ರಾಜ್ಯದಲ್ಲಿ ಈ ಬಾರಿ ನೋ ಲೋಡ್‌ ಶೆಡ್ಡಿಂಗ್‌: ಡಿಕೆ‌ಶಿ; ನಿಮ್ಮ ಊರಲ್ಲಿ ಲೋಡ್ ಶೆಡ್ಡಿಂಗ್ ಆಗುತ್ತಿದೆಯ?

0
389

ಬೆಂಗಳೂರು: ಕಲ್ಲಿದ್ದಲು ಕೊರತೆಯ ನಡುವೆಯೂ ಬೇಸಿಗೆಯಲ್ಲಿ ವಿದ್ಯುತ್ ಅಭಾವ ಎದುರಾಗದಂತೆ ನೋಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ‌ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಸದಾಶಿವನಗರದ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಕ್ಕೆ ವಿದ್ಯುತ್ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ವಿದೇಶದಿಂದ ತಂದಾದರೂ ಸರಿಯೇ ವಿದ್ಯುತ್ ಸರಬರಾಜು ಮಾಡುತ್ತೇವೆಯೇ ಹೊರತು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಕಲ್ಲಿದ್ದಲು ಪೂರೈಕೆ ವಿಷಯ ಚರ್ಚಿಸಿಲ್ಲ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆಗೆ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ನಾನು ರಾಜಕೀಯ ಬೆರೆಸಿಲ್ಲ. ಕಲ್ಲಿದ್ದಲು ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ. ಐದು ಬಾರಿ ಭೇಟಿ ಮಾಡಿದ್ದರೂ ಪಿಯೂಶ್ ಗೋಯಲ್ ತಮ್ಮನ್ನು ಭೇಟಿಯೇ ಮಾಡಿಲ್ಲ ಎಂದಿದ್ದಾರೆ. ನಾನು ಈ ವಿಚಾರದಲ್ಲಿ ರಾಜರಾಕಣ ಮಾಡುವುದಿಲ್ಲ. ಸ್ವಾಭಿಮಾನ ಬಿಟ್ಟು ರಾಜ್ಯದ ಜನರಿಗಾಗಿ ಮತ್ತೊಮ್ಮೆ ಭೇಟಿ ಮಾಡುತ್ತೇನೆ ಎಂದರು.

ಇನ್ನು ಮಹಾರಾಷ್ಟ್ರದಿಂದ ನಮಗೆ ಕೋಲ್ ಬ್ಲಾಕ್ ಮಂಜೂರಾಗಿತ್ತು. ಕಲ್ಲಿದ್ದಲು ಸಾಗಾಣಿಕೆಗೆ ಟೆಂಡರ್ ಕರೆಯಲು ಉದ್ದೇಶಿಸಿದ್ದೇವು. ಆದರೆ ಕೆಲವರು ನ್ಯಾಯಾಲಯಕ್ಕೆ ಹೋದ ಕಾರಣ ಹಿನ್ನಡೆಯಾಗಿದೆ. ಹೀಗಾಗಿ ಕೋಲ್ ಬ್ಲಾಕ್ ಬಳಸಲು ಆಗುತ್ತಿಲ್ಲ. ಈಗ ಮಹಾರಾಷ್ಟ್ರದ ಒತ್ತಡ ಹೆಚ್ಚಿದೆ. ಕೋಲ್ ಬ್ಲಾಕ್ ರದ್ದು ಮಾಡಲು ನಮಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ನಾವು ಉತ್ತರ ನೀಡಿದ್ದೇವೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇದೇ ವೇಳೆ ವಿದೇಶಿ ವಿದ್ಯುತ್ ಅನ್ನು ಶೇ. 30 ಪ್ರಮಾಣದಲ್ಲಿ ಬಳಕೆ ಮಾಡಲು ಅವಕಾಶವಿದೆ. ಗುಜರಾತ್‌ನಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಆದರೆ ನಮಗೆ ಮಾತ್ರ ಅಡ್ಡಿಪಡಿಸಲಾಗುತ್ತಿದೆ. ನಮಗೊಂದು ನ್ಯಾಯ, ಗುಜರಾತ್‌ಗೆ ಒಂದು ನ್ಯಾಯಾನಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.