ಶ್ರೀರಾಮಚಂದ್ರ ಜನಿಸಿದ ನಕ್ಷತ್ರದಲ್ಲಿ ಹುಟ್ಟಿದ ಮೈಸೂರು ರಾಜವಂಶಸ್ಥರ ಮಗು, ಯುವರಾಜನ ಆಗಮನದಿಂದ ನಗರದೆಲ್ಲೆಡೆ ಹಬ್ಬದ ವಾತಾವರಣ…

0
1205

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗು ಸುಮಾರು 9.50ರ ಸಮಯದಲ್ಲಿ ಪುನರ್ವಸು ನಕ್ಷತ್ರ ಹಾಗೂ ಮಿಥುನ ರಾಶಿಯಲ್ಲಿ ಜನಿಸಿದೆ.

ಇದು ಶ್ರೀರಾಮಚಂದ್ರ ಜನಿಸಿದ ನಕ್ಷತ್ರವಾಗಿದೆ ಎನ್ನುವುದು ವಿಶೇಷ, ಇದನ್ನು ತಿಳಿದ ನಂತರ ಈ ಮಗುವಿನಲ್ಲಿ ಏನೋ ವಿಶೇಷವಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಪ್ರಭು ಶ್ರೀರಾಮಚಂದ್ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನ ವಸಂತ ಋತುವಿನಲ್ಲಿ, ಅಂದರೆ ವಸಂತ ನವರಾತ್ರಿ, ಒಂಬತ್ತನೆಯ ದಿನ ಪುನರ್ವಸು ನಕ್ಷತ್ರದಲ್ಲಿ ಜನಿಸಿದ್ದನ್ನು, ಇದನ್ನೇ ರಾಮನವಮಿಯಾಗಿ ನಾವು ಆಚರಿಸುತ್ತೇವೆ. ಇದು ಹಿಂದೂ ಕ್ಯಾಲೆಂಡರ್ನಲ್ಲಿ ನಾಲ್ಕು ನವರಾತ್ರಿಗಳಲ್ಲಿ ಒಂದೆನಿಸಿದೆ.

ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ, ಈಗ 64 ವರ್ಷಗಳ ಬಳಿಕ ಮೈಸೂರಿನ ಯದುವಂಶಕ್ಕೆ ಗಂಡು ಮಗು ಜನಿಸಿದೆ.

ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು ಎಂಬುದು ಗಮನಿಸಬೇಕಾದ ವಿಷಯ. ಯದುವಂಶಕ್ಕೆ ಹೊಸ ಯುವರಾಜನ ಆಗಮನದ ಕಾರಣ ಮನೆದೇವರಾದ ಶ್ರೀ ಚಾಮುಂಡೇಶ್ವರಿ ದೇವಿಗೆ, ಶೃಂಗೇರಿಯ ಶಾರದಾ ಪೀಠದಲ್ಲಿ, ಪರಕಾಲ ಸ್ವತಂತ್ರ ಮಠದಲ್ಲಿ ಹಾಗು ಅರಮನೆಯೊಳಗಿನ ದೇವಾಲಯಗಳಿಗೆ ವಿಶೇಷ ಪೂಜೆ ನೆರವೇರಿಸಿಲಾಗುತ್ತಿದೆ.

ಒಟ್ಟಿನಲ್ಲಿ ರಾಜ ಮನೆತನಕ್ಕೆ ಹೊಸ ಯುವರಾಜನ ಆಗಮನದಿಂದ ಕರುನಾಡಿನ ಜನರಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.