ಇಂದು ಮಧ್ಯರಾತ್ರಿಯಿಂದಲೇ 500-1000 ರೂಪಾಯಿ ನೋಟುಗಳ ಚಲಾವಣೆ ಇಲ್ಲ ಭ್ರಷ್ಟಾಚಾರ, ಕಪ್ಪುಹಣ ವಿರುದ್ಧ ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್

0
923

ದೇಶವನ್ನು ಅಭಿವೃದ್ಧಿ ಪತದಲ್ಲಿ ಮುನ್ನಡೆಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟುಗಳ ಚಲಾವಣೆ ತಡೆಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.

ಇಂದು ಮಧ್ಯರಾತ್ರಿಯಿಂದ 500-1000 ರುಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗುತ್ತಿದ್ದು, ನಾಳೆಯಿಂದ 500-1000 ನೋಟುಗಳ ಚಲಾವಣೆ ಇರುವುದಿಲ್ಲ. ಸದ್ಯ 500-1000 ನೋಟುಗಳ ಬದಲಾವಣೆಗೆ 50 ದಿನಗಳ ಕಾಲಾವಕಾಶ ನೀಡಲಾಗಿದ್ದು ಅಷ್ಟರಲ್ಲಿ ನೋಟುಗಳ ಬದಲಾಯಿಸಿಕೊಳ್ಳಬಹುದಾಗಿದೆ.

ನಾಳೆ ದೇಶಾದ್ಯಂತ ಯಾವುದೇ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಇನ್ನು ನವೆಂಬರ್ 9 ಮತ್ತು 10ರ ಮಧ್ಯರಾತ್ರಿವರೆಗೆ ಎಟಿಎಂ ಸೆಂಟರ್ ಗಳು ತೆರೆದಿರುವುದಿಲ್ಲ.

ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಕಾರ್ಡ್ ಕೊಟ್ಟು ನೋಟನ್ನು ಬದಲಿಸಿಕೊಳ್ಳಬಹುದಾಗಿದೆ.

ಸಾರ್ವಜನಿಕರಿಗೆ ಡಿಸೆಂಬರ್ 31ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅಫಿಡವಿಟ್ ಸಲ್ಲಿಸಿ 2017ರ ಮಾರ್ಚ್ ವರೆಗೂ ರಿಸರ್ವ್ ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ. ಇನ್ನು ದಿನಕ್ಕೆ ಬರೀ 2 ಸಾವಿರ ಮೊತ್ತದ ನೋಟುಗಳನ್ನು ಬದಲಿಸಿಕೊಳ್ಳಬಹುದು.
ಇನ್ನು ನೂತನವಾಗಿ 2000 ಹಾಗೂ 500 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಅವಕಾಶ ನೀಡಲಾಗಿದ್ದು ಮುಂದಿನ ದಿನಗಳಲ್ಲಿ 500 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ.

500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಬಂದ್ ಹಿನ್ನೆಲೆ 1 ರುಪಾಯಿಯಿಂದ 100 ರುಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಾಗಲಿವೆ. ನವದೆಹಲಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಹಲವು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.