ತದೆ. ಹಾಗೆಯೇ ಗರ್ಭಿಣಿಯರಿಗೆ ತೊಡೆ ಮತ್ತು ಪೃಷ್ಠ ಭಾಗದಲ್ಲಿಯ ಕೊಬ್ಬು ಹಾಲು ಕುಡಿಸುವುದರಿಂದ ಕರಗುತ್ತದೆ.

*ತಾಯಿ ಹಾಲಿನಲ್ಲಿರುವ ಕೊಬ್ಬಿನಲ್ಲಿ ಲಿನೋಲಿಯಿಕ್ ಮೇದೋಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದು, ಸುಲಭವಾಗಿ ಹೀರಲ್ಪಡುತ್ತದೆ; ಅದು ಮೆದುಳಿನ ಬೆಳವಣಿಗೆಗೆ ಸಹಾಯಕವಾಗುತ್ತದೆ.

*ಎದೆ ಹಾಲಿನೊಳಗೆ ನೀರಿನಲ್ಲಿ ಕರಗುವ ಸಿ ಮತ್ತು ಬಿ ಸಂಕೀರ್ಣ ಜೀವಸತ್ವಗಳು ಮತ್ತು ಕೊಬ್ಬಿನಲ್ಲಿ ಕರಗುವ ವಿಶೇಷವಾದ ಡಿ ಜೀವಸತ್ವ ಇರುತ್ತದೆ. ಇವು ಮಗುವಿನ ಸಾಮಾನ್ಯ ಬೆಳವಣಿಗೆಗೆ ಸಹಾಯಕಾರಿ.

*ತಾಯಿಹಾಲಿನಲ್ಲಿ ಐಜಿಎ, ಐಜಿಜಿ ಮತ್ತು ಐಜಿಎಮ್ ಪ್ರತಿಕಾಯಗಳು ಇರುತ್ತವೆ. ಈ ರೋಗನಿರೋಧಕ ವಸ್ತುಗಳು ರೋಗಕಾರಕ ಸೂಕ್ಷ್ಮ ಜೀವಿಗಳಿಂದ ಬರಬಹುದಾದ ನೆಗಡಿ, ಕೆಮ್ಮು, ಪೋಲಿಯೊ, ನ್ಯೂಮೋನಿಯಾ ಬೇಧಿಗಳಿಂದ ರಕ್ಷಣೆಯನ್ನೊದರಿಸುತ್ತವೆ. ತಾಯಿ ಅಪೌಷ್ಟಿಕತೆಯಿಂದ ತತ್ತರಿಸುತ್ತಿದ್ದರೂ, ಅವಳಿಂದ ಉತ್ಪನ್ನವಾದ ಹಾಲು ನೀರಾದರೂ ಅಮೀಬ ಜಿಯಾರ್ಡಿಯಾ ಮುಂತಾದ ಕ್ರಿಮಿಗಳನ್ನು ಅದು ಯಶಸ್ವಿಯಾಗಿ ನಾಶ ಮಾಡುತ್ತದೆ.

ಹಾಲೂಡಿಸುವ ತಾಯಿ ಸಮತೋಲನ ಆಹಾರವನ್ನು ಸೇವಿಸಬೇಕು. ಮೊಲೆಯುಣಿಸುವ ಮತ್ತು ಹಸುಳೆಯ ಆರೈಕೆ ಮಾಡುವ ವಿಧಾನಗಳ ಬಗೆಗೆ ಸಲಹೆ ಸೂಚನೆಗಳನ್ನು ತಾಯಿಯಾಗುವವಳು ಮೊದಲೇ ಅನುಭವಸ್ಥರ ಜೊತೆಗೆ ಮಾತನಾಡಿ, ಚರ್ಚಿಸಿ ತಿಳಿದುಕೊಂಡಿರಬೇಕು. ಮಗು ಹಸಿದಾಗ ಅಳತೊಡಗುತ್ತದೆ. ಕಾರಣ ಮಗು ಹಸಿದಾಗ ಮೊಲೆಯುಣಿಸುವುದು ಅತ್ಯುತ್ತಮ ವಿಧಾನ; ಮೊಲೆಹಾಲೂಡಿಸುವುದರಿಂದ ತಾಯಿಯ ಆಕಾರ ವಿಕಾರಗೊಳ್ಳುವುದೆಂಬುದು ತಪ್ಪು.