ಪೆಟ್ರೋಲ್ ಬಂಕ್ಗಳ ಒತ್ತಡಕ್ಕೆ ಮಣಿದ ಬ್ಯಾಂಕುಗಳು, ಜನವರಿ 13ರ ವರೆಗೆ ಕಾರ್ಡ್ ಸ್ವೀಕಾರಕ್ಕೆ ಶುಲ್ಕ ಇಲ್ಲ ಎಂದ ಕೇಂದ್ರ ಸರ್ಕಾರ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಕಾರ್ಡ್ಗಳನ್ನು ಸ್ವೀಕರಿಸದಿರಲು ಕೈಗೊಂಡಿದ್ದ ತಮ್ಮ ನಿರ್ಧಾರವನ್ನು ಡೀಲರ್ಗಳು ಜನವರಿ 13ರವರೆಗೆ ತಡೆಹಿಡಿದಿದ್ದಾರೆ. ಬ್ಯಾಂಕ್ ಅಧಿಕಾರಿಗಳು, ಪೆಟ್ರೋಲ್ ಬಂಕ್ ಡೀಲರ್ಗಳು ಹಾಗೂ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳ ಮಧ್ಯೆ ಇಂದು ಸಂಜೆ ನಡೆದ ಬಿರುಸಿನ ಮಾತುಕತೆಯ ಬಳಿಕ ವಹಿವಾಟು ಶುಲ್ಕ ಹೇರಿಕೆಯ ತಮ್ಮ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಬ್ಯಾಂಕ್ಗಳು ನಿರ್ಧರಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಜನವರಿ 13ರವರೆಗೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿ ಮಾಡಿದರೆ ಹೇರಲಾಗುತ್ತಿದ್ದ ಶೇ.1ರಷ್ಟು ವಹಿವಾಟು ಶುಲ್ಕವನ್ನು ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಕೂಡ ತಾತ್ಕಾಲಿಕವಾಗಿ ಅಂದರೆ ಜನವರಿ 13ರವರೆಗೂ ಕಾರ್ಡ್ ಗಳನ್ನು ಸ್ವೀಕರಿಸುವುದಾಗಿ ಹೇಳಿಕೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಮುಂದಿನ ನಿರ್ಧಾರವನ್ನು ಪರಿಶೀಲಿಸಿ ಬಳಿಕ ಮುಂದಿನ ನಿರ್ಧಾರಕ್ಕೆ ಬರುತ್ತೇವೆ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. ಹೀಗಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಬಳಕೆ ಮೇಲೆ ನಿರ್ಬಂಧ ಆತಂಕದಿಂದ ಗ್ರಾಹಕರು ತಾತ್ಕಾಲಿಕವಾಗಿ ಪಾರಾಗಿದ್ದಾರೆ ಎಂದು ಹೇಳಬಹುದು.
ಈ ಹಿಂದೆ ಗ್ರಾಹಕರಿಂದ ಕ್ರೆಡಿಟ್ ಕಾರ್ಡ್ ಮೂಲಕ ಬಂಕ್ ಗಳು ಸ್ವೀಕರಿಸುವ ಹಣಕ್ಕೆ ಶೇ. 1ರಷ್ಟು ಹಾಗೂ ಡೆಬಿಟ್ ಕಾರ್ಡ್ ಮೂಲಕ ಸ್ವೀಕರಿಸುವ ಹಣಕ್ಕೆ ಶೇ.0.25ರಿಂದ ಶೇ.1ರ ವರೆಗೆ ವಹಿವಾಟು ಶುಲ್ಕ ವಿಧಿಸಲಾಗುತ್ತಿತ್ತು. ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರ ಮೂರು ಬ್ಯಾಂಕುಗಳಾದ ಐಸಿಐಸಿಐ, ಎಕ್ಸಿಸ್, ಎಚ್ಡಿಎಫ್ ಸಿ ಬ್ಯಾಂಕ್ಗಳು ಶುಲ್ಕಗಳನ್ನು ಹೇರಿದ್ದವು. ಇದರಿಂದ ಸಿಟ್ಟಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ವಿತರಕರು, ಕಾರ್ಡ್ ಪಾವತಿಯನ್ನು ಸೋಮವಾರದಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.