ಮೈಸೂರು ಮಹಾರಾಜ : ಶ್ರೀಸಾಮಾನ್ಯ ಜನಗಳ ಮಹಾರಾಜ

0
1506

ತುಂಬಾ ಕಾಡೋ ಪ್ರಶ್ನೆ ಅಂದ್ರೆ, ಸ್ವತಂತ್ರಕ್ಕೂ ಮುಂಚೆ ಬೇರೆ ರಾಜರುಗಳೆಲ್ಲಾ ತಮ್ಮ ತಮ್ಮ ಮನೆತನದ ಸುಖ ಸೌಖ್ಯ ನೋಡಿಕೊಳ್ಳುತ್ತಾ ತಮ್ಮ ರಾಜ್ಯವನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಂತ ಪರಿಸ್ಥಿತಿಯಿತ್ತು… ಉತ್ತರ ಭಾರತದ ಬಿಹಾರ್, ಉತ್ತರ ಪ್ರದೇಶ, ಸಪ್ತ ಸಹೋದರಿಯರನ್ನ ನೋಡಿದ್ರೆ ಅಲ್ಲಿನ ರಾಜರು ತಮ್ಮ ರಾಜ್ಯಕ್ಕಾಗಿ ಏನು ಮಾಡಿದ್ರು ಅಂತ ತಿಳಿಯತ್ತೆ… ಇಂತಹ ಸ್ವಾರ್ಥಿ ರಾಜರುಗಳ ನಡುವೆಯೂ ಸಹ ನಮ್ಮ ಮೈಸೂರು ಮಹಾರಾಜರು ಸಮಗ್ರ ಮೈಸೂರು ರಾಜದ ಅಭಿವೃದ್ಧಿ ಕೈಗೊಂಡಿದ್ದರು…

ಭದ್ರಾವತಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆ, ಜೋಗದ ವಿದ್ದ್ಯುದಾಗಾರ, ಶಿವಮೊಗ್ಗದ ಗಂಧದೆಣ್ಣೆ ಫ್ಯಾಕ್ಟರಿ, ಮೈಸೂರು ಲ್ಯಾಂಪ್ಸ್, ಶಿವನಸಮುದ್ರದ ವಿದ್ಯುದಾಗಾರ, ಮೈಸೂರು ರಾಜಧಾನಿಯಾಗಿದ್ದರು ಕೆಂಪೇಗೌಡರ ಊರಿನ ಅಭಿವೃದ್ಧಿಗೆ ಶ್ರಮಿಸಿದ್ದು, ಹಲವಾರು ಊರುಗಳಲ್ಲಿ ಹತ್ತಾರು ಸೇತುವೆಗಳು, ಹಲವಾರು ಅಣೆಕಟ್ಟುಗಳು ಇಂದಿಗೂ ಅವರ ಜನೋದ್ಧಾರಿ ಕೆಲಸಕ್ಕೆ ಸಾಕ್ಷಿಯಾಗಿ ನಿಂತಿದೆ. ಕೆ ಆರ್ ಎಸ್ ನಿರ್ಮಾಣ ಹಂತದಲ್ಲಿ ಹಣದ ಕೊರತು ಎದುರಾದಾಗ ತಮ್ಮ ಒಡವೆ ಮಾರಿ ಹಿಡಿದ ಕಾರ್ಯ ಪೂರ್ಣಗೊಳಿಸಿದ ಛಲದಂಕ ಮಲ್ಲರು ಮಹಾರಾಜರು. ಏಷ್ಯಾದಲ್ಲೇ ಮೊದಲ ಬಾರಿಗೆ ಬೆಂಗಳೂರಿಗೆ ವಿದ್ಯುತ್ ತಂದದ್ದು, ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ದು, ಇವೆಲ್ಲಕ್ಕಿಂತ ಮಿಗಿಲಾದದ್ದು, ಕಳಶಪ್ರಾಯವಾದದ್ದು, ವಿಶ್ವೇಶ್ವರಯ್ಯನವರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದು, ಹೀಗೆ ಲೆಕ್ಕವಿಲ್ಲದಷ್ಟು ಜನೋಪಕಾರ ಮಾಡಿದ್ದಾರೆ…

ಆದರೆ ಒಂದು ವಿಷಯದಲ್ಲಿ ಮಾತ್ರ ಎಡವಿದರೇನೋ ಅಂತ ಅನ್ನಿಸುತ್ತೆ. ತಾವು ಕಷ್ಟ ಪಟ್ಟು ಶ್ರಮಿಸಿ ಕಟ್ಟಿದ ನಾಡನ್ನು ಭಾರತ ಒಕ್ಕೂಟಕ್ಕೆ ಸೇರಿಸುವಾಗ ಇಲ್ಲಿನ ನೆಲ, ಜಲ, ಭಾಷೆ ಉಳಿವಿಗೆ ವಿಶೇಷ ಪ್ರಯತ್ನವೊಂದನ್ನು ಮಾಡಲಿಲ್ಲವೇನೋ ಅಥವಾ ಅವರ ಪ್ರಯತ್ನ ಇನ್ನು ಹೆಚ್ಚು ಪ್ರಭಾವಶಾಲಿಯಾಗಿರಬೇಕಿತ್ತೇನೋ ಅಂತ ಅನ್ನಿಸುತ್ತೆ. ಅಥವಾ ಹಲವಾರು ರಾಜ್ಯಗಳು ಸೇರಿ ಒಂದಾಗುವಷ್ಟು ಒಗ್ಗಟ್ಟು ನಮ್ಮಲ್ಲಿರುವಾಗ ಆ ಒಗ್ಗಟ್ಟು ಎಂದೂ ಹೀಗೆ ಇರುತ್ತದೆ, ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ ಎಂಬ ಆಶಾಭಾವ ಹೊಂದಿದ್ದರೇನೋ ಮಹಾರಾಜರು.

