ಮಹಾಮೇಧಾವಿ ಬೌತವಿಜ್ಞಾನಿಗಳ ಪೈಕಿ ನೀಲ್ಸ್ ಬೋಹ್ರ್ ಒಬ್ಬರು

0
579

ನೀಲ್ಸ್ ಬೋಹ್ರ್
ಮಹಾಮೇಧಾವಿ ಬೌತವಿಜ್ಞಾನಿಗಳ ಪೈಕಿ ನೀಲ್ಸ್ ಬೋಹ್ರ್ ಒಬ್ಬರು. ಪರಮಾಣು ಸಂರಚನೆಯನ್ನು ಜಗತ್ತಿಗೆ ತಿಳಿಸಿಕೊಟ್ಟು ನೊಬೆಲ್ ಗಳಿಸಿದವನು ಅವರು. ಕ್ವಾಂಟಮ್ ಮೆಕಾನಿಕ್ಸ್ ಸಂಶೋಧನೆಗಳನ್ನು ಬೆಳೆಸಿದವರು.

ಪರಮಾಣು ಬಾಂಬ್‍ಗಳ ಜನನಕ್ಕೆ ಕಾರಣ-ರಾದರೂ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಪರಮಾಣು ಶಕ್ತಿಯನ್ನು ಬಳಸುವಂತೆ ಪ್ರತಿಪಾದಿಸಿದವರು.1885ರಲ್ಲಿ ಡೆನ್ಮಾರ್ಕ್‍ನಲ್ಲಿ ಜನಿಸಿದ ಬೋಹ್ರ್ ಶಾಲಾ ಕಲಿಕೆಯಲ್ಲಿ ಬುದ್ಧಿವಂತನಾಗಿದ್ದರು. ಕ್ರೀಡೆಯಲ್ಲೂ ಬಹಳ ಮುಂದಿದ್ದರು. ಅವರ ತಂದೆ ಸಹ ವಿಜ್ಞಾನಿಯೇ. ಹೀಗಾಗಿ ಮನೆಯಲ್ಲಿ ವಿಜ್ಞಾನದ ವಾತಾವರಣವಿತ್ತು.

ಪ್ರಯೋಗಾಲಯಗಳ ಒಡನಾಟವೂ ಚಿಕ್ಕವಯಸ್ಸಿನಿಂದ ಬೆಳೆಯಿತು.ಭೌತಶಾಸ್ತ್ರ ಹಾಗೂ ಗಣಿತಗಳಲ್ಲಿ ನೀಲ್ಸ್‍ಗೆ ಅಪಾರ ಆಸಕ್ತಿ. ಶಾಲೆಯಲ್ಲಿ ಪ್ರಯೋಗಾಲಯ ಇರಲಿಲ್ಲ. ತನ್ನ ತಂದೆಯ ಪ್ರಯೋಗಶಾಲೆಯಲ್ಲೇ ಪ್ರಯೋಗಗಳನ್ನು ಮಾಡಿ ಬಹುಮಾನಗಳನ್ನು ಗೆಲ್ಲುತ್ತಿದ್ದರು. ಮುಂದೆ ಅವರ ಆಸಕ್ತಿ ಆಗತಾನೆ ಉಗಮವಾಗುತ್ತಿದ್ದ ಕ್ವಾಂಟಮ್ ಮೆಕ್ಯಾನಿಕ್ಸ್‍ನತ್ತ ತಿರುಗಿತು. ಅದರ ಹಿನ್ನೆಲೆಯಲ್ಲಿ ಪರಮಾಣುಗಳನ್ನು ಕುರಿತು ಸಂಶೋಧನೆಗಳನ್ನು ಮಾಡಲು ಶುರು ಮಾಡಿದ್ದರು.ಅದೇ ಸಮಯದಲ್ಲಿ ಅವರ ಗುರು ರದರ್‍ಫೋರ್ಡ್ ಪರಮಾಣುಗಳ ಸಂರಚನೆ ಹೇಗಿದೆ ಎಂಬ ಕುರಿತು ಒಂದು ಮಾದರಿಯನ್ನು ಸಾದರ ಪಡಿಸಿದರು. ಆದರೆ ಅದು ಪ್ರಯೋಗಗಳ ಮೂಲಕ ತಿಳಿದುಬಂದಿದ್ದ ಪರಮಾಣು ಗುಣಲಕ್ಷಣಗಳಿಗೆ ತಾಳೆಯಾಗದೇ ಅಸ್ವೀಕೃತವಾಯಿತು. ಅದೇ ವಿಷಯದಲ್ಲಿ ಸಂಶೋಧನೆ ಮಾಡಿದ ನೀಲ್ಸ್ ತಾನೂ ಸಹ ಒಂದು ಪರಮಾಣು ಮಾದರಿಯನ್ನು ವೈಜ್ಞಾನಿಕ ಸಮುದಾಯದ ಮುಂದೆ ಸಾದರಪಡಿಸಿದರು.

ಈ ಮಾದರಿ ಎಲ್ಲ ಪ್ರಯೋಗಗಳಿಂದಲೂ ಸರಿಯಾಗಿದೆಯೆಂದು ರುಜುವಾತಾಯಿತು. 1922ರಲ್ಲಿ ಬೋಹ್ರ್‍ಗೆ ನೊಬೆಲ್ ಪುರಸ್ಕಾರ ಲಭಿಸಿತು.ಮುಂದೆ ಎರಡನೇ ವಿಶ್ವಸಮರದ ಸಂದರ್ಭದಲ್ಲಿ, 1943ರಲ್ಲಿ, ರಾಜಕೀಯ ಪರಿಸ್ಥಿತಿಗಳ ಕಾರಣದಿಂದಾಗಿ ಡೆನ್ಮಾರ್ಕ್ ತೊರೆದು, ಇಂಗ್ಲೆಂಡ್ ಹಾಗೂ ಅಮೆರಿಕಗಳಿಗೆ ನೀಲ್ಸ್ ಬೋಹ್ರ್ ತೆರಳಿದರು. ಅಮೆರಿಕದ ಪರಮಾಣು ಬಾಂಬ್ ತಯಾರಿಸಲು ಅವನ ಜ್ಞಾನ ನೆರವಾಯಿತು. ಆದರೆ ಶಾಂತಿಯುತ ಉದ್ದೇಶಗಳಿಗೆ ಮಾತ್ರ ಪರಮಾಣು ಶಕ್ತಿಯ ಬಳಕೆಯಾಗಬೇಕು ಎಂದೇ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.1957ರಲ್ಲಿ ಅವರಿಗೆ `ಆಟಮ್ಸ್ ಫಾರ್ ಪೀಸ್’ (ಶಾಂತಿಗಾಗಿ ಪರಮಾಣು) ಪ್ರಶಸ್ತಿ ಲಭಿಸಿತು. 1962ರಲ್ಲಿ ಅವರು ನಿಧನರಾದರು.