ಇನ್ಮೇಲೆ ಕರ್ನಾಟಕದ 400 ಸ್ಥಳಗಳು ನೋ ಸೆಲ್ಫಿ ಝೋನ್…

0
1585

ಎಲ್ಲಿ ನೋಡಿದ್ರು ಯಾರ ಕೈಯಲ್ಲಿ ನೋಡಿದ್ರು ಮೊಬೈಲ್ ಇರುತ್ತದ್ದೆ. ನಮ್ಮ ಜನ ಮೊಬೈಲ್ ಇದೆ, ಮೊಬೈಲಿನಲ್ಲಿ ಕ್ಯಾಮೆರಾ ಇದೆ ಎಂದು ಸಿಕ್ಕ ಸಿಕ್ಕ ಕಡೆ ಸೆಲ್ಫಿ ತೆಗೆದುಕೊಳ್ಳುವುದು common ಆಗಿಬಿಟ್ಟಿದೆ. ಅದರಿಂದಾಗಿ ಪ್ರವಾಸಿ ತಾಣಗಳಲ್ಲಿ ಮೊಬೈಲ್ ಫೋನ್ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶಗಳನ್ನು ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿದೆ.

ಈ ಹಿಂದೆ ರಾಜ್ಯದ ಅನೇಕ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಲವರು ಪ್ರಾಣ ಕಳೆದುಕೊಂಡ ಕುರಿತಂತೆ ಹಾಗೂ ರಾಜ್ಯದ ಅಪಾಯಕಾರಿ ಸೆಲ್ಫಿ ಝೋನ್ ಪಟ್ಟಿಮಾಡಲಾಗಿತ್ತು. ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್ ವಲಯಗಳಾಗಿದ್ದು, ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳ ಕುರಿತಂತೆ ಇಲಾಖೆ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ಸಮುದ್ರ ತೀರ ಪ್ರದೇಶಗಳಿಗೆ ಪ್ರತಿವರ್ಷ ಅಕ್ಟೋಬರ್ನಿಂದ ಮಾಚ್ರ್‍ವರೆಗೆ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ತೆರಳುವುದರಿಂದ ಈ ವೇಳೆ ಸಮುದ್ರ ತೀರದ ಆಯ್ದ ಪ್ರದೇಶಗಳಲ್ಲಿ ಸೆಲ್ಫಿ ನಿರ್ಬಂಧದ ಜತೆಗೆ ತಿಳಿವಳಿಕೆ ಫಲಕಗಳನ್ನೂ ಅಳವಡಿಸಲು ಇಲಾಖೆ ಮುಂದಾಗಿದೆ. ಹಾಗು, ರಾಜ್ಯದ ಜಲಾಶಯಗಳು, ನದಿಗಳು, ಸಮುದ್ರ ತೀರ, ಪ್ರವಾಸಿ ತಾಣಗಳಾಗಿರುವ ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿರುವ ದೇವಸ್ಥಾನಗಳು, ಟ್ರೆಕ್ಕಿಂಗ್ ತಾಣಗಳು ಹೀಗೆ ಪ್ರವಾಸಿಗರು ತೆರಳುವ ಕೇಂದ್ರಗಳಲ್ಲಿ ಅದರಲ್ಲೂ ನೈಸರ್ಗಿಕ ತಾಣದ ಪ್ರದೇಶಗಳಲ್ಲಿ ಸೆಲ್ಫಿಯಿಂದಾಗಿ ಅಪಾಯ ಸಂಭವಿಸದಂತೆ ‘ನೋ ಸೆಲ್ಫಿ ಝೋನ್’ ಫಲಕಗಳನ್ನು ಇಲಾಖೆ ಅಳವಡಿಸುತ್ತಿದೆ.

ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುವ ಜಾಗಗಳನ್ನು ಗುರುತಿಸಲಾಗುತ್ತಿದೆ. ಈ ಫಲಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಇನ್ನೂ ಕೆಲವೆಡೆ ಚಿತ್ರಗಳೇ ಅಪಾಯವನ್ನು ಒತ್ತಿ ಹೇಳುವ ಫಲಕಗಳನ್ನೂ ಅಳವಡಿಸಲಾಗಿದೆ.ವಿಶೇಷವೆಂದರೆ, ಫೋಟೊಗಳನ್ನು ತೆಗೆಯಬಹುದಾದ ತಾಣಗಳಲ್ಲಿ ‘ಇಲ್ಲಿ ಫೋಟೊಗಳನ್ನು ತೆಗೆಯಬಹುದು’ ಎಂಬ ಫಲಕಗಳನ್ನೂ ಅಳವಡಿಸಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಗಮನ ನೀಡಲಾಗಿದೆ.