ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕರ್ತವ್ಯ ನಿಷ್ಠೆ

0
763

ಪ್ರಜಾಕಲ್ಯಾಣವೇ ರಾಜ್ಯದ ಕಲ್ಯಾಣ, ಶಕ್ಷಣವು ಎಲ್ಲರಿಗೂ ಸಮನಾಗಿ ದೊರಕಬೇಕಾದ ಹಕ್ಕು. ಆಡಳಿತದಲ್ಲಿ ಭಾಗವಹಿಸಬೇಕು. ಸಮಾಜದಲ್ಲಿ ಮೇಲುಕೀಳು ಎಂಬ ತಾರತಮ್ಯ ಇರಬಾರದು. ಅವಕಾಶವಂಚಿತ ಹಿಂದುಳಿದ ವರ್ಗದವರೂ ಕೂಡ ಇತರರಂತೆ ಸಮಾನವಾಗಿ ಮುನ್ನಡೆಯಬೇಕು. ಜಾತಿ, ಮತ, ಧರ್ಮ ಯಾವುದೇ ಇರಲಿ, ಬೆಳಗಾಗುವ ಜ್ಯೋತಿ ಮಾತ್ರ ಒಂದೇ…

ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿ ಇರಿಸಿಕೊಂಡಿದ್ದ ಆದರ್ಶ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್.

ನಾಲ್ವಡಿಯವರು ಪ್ರತಿದಿನ ಬೆಳಗ್ಗೆ 10 ಘಂಟೆಯಿಂದ ಸಂಜೆ 5 ಘಂಟೆಗೆ, ಆವಶ್ಯಕತೆಯದಾಗಿ ರಾತ್ರಿವರೆಗೆ ಅರಮನೆಯ ಕಛೇರಿಯಲ್ಲಿ ಕುಳಿತು ಕಾಗದ ಪತ್ರಗಳನ್ನು ಪರಿಶೀಲಿಸುತ್ತಿದ್ದರು. ಇತರರೂ- ದಿವಾನರಿಂದ ಕಾರಕೂನನವರೆಗೆ – ತಮ್ಮಷ್ಟೇ ಬದ್ಧತೆಯಿಂದ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತಿದ್ದರು. ಹಾಗೆ ಕೆಲಸ ಮಾಡಿದವರನ್ನು ಪ್ರಶಂಸಿಸುತ್ತಿದ್ದರು. ಎರಡು ಉದಾಹರಣೆಗಳು.

ಒಮ್ಮೆ ವೈಸರಾಯ್ ಅವರು ಮೈಸೂರಿಗೆ ಆಗಮಿಸಿದ್ದರು. ಅವರನ್ನು ಸಂದರ್ಶಿಸಲು ಅಪೇಕ್ಷಿಸುವವರು ಅರಮನೆ ಆಫೀಸಿನಿಂದ ಒಂದು ಅನುಮತಿ ಬಿಲ್ಲೆಯನ್ನು ಪಡೆದು ಅದನ್ನು ತೋರಿಸಬೇಕಿತ್ತು. ಮಹಾರಾಜರು ವೈಸರಾಯರನ್ನು ಕಾಣಲು ಅವರ ಶಿಬಿರಕ್ಕೆ ಹೋದಾಗ ಶಿಬಿರ ಕಾಯುತ್ತಿದ್ದ ಕಾವಲುಗಾರ ಮಹಾರಾಜರನ್ನು ಬಿಲ್ಲೆ ಕೇಳಿದರು. ಆಗ ಮಹಾರಾಜರು “ನಾನು ಬಿಲ್ಲೆ ತಂದಿಲ್ಲ. ಆದರೆ ನಾವು ಯಾರೆಂದು ನಿನಗೆ ಗೊತ್ತಿಲ್ಲವೇ?” ಎಂದು ಕೇಳಿದರು, ಅದಕ್ಕೆ ಬಿಲ್ಲೆ ಇಲ್ಲದೆಯಾರನ್ನೂ ಒಳಗೆ ಬಿಡಬಾರದೆಂದು ತಾವು ಅಪ್ಪಣೆ ಮಾಡಿದ್ದೀರಿ. ಆ ಅಪ್ಪಣೆ ಪ್ರಕಾರ ತಾವು ಒಳಗೆ ಹೊಗುವಂತಿಲ್ಲ, ಕ್ಷಮಿಸಿ” ಎಂದನು ಅದಕ್ಕೆ ಮಹಾರಾಜರು “ಹಾಗಾದರೆ ಬಿಲ್ಲೆ ಇಲ್ಲದ ನಮ್ಮನ್ನು ಒಳಗೆ ಬಿಡಬಹುದು ಎಂದು ನಾವು ಈಗ ಅಪ್ಪಣೆ ಮಾಡುತ್ತೇವೆ” ಎಂದರು. ಅದಕ್ಕೆ ಕಾವಲುಗಾರನು “ಕ್ಷಮಿಸಬೇಕು” ತಮ್ಮ ಮೊದಲನೆಯ ಅಪ್ಪಣೆಯನ್ನು ನನ್ನ ಈಗ ಅಪ್ಪಣೆಯನ್ನು ನನ್ನ ಮೇಲಿನ ಅಧಿಕಾರಿ ನನಗೆ ಕೊಟ್ಟಿರುವುದು. ಈ ಎರಡನೆಯ ಅಪ್ಪಣೆಯೂ ನನಗೆ ನನ್ನ ಮೇಲಿನ ಅಧಿಕಾರಿಯಿಂದ  ಬಂದರೆ ಮಾತ್ರ ಈ ರೀತಿ ವರ್ತಿಸುತ್ತೇವೆ. ನಾವೆಲ್ಲಾ ತಮ್ಮ ಸೇವಕರು” ಎಂದು ವಿನಯದಿಂದ ಹೇಳಿದರು. ಮಹಾರಾಜರು ವಾಪಸ್ಸು ಹೋದರು. ಆ ಕಾವಲುಗಾರನ ಕಾರ್ಯವೈಕರಿಯನ್ನು ಮೆಚ್ಚಿ ಆತನಿಗೆ 50 ರೂಪಾಯಿಗಳ ಭಕ್ಷೀಸನ್ನೂ ಆತನ ಸಂಬಳ ಹೆಚ್ಚಿಸಿರುವ ಆಜ್ಞೆಯನ್ನು ಅವನ ಮೇಲಾಧಿಕಾರಿಯಾ ಮೂಲಕ ಕಳುಹಿಸಿದರು.

ಒಮ್ಮೆ ಮಹಾರಾಜರು ತಮ್ಮ ಕಾರಿನಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಬಂದಾಗ ಗೇಟ್ ಮುಚ್ಚಿತ್ತು, ರೈಲು ಬರುತ್ತದೆಂದು ಕಾವಲುಗಾರ ಗೇಟು ಮುಚ್ಚಿದ, “ರೈಲು ಬರಲು ಇನ್ನು ತಡವಿದೆ, ಗೇಟು ತೆಗೆ, ಕಾರಿನಲ್ಲಿ ಮಹಾರಾಜರಿದ್ದಾರೆ” ಎಂದು ಕಾರಿನ ಡ್ರೈವರ್ ಹೇಳಿದ, ಕಾವಲುಗಾರ ಗೇಟು ತೆರೆಯಲಿಲ್ಲ. ರೈಲು ಹೋದ ಬಳಿಕವೇ ಗೇಟು ತೆರೆದ, ಆಮೇಲೆ ಆತ ನಡುಗುತ್ತಾ ಹೆದರಿ ಹೆದರಿ ಮಹಾರಾಜರ ಬಳಿ ಬಂದ, ಮಹಾರಾಜರು ಆತನ ಕರ್ತವ್ಯ ನಿಷ್ಠೆಯನ್ನು ಮೆಚ್ಚಿ 30 ರೂಪಾಯಿಗಳನ್ನು ಬಹುಮಾನವಾಗಿ ಕೊಟ್ಟರು.