ಆದರೆ ದೇಶ ಕಟ್ಟುವುದು ಮುಖ್ಯವೆಂದು ನಂಬಿ ತಮ್ಮ ರಾಜ್ಯವನ್ನು ಯಾವುದೇ ತಕರಾರಿಲ್ಲದೆ ಭಾರತ ಒಕ್ಕೂಟಕ್ಕೆ ಸೇರಿಸಿದ ಮಹಾರಾಜರಿಗೆ ದ್ರೋಹವೆಸಗಿ ಅಂದಿನಿಂದಲೂ ಅನವಶ್ಯಕ ಹಿಂದಿ ಹೇರಿಕೆ, ಪ್ರಾದೇಶಿಕ ಸಂಸ್ಕೃತಿ ನಾಶದಂತಹ ಕೆಲಸವನ್ನೇ ಪ್ರೋತ್ಸಾಹಿಸಿಕೊಂಡು ಬರುತ್ತಿವೆ ಎಲ್ಲ ಕೇಂದ್ರ ಸರ್ಕಾರಗಳು. ಹಿಂದಿ ಹೇರಿಕೆಯ ದಬ್ಬಾಳಿಕೆ ಮಾಡುವ ಉತ್ತರ ಭಾರತೀಯರ ಬೆಂಬಲಕ್ಕೆ ಹಿಂದಿ ದಿವಸ್, ಹಿಂದಿ ಸಪ್ತಾಹ್ ಕಾರ್ಯಕ್ರಮಗಳು ಬೇರೆ. ಪರಿಸ್ಥಿತಿ ಹೇಗಿದೆ ಅಂದರೆ ದೇಶದಲ್ಲೇ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾಗಿರುವ ನಾವು ನಮ್ಮ ತೆರಿಗೆ ಹಣದಲ್ಲಿ ನಾವೇ ಹಿಂದಿ ಹೇರಿಕೆ ಮಾಡಿಸಿಕೊಳ್ಳುತ್ತಿದ್ದೇವೇನೋ ಎಂಬಂತಾಗಿದೆ.

ಇದೆಲ್ಲವನ್ನು ಮೀರಿ ಹಿಂದಿ ಮಾತನಾಡಿದರೆ ರಾಷ್ಟ್ರಪ್ರೇಮಿ, ಇಲ್ಲದಿದ್ದರೆ ರಾಷ್ಟ್ರವಿರೋಧಿ ಎಂಬ ಕಲ್ಪನೆಯೊಂದನ್ನು ಹರಿಯಬಿಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮೇಲೆ ಮಹಾನುಭಾವನೊಬ್ಬ ಹೇಳಿದಂತೆ ಇಂದಿನ ಪೀಳಿಗೆ ಆಳಿದ ನಂತರ ಹಿಂದಿಯೊಂದೇ ಭಾಷೆ ಉಳಿದು ಬೇರೆಲ್ಲ ಭಾಷೆ ಸಂಸ್ಕೃತಿ ನಾಶವಾಗಬೇಕೆನ್ನುವ ದುಷ್ಟರ ಸಂಖ್ಯೆ ತೀರಾ ಇತ್ತೀಚಿಗೆ ದೊಡ್ಡದೇ ಆಗುತ್ತಿದೆ. ಬೇರೆ ಭಾಷೆ ಅಳಿದು ತಮ್ಮ ಭಾಷೆ ಸಂಸ್ಕೃತಿ ಮಾತ್ರ ಉಳಿಯಬೇಕೆನ್ನುವ ಇಂತಹ ನೀಚರಿಗೂ, ಯಹೂದಿಯನ್ನರನ್ನು ಸಂಪೂರ್ಣ ನಿರ್ನಾಮ ಮಾಡಿ ಕೇವಲ ಜರ್ಮನ್ ಜನಾಂಗೀಯರು ಮಾತ್ರ ಜೆರ್ಮನಿಯಲ್ಲಿರಬೇಕೆಂದು ಯಹೂದಿಯರನ್ನು ಕೊಲ್ಲಿಸಿದ ಹಿಟ್ಲರ್ ಗೂ ಯಾವುದೇ ವ್ಯತ್ಯಾಸವಿಲ್ಲ.

ಕೇವಲ ಭಾಷೆಯ ಆಧಾರದ ಮೇಲೆ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಯಿತೆಂಬ ಕನಿಷ್ಠ ಪ್ರಜ್ಞೆ ಹಿಂದಿ ಹೇರಿಕೆ ಮಾಡುವವರಿಗಿದ್ದರೆ ಅಂತಹ ಪರಿಸ್ಥಿತಿ ನಮ್ಮ ದೇಶಕ್ಕೂ ಬರದಂತೆ ನೋಡಿಕೊಳ್ಳುತ್ತಾರೆ. ಒಂದು ಹಂತ ಮೀರಿ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾದರೆ ಕಾಲವೇ ಸರಿಯಾದ ಉತ್ತರ ಕೊಡುತ್ತದೆ.