ಬೇಸಿಗೆಯ ಧಗೆಯಿಂದ ಮುಕ್ತಿ ಹೊಂದಲು ದೂರದ ಸ್ಥಳಗಳಿಗೆ ಹೋಗೋ ಬದ್ಲು ಬೆಂಗಳೂರಿನ ಸಮೀಪದಲ್ಲಿರುವ ಈ ಮುತ್ಯಾಲಮಡುವಿನ ಜಲಪಾತಕ್ಕೆ ಒಮ್ಮೆ ಭೇಟಿ ಕೊಡಿ…

0
908

ಬೆಂಗಳೂರಿನಿಂದ 45 ಕಿಮಿ ದೂರದಲ್ಲಿರುವ, ಆನೇಕಲ್ ಇಂದ 5 ಕಿಮಿ ದೂರದಲ್ಲಿರುವ ಈ ಮುತ್ಯಾಲಮಡುವು ತನ್ನ ಹಸಿರು ಸಂಪತ್ತಿನಿಂದ, ಕಣ್ಣಿಗೆ ಕಾಣುವಷ್ಟು ದೂರದ ಬೆಟ್ಟಗುಡ್ಡಗಳ ಸಾಲಿನಿಂದ ಕೂಡಿದ್ದು ನಿಜಕ್ಕೊ ಒಂದು ಮಲೆನಾಡನ್ನು ಪ್ರವೇಶಿಸಿದ ಅನುಭವವಾಗುತ್ತದೆ.

ಕಾಳನಾಯಕನ ಹಳ್ಳಿ ಸಮೀಪದಲ್ಲಿ ಸಣ್ಣ ತೊರೆಯಾಗಿ ಹರಿಯುವ ಜರಿಯು ಇಲ್ಲಿ ಮುತ್ಯಾಲಮಡುವಾಗಿದೆ. ಇನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಇಳಿದಲ್ಲಿ ಬಲಪಾರ್ಶ್ವದ ಕಣಿವೆಯಲ್ಲಿ ಜುಳು ಜುಳು ಸಪ್ಪಳದೊಂದಿಗೆ ಪುಟ್ಟ ಪುಟ್ಟ ಕಲ್ಲುಬಂಡೆಗಳ ನಡುವೆ ಹರಿದುಬರುವ ಜರಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತ ಇಳಿದರೆ ಎಡಗಡೆಗೆ ಸುಮಾರು 300 ಅಡಿಗಳ ಎತ್ತರದಿಂದ ಹನಿ ಹನಿಯಾಗಿ ಹೊಂಡಕ್ಕೆ ಬೀಳುವ ನೀರ ಹನಿಗಳು ಮುತ್ತಿನಂತೆ ಗೋಚರಿಸುವುದರಿಂದ ಈ ಜಲಧಾರೆಗೆ ಮುತ್ಯಾಲ ಮಡುವೆಂಬ ಹೆಸರು ಬಂದಿದೆ.

ಅಲ್ಲಿಂದ ಮುಂದೆ ದೇಗುಲವೊಂದರ ಪಕ್ಕದಲ್ಲಿ ಒಂದರ್ಧ ಕಿಮಿ ದೂರದ ಏರಿಳಿತದ ಕಣಿವೆಯ ಹಾದಿಯಲ್ಲಿ ಸಾಗಿದರೆ ತಂಪಾದ ಪರಿಸರದಲ್ಲಿ ಬಂಡೆಗಳ ಮದ್ಯೆ ಧುಮುಕುವ ಶಂಖುಚಕ್ರ ಜಲಪಾತ ಗೋಚರಿಸುತ್ತದೆ.500 ಅಡಿಗಳಿಗೂ ಹೆಚ್ಚು ಎತ್ತರದಿಂದ ಎರಡು ಮೂರು ಹಂತಗಳಲ್ಲಿ ಧುಮುಕುವ ಜಲಧಾರೆಯೂ ಮಲೆನಾಡನ್ನು ನೆನಪಿಸುವಲ್ಲಿ ಸಂಶಯವೇ ಇಲ್ಲ.ಅಡ್ಡ ಸಿಗುವ ಜಾರಿಯನ್ನು ದಾಟಿ ಗಿಡಗಳ ಮದ್ಯೆ ನಡೆದು ಬಂದಲ್ಲಿ ಜಲಪಾತದ ಮಧ್ಯೆ ಭಾಗವನ್ನು ತಲುಪಬಹುದು. ಅಲ್ಲಿಂದ ನೂರು ಅಡಿಯ ಪ್ರಪಾತಕ್ಕೆ ಜಿಗಿಯುವ ಜಲಧಾರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ.

ಈ ಜಲಪಾತದ ಪರಿಸರದ ಬಂಡೆಗಳಲ್ಲಿ ಶಂಖ ಚಕ್ರಗಳು ಮೂಡಿರುವುದರಿಂದ ಈ ಜಲಪಾತಕ್ಕೆ ಶಂಖುಚಕ್ರ ಜಲಪಾತವೆಂಬ ಹೆಸರು ಪ್ರಾಪ್ತವಾಗಿದೆ.ಮುಂದೆ ಈ ಜಲಪಾತವು ಮುತ್ಯಾಲಮಡುವನ್ನು ಸೇರಿ ತಮಿಳುನಾಡನ್ನು ಹೊಕ್ಕು ಅರ್ಕಾವತಿಯನ್ನು ಕೂಡಿಕೊಳ್ಳುತ್ತದೆ.ಈ ಹಾದಿಯ ಕಾಡಿನಲ್ಲಿ ಈಗಲೂ ಆನೆಗಳನ್ನು ಕಾಣಬಹುದು.ಹಾಗಾಗಿ ಈ ಸ್ಥಳಕ್ಕೆ ಗುಂಪಿನಲ್ಲಿ ಹೋಗುವುದು ಒಳಿತು.