ವಿಶ್ವವಿಖ್ಯಾತ ನಾಗರಹೊಳೆ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ

0
1930

ನಾಗರಹೊಳೆ ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನ. ಇದು ಕೊಡಗಿನ ವಿರಾಜಪೇಟೆಯಿಂದ 64ಕಿ.ಮೀ.ದೂರದಲ್ಲಿದೆ. ಸುಮಾರು 643ಕಿ.ಮೀ. ವಿಸ್ತೀರ್ಣವುಳ್ಳ ಈ ಅರಣ್ಯಪ್ರದೇಶ ಹುಣಸೂರು ಅರಣ್ಯ ವಿಭಾಗಕ್ಕೆ ಸೇರಿದೆ. ನಾಗರಹೊಳೆ ಎಂಬ ಸಣ್ಣ ನದಿಯಿಂದಾಗಿ ಈ ಪ್ರದೇಶಕ್ಕೆ ನಾಗರಹೊಳೆ ಎಂಬ ಹೆಸರು ಬಂದಿದೆ.

%e0%b2%9c%e0%b2%bf%e0%b2%82%e0%b2%95%e0%b3%86

ಬೆಂಗಳೂರಿನಿಂದ ೨೩೬ ಕಿಲೋಮೀಟರ್ ಹಾಗೂ ಮೈಸೂರಿನಿಂದ ೯೬ ಕಿಲೋಮೀಟರ್ ದೂರವಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಅತ್ಯಂತ ಸುಂದರ ಮತ್ತು ದಟ್ಟವಾದ ಅರಣ್ಯಗಳಲ್ಲಿ ಒಂದಾಗಿದೆ. ದಟ್ಟ ಹಸಿರು ವರ್ಣದಿಂದ ಕಂಗೊಳಿಸುವ ಬೆಟ್ಟ, ಗುಡ್ಡ, ಕಣಿವೆಗಳಿಂದ ಮತ್ತು ತೇಗ, ಗಂಧ, ಬೀಟೆ, ಸಿಲ್ವರ್ ಓಕ್ ಮುಂತಾದ ಅಮೂಲ್ಯ ವೃಕ್ಷಗಳಿಂದ ಈ ಅರಣ್ಯ ನಳನಳಿಸುತ್ತಿದೆ. ವಿನಾಶದ ಅಂಚಿನಲ್ಲಿರುವ ಅನೇಕ ಪ್ರಾಣಿ, ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಈ ಕಾಡುಗಳು ಪೋಷಿಸುತ್ತಿವೆ. ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿ ಮತ್ತು ರಾಷ್ಟ್ರಪಕ್ಷಿ ನವಿಲುಗಳು ಇಲ್ಲಿ ಸುರಕ್ಷಿತವಾಗಿವೆ.

nagarahole2lion

೫೧೧ ಚದರ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿರುವ ಈ ಕಾಡು ಜಿಂಕೆ, ಕಾಡು ಕುರಿ(Barking deer) ಕರಡಿ, ಚಿರತೆ, ಆನೆ, ಕಾಡುಪಾಪ, ನೀರುನಾಯಿ, ಮೊಸಳೆ, ಹೆಬ್ಬಾವು, ಮರಕುಟುಕ, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್, ಗಿಡುಗ, ಹದ್ದು, ಡೇಗೆ, ಪ್ಯಾಂಗೋಲಿನ್, ಹಾರುವ ಅಳಿಲುಗಳಿಗೆ ತಾಣವಾಗಿದೆ. ಜೇನು ಕುರುಬರು,ಬೆಟ್ಟ ಕುರುಬರು ಹಾಗೂ ಹಕ್ಕಿಪಿಕ್ಕಿಗಳ ನೆಲೆವೀಡು ಕೂಡಾ ಆಗಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಶಾಲವಾಗಿ ಹಬ್ಬಿರುವ ಈ ಕಾಡುಗಳು ಕರ್ನಾಟಕ,ಭಾರತವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಶೇಷ ಜೀವಿ ವೈವಿಧ್ಯಗಳನ್ನು ಪೋಷಿಸುತ್ತಿವೆ. ನಾಗರಹೊಳೆ, ವೈನಾಡು, ಬಂಡೀಪುರ ಮತ್ತು ಮುದುಮಲೈ ಕಾಡುಗಳನ್ನು ಒಂದು ಸಂರಕ್ಷಿತ ವಲಯವನ್ನಾಗಿ ಗುರುತಿಸಲಾಗಿದೆ.

nagarahole

ಪ್ರಾಣಿಗಳ ವೀಕ್ಷಣೆಗೆಂದೇ ನಾಗರಹೊಳೆಗೆ ದೇಶ-ವಿದೇಶಗಳಿಂದ ನೂರಾರು ಜನರು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಪ್ರವಾಸಿಗರನ್ನು ಕಾಡಿನೊಳಗೆ ಕರೆದೊಯ್ದು ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿದೆ. ವಾಹನಗಳಲ್ಲಿ ಅಥವಾ ಆನೆಗಳ ಮೇಲೆ ಕುಳಿತು ಕಾಡಿನಲ್ಲಿ ಸಂಚರಿಸುತ್ತಾ ಅಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಹಿಂಡು-ಹಿಂಡಾಗಿ ತಿರುಗಾಡುವ ಕಾಡು ಪ್ರಾಣಿಗಳನ್ನು ಅವುಗಳ ಮೂಲ ನೆಲೆಯಲ್ಲೇ ನೋಡಿ ಆನಂದಿಸಬಹುದು. ಪ್ರಾಣಿಗಳನ್ನು ಹತ್ತಿರದಿಂದ ನೋಡಲು ಕಾಡಿನಲ್ಲಿ ವೀಕ್ಷಣಾಗೋಪುರಗಳನ್ನು ನಿರ್ಮಿಸಲಾಗಿದೆ.

%e0%b2%a8%e0%b2%be%e0%b2%97%e0%b2%b0%e0%b2%b9%e0%b3%8a%e0%b2%b3%e0%b3%86-%e0%b2%a6%e0%b3%87%e0%b2%b6%e0%b2%a6-%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b0%e0%b2%be%e0%b2%b7

ಕಬಿನಿ, ಲಕ್ಷ್ಮಣ ತೀರ್ಥ, ಮತ್ತು ನಾಗರಹೊಳೆಗಳು ಇಲ್ಲಿಯ ಪ್ರಮುಖ ನದಿಗಳು. ‘ನಾಗರ’ ಎಂದರೆ ಹಾವಿನ ರೀತಿಯಲ್ಲಿ ಹರಿಯುವ ನದಿ, ತೊರೆಗಳು ಇಲ್ಲಿ ಹರಿಯುವುದರಿಂದ ನಮ್ಮ ಜನಪದರು ಈ ಕಾಡುಗಳನ್ನು ‘ನಾಗರಹೊಳೆ’ ಎಂದರು. ಈ ನದಿಗಳು ಹಲವಾರು ಸುಂದರ ಜಲಪಾತಗಳನ್ನೂ ಸೃಷ್ಟಿಸಿವೆ.

nagarahole-falls

ಬೆಳಿಗ್ಗೆ 6ರಿಂದ 10ಗಂಟೆ ಹಾಗೂ ಸಂಜೆ 5ರಿಂದ 6.30ಗಂಟೆ ಅವಧಿಯಲ್ಲಿ ಮಾತ್ರ ಪ್ರವಾಸಿಗರನ್ನು ಪ್ರಾಣಿ ವೀಕ್ಷಣೆಗೆ ವಿಶೇಷ ವಾಹನಗಳಲ್ಲಿ ಅರಣ್ಯದೊಳಗೆ ಕರೆದುಕೊಂಡು ಹೋಗಲಾಗುತ್ತದೆ. ಏಕೆಂದರೆ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಸಿಗುವುದು ಈ ವೇಳೆಯಲ್ಲಿ ಮಾತ್ರ. ನಾಗರಹೊಳೆ ಉದ್ಯಾನವನದೊಳಗೆ ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಮಾತ್ರ ಪ್ರವಾಸಿ ವಾಹನಗಳಿಗೆ ಪ್ರವೇಶ.

ಮಾರ್ಗ: ನಾಗರಹೊಳೆ ಮಡಿಕೇರಿಯಿಂದ 100ಕಿ.ಮೀ. ವಿರಾಜಪೇಟೆಯಿಂದ 64ಕಿ.ಮೀ. ಮತ್ತು ಮೈಸೂರಿನಿಂದ 94ಕಿ.ಮೀ.ದೂರದಲ್ಲಿದೆ. ಮಳೆಗಾಲ ಬಿಟ್ಟು ಬೇರೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇಲ್ಲಿನ ಪ್ರವಾಸಿ ಮಂದಿರಗಳಲ್ಲಿ ಉಳಿದುಕೊಳ್ಳಲು ಬಯಸುವವರು ಅರಣ್ಯ ಇಲಾಖೆಯ ಕೋಣೆಗಳನ್ನು ಮುಂಚಿತವಾಗಿ ಕಾಯ್ದಿರಿಸುವುದು ಉತ್ತಮ